ಮಂಡ್ಯ: ಮಂಡ್ಯ ಲೋಕಸಭೆ ಕ್ಷೇತ್ರದ ವಿವಿಧ ಹೆದ್ದಾರಿಗಳ ಅಭಿವೃದ್ಧಿ ಹಾಗೂ ಮಂಡ್ಯ ನಗರದ ವರ್ತುಲ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ಈ ಭೇಟಿ ಸಂದರ್ಭದಲ್ಲಿ ಕೋಲಾರ ಲೋಕಸಭೆ ಕ್ಷೇತ್ರ ಸೇರಿದಂತೆ ಕರ್ನಾಟಕದ ಹಲವು ಹೆದ್ದಾರಿ ಯೋಜನೆಗಳ ಅನುಷ್ಠಾನ ಮತ್ತು ಮಂಜೂರಾತಿಯ ಕುರಿತು ಚರ್ಚೆ ನಡೆಯಿತು. ಪ್ರಸ್ತುತ ಕಾರ್ಯಪ್ರವೃತ್ತಿಯಲ್ಲಿರುವ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಯಿತು.
“ನಮ್ಮ ಮನವಿಗೆ ಮಾನ್ಯ ಸಚಿವರು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದರು” ಎಂದು ಕುಮಾರಸ್ವಾಮಿ ಹೇಳಿದರು.
ಈ ವೇಳೆ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಹಾಗೂ ಕೋಲಾರ ಸಂಸದ ಮಲ್ಲೇಶ್ ಬಾಬು ಉಪಸ್ಥಿತರಿದ್ದರು.
ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಕೇಂದ್ರದಿಂದ ಸಹಕಾರ ನಿರೀಕ್ಷೆಯಾಗಿದೆ ಎಂದು ಕುಮಾರಸ್ವಾಮಿ ಆಶಯ ವ್ಯಕ್ತಪಡಿಸಿದರು.












