ಬೆಂಗಳೂರು:
ಹೆಚ್ಎಸ್ಆರ್ ಲೇಔಟ್ನಲ್ಲಿ ಸೂಪರ್ ಸೆಕ್ಷನ್ ರೊಬೊಟಿಕ್ ಯಂತ್ರದ ಮೂಲಕ ರಾಜಕಾಲುವೆ ಹೂಳು ತೆರವುಗೊಳಿಸುವ ಪ್ರಾಯೋಗಿಕ ಕಾರ್ಯವನ್ನು ಮುಖ್ಯ ಆಯುಕ್ತರಾದ ಮಹೇಶ್ವರ್ರಾವ್ ವೀಕ್ಷಿಸಿದರು. ಯಂತ್ರವು ಯಶಸ್ವಿಯಾಗಿ ಕಾರ್ಯನಿರ್ವಹಿಸಿದಲ್ಲಿ ಅದನ್ನು ಬಳಕೆಗೆ ತರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಹೆಚ್ಎಸ್ಆರ್ ಲೇಔಟ್ನಲ್ಲಿ ನಡೆದ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದ ಬಳಿಕ ಮಾತನಾಡಿದ ಮುಖ್ಯ ಆಯುಕ್ತರು, ‘‘ಸೂಪರ್ ಸೆಕ್ಷನ್ ರೊಬೊಟಿಕ್ ಯಂತ್ರದ ಮೂಲಕ ರಾಜಕಾಲುವೆಗಳ ಸ್ವಚ್ಛತಾ ಕಾರ್ಯವನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಈ ಯಂತ್ರವು ಸಮರ್ಪಕವಾಗಿ ಕಾರ್ಯನಿರ್ವಹಿಸಿದಲ್ಲಿ ಅದನ್ನು ಅಳವಡಿಸಿಕೊಂಡು ರಾಜಕಾಲುವೆಗಳ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಬೇಕು’’ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಹೆಚ್ಎಸ್ಆರ್ ಲೇಔಟ್ನ ರಾಜಕಾಲುವೆಯಲ್ಲಿ ಸುಮಾರು 6 ಅಡಿ ಅಗಲ ಹಾಗೂ 30 ಅಡಿ ಉದ್ದದ ಪ್ರದೇಶದಲ್ಲಿ 2 ಅಡಿಗೂ ಹೆಚ್ಚು ಪ್ರಮಾಣದ ಹೂಳು ಸಂಗ್ರಹವಾಗಿತ್ತು. ನಿನ್ನೆ ಸುಮಾರು 6 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಸಂಪೂರ್ಣ ಹೂಳನ್ನು ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಹೆಚ್ಎಸ್ಆರ್ ಲೇಔಟ್ 7ನೇ ಸೆಕ್ಟರ್ನ 17ನೇ ಕ್ರಾಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ರಾಜಕಾಲುವೆಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದರೆ ಪ್ರವಾಹವನ್ನು ತಪ್ಪಿಸಬಹುದು ಎಂದು ಮುಖ್ಯ ಆಯುಕ್ತರು ಅಭಿಪ್ರಾಯಪಟ್ಟರು. ಎಲ್ಲಿ ಹೂಳು ಸಂಗ್ರಹವಾಗಿದೆ ಎಂಬುದನ್ನು ಪರಿಶೀಲಿಸಿ ತೆರವುಗೊಳಿಸುವ ಕೆಲಸವನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

ಯಂತ್ರದ ವಿಶೇಷತೆಗಳು
ಆರ್ಯನ್ ಸಂಸ್ಥೆಯ ಸೂಪರ್ ಸೆಕ್ಷನ್ ರೊಬೊಟಿಕ್ ಯಂತ್ರವು ಮುಚ್ಚಿದ ರಾಜಕಾಲುವೆಗಳ ಒಳಭಾಗದಲ್ಲಿ ಕಾರ್ಯನಿರ್ವಹಿಸಿ ಸುಮಾರು 30 ಮೀಟರ್ ದೂರದವರೆಗೆ ಸ್ವಚ್ಛಗೊಳಿಸುವ ಸಾಮರ್ಥ್ಯ ಹೊಂದಿದೆ. ಯಂತ್ರವನ್ನು ರಾಜಕಾಲುವೆಯೊಳಗೆ ಇಳಿಸಿ, ವೈರ್ಲೆಸ್ ರಿಮೋಟ್ ಕಂಟ್ರೋಲ್ ಮೂಲಕ ನಿಯಂತ್ರಿಸಲಾಗುತ್ತದೆ. ಯಂತ್ರದಲ್ಲಿರುವ ವ್ಯವಸ್ಥೆಯ ಮೂಲಕ ಹೂಳನ್ನು ಸಡಿಲಗೊಳಿಸಿ ವ್ಯಾಕ್ಯೂಮ್ ಪೈಪ್ ಮೂಲಕ ಹೀರಿಕೊಳ್ಳಲಾಗುತ್ತದೆ. ಯಂತ್ರವು ಒಟ್ಟು 8,000 ಲೀಟರ್ ಸಾಮರ್ಥ್ಯದ ಸಂಗ್ರಹಣಾ ವ್ಯವಸ್ಥೆಯನ್ನು ಹೊಂದಿದ್ದು, ಇದರಲ್ಲಿ 6,000 ಲೀಟರ್ ಹೂಳು/ಕೆಸರು ಹಾಗೂ 2,000 ಲೀಟರ್ ನೀರನ್ನು ಪ್ರತ್ಯೇಕವಾಗಿ ಸಂಗ್ರಹಿಸಬಹುದಾಗಿದೆ.
ರಾಜಕಾಲುವೆ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ರೊಬೊಟಿಕ್ ಯಂತ್ರದೊಂದಿಗೆ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹೊಸ ಪೈಪ್ಲೈನ್ ಅಳವಡಿಕೆಗೆ ಸೂಚನೆ
ಮಳೆಗಾಲದಲ್ಲಿ ಸಿಲ್ಕ್ ಬೋರ್ಡ್ ಜಂಕ್ಷನ್ನಿಂದ ಹೆಚ್ಎಸ್ಆರ್ ಲೇಔಟ್ ಮಾರ್ಗವಾಗಿ ಉಂಟಾಗುವ ಜಲಾವೃತ ಸಮಸ್ಯೆಯನ್ನು ತಡೆಗಟ್ಟುವ ಉದ್ದೇಶದಿಂದ, ಹೊಸದಾಗಿ ಕೈಗೆತ್ತಿಕೊಳ್ಳುತ್ತಿರುವ ಮಳೆನೀರು ಚರಂಡಿ ಕಾಮಗಾರಿಯಲ್ಲಿ ಬಾಕ್ಸ್ ಡ್ರೈನ್ ನಿರ್ಮಿಸುವ ಬದಲು 3 ಮೀಟರ್ ವ್ಯಾಸದ ಪೈಪ್ಲೈನ್ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಶಾಸಕರಾದ ಸತೀಶ್ ರೆಡ್ಡಿ, ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತರಾದ ಕೆ.ಎನ್. ರಮೇಶ್, ಮುಖ್ಯ ಅಭಿಯಂತರರಾದ ಬಸವರಾಜ್ ಕಬಾಡೆ ಹಾಗೂ ಮಾಲತಿ, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.











