ಬೆಂಗಳೂರು: ರಾಜ್ಯದ ಕಾನೂನು ಸುವ್ಯವಸ್ಥೆಯು ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಟಿ ಹಾಗೂ ಸಮಗ್ರ ಅಭಿವೃದ್ಧಿಗೆ ನೇರವಾಗಿ ಸಂಬಂಧ ಹೊಂದಿದೆ. ನಿರುದ್ಯೋಗ ರಾಜ್ಯದ ದೊಡ್ಡ ಸಮಸ್ಯೆಯಾಗಿದ್ದು, ಅದನ್ನು ನಿಯಂತ್ರಿಸಲು ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಅತ್ಯಗತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಕೋರಮಂಗಲ ಕವಾಯತು ಮೈದಾನದಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಪದಕ ಪುರಸ್ಕೃತರಿಗೆ ಪದಕ ಪ್ರದಾನ ಮಾಡಿದ ಅವರು, “ಮೂರು ವರ್ಷಗಳಿಂದ ಬಾಕಿ ಉಳಿದಿದ್ದ ಮುಖ್ಯಮಂತ್ರಿಗಳ ಪದಕಗಳನ್ನು ಈ ಬಾರಿ ಒಟ್ಟಾಗಿ ವಿತರಿಸಿದ್ದೇವೆ. ಎಲ್ಲಾ ಪುರಸ್ಕೃತರಿಗೂ ಹೃತ್ಪೂರ್ವಕ ಅಭಿನಂದನೆಗಳು” ಎಂದು ಹೇಳಿದರು.
ಸೈಬರ್ ಅಪರಾಧಗಳ ನಿಯಂತ್ರಣ ಅಗತ್ಯ
ತಂತ್ರಜ್ಞಾನ வளரಿದಂತೆ ಸೈಬರ್ ಅಪರಾಧಗಳು ವ್ಯಾಪಕವಾಗಿ ಹೆಚ್ಚುತ್ತಿವೆ. ಹೀಗಾಗಿ, ಅದೇ ತಂತ್ರಜ್ಞಾನದ ಸಾಮರ್ಥ್ಯವನ್ನು ಬಳಸಿಕೊಂಡು ಈ ಅಪರಾಧಗಳನ್ನು ನಿಯಂತ್ರಿಸಬೇಕು. ರಾಜ್ಯವನ್ನು ಮಾದಕ ವಸ್ತುಗಳಿಂದ ಮುಕ್ತಗೊಳಿಸುವುದು ನನ್ನ ಗುರಿ. ಈ ಜಾಲವನ್ನು ಬೇರು ಸಮೇತ ಕಿತ್ತಾಕಲು ಪೊಲೀಸ್ ಇಲಾಖೆ ಸಂಕಲ್ಪ ಮಾಡಬೇಕು ಎಂದು ಅವರು ಹೇಳಿದರು.
ಪದಕ ಪುರಸ್ಕೃತರು ಮಾದರಿ ಆಗಬೇಕು
“ಪದಕಗಳನ್ನು ಪಡೆದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಇತರರಿಗೂ ಪ್ರೇರಣೆಯಾಗಬೇಕು. ದಕ್ಷತೆ, ಪ್ರಾಮಾಣಿಕತೆ, ಮತ್ತು ವೃತ್ತಿಪರತೆ ತೋರಿಸಿದವರೇ ಮುಖ್ಯಮಂತ್ರಿಗಳ ಪದಕಕ್ಕೆ ಅರ್ಹರಾಗುತ್ತಾರೆ” ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಅಪರಾಧ ಪ್ರಮಾಣ ಇಳಿಮುಖ
ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಅಪರಾಧ ಪ್ರಮಾಣ ಇಳಿಮುಖವಾಗುತ್ತಿದೆ. ಇದನ್ನು ಇನ್ನಷ್ಟು ಕಡಿಮೆ ಮಾಡಬೇಕಾಗಿದೆ. ರಾಜ್ಯದ ಪೊಲೀಸ್ ಇಲಾಖೆಯ ಕಾರ್ಯವೈಖರಿಯು ಜರ್ಮನಿಯ ಪ್ರಧಾನಿಗಳು, ಪ್ರತಿನಿಧಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇದು ನಮ್ಮ ಪೊಲೀಸ್ ಇಲಾಖೆಗೆ ಅಪಾರ ಗೌರವ ತಂದಿದೆ ಎಂದು ಅವರು ತಿಳಿಸಿದ್ದಾರೆ.
ಪೊಲೀಸರ ಹಿತಾಸಕ್ತಿ ನಮ್ಮ ಆದ್ಯತೆ
“ಪೊಲೀಸರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಸದಾ ಸಿದ್ಧವಾಗಿದೆ. ನಿಮ್ಮ ಪರ ನಾವಿದ್ದೇವೆ. ಆದರೆ ಕರ್ತವ್ಯಲೋಪವನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು. ಪೊಲೀಸ್ ಬೀಟ್ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸಬೇಕು” ಎಂದು ಅವರು ಪೊಲೀಸರಿಗೆ ಸಲಹೆ ನೀಡಿದರು.
ರಾಜ್ಯದಲ್ಲಿ ಗೂಂಡಾಗಿರಿ, ರೌಡಿಸಂ ಸಂಪೂರ್ಣ ನಾಶವಾಗಬೇಕು. ಸರ್ಕಾರ ಪೊಲೀಸ್ ಇಲಾಖೆಗೆ ಅಗತ್ಯ ಸಹಕಾರ ಮತ್ತು ಸೌಲಭ್ಯಗಳನ್ನು ನೀಡಲು ಬದ್ದವಾಗಿದೆ. ಬಜೆಟ್ನಲ್ಲಿ ಘೋಷಿಸಿರುವ ಎಲ್ಲ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಈ ಸಮಾರಂಭದಲ್ಲಿ ಗೃಹ ಸಚಿವ ಜಿ. ಪರಮೇಶ್ವರ್, ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾಶಂಕರ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ಮತ್ತು ಹಲವಾರು ಗಣ್ಯರು ಉಪಸ್ಥಿತರಿದ್ದರು.