ಬೆಂಗಳೂರು: ಎಂ.ಎಸ್. ರಾಮಯ್ಯ ಆಸ್ಪತ್ರೆಯ ಗೇಟ್ ಮುಂಭಾಗ ರಾತ್ರಿ 10:15 ಸುಮಾರಿಗೆ ನಡೆದ ಎರಡು ಎಲೆಕ್ಟ್ರಿಕ್ ಬೈಕ್‌ಗಳ ಮುಖಾಮುಖಿ ಡಿಕ್ಕಿಯಲ್ಲಿ ಒಬ್ಬ ಬೈಕ್ ಸವಾರ ಸಾವನ್ನಪ್ಪಿದ್ದು, ಮತ್ತೊಬ್ಬನಿಗೆ ಗಂಭೀರ ಗಾಯಗಳಾಗಿವೆ.
ಮೃತ ವ್ಯಕ್ತಿಯನ್ನು ಡೇವಿಡ್ (30) ಎಂದು ಗುರುತಿಸಲಾಗಿದೆ. ಲಾಂಡ್ರಿಯಲ್ಲಿ ಕೆಲಸ ಮಾಡುತ್ತಿದ್ದ ಡೇವಿಡ್, ಪಿಜಿಯೊಂದರಲ್ಲಿ ವಾಸವಾಗಿದ್ದರು. ಅವರ ಪತ್ನಿ ಮತ್ತು ಮಕ್ಕಳು ತಮಿಳುನಾಡಿನಲ್ಲಿದ್ದಾರೆ. ಅಪಘಾತದ ನಂತರ ಡೇವಿಡ್‌ಗೆ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬೆಳಗ್ಗೆ ಅವರು ಮೃತಪಟ್ಟಿದ್ದಾರೆ.
ಗಾಯಗೊಂಡ ವ್ಯಕ್ತಿಯನ್ನು ವಿಜಯ್ ಎಂದು ಗುರುತಿಸಲಾಗಿದ್ದು, ಇವರು ಸಂಜಯ್ ನಗರ ನಿವಾಸಿಯಾಗಿದ್ದು, ಝೋಮಟೋದಲ್ಲಿ ಕೆಲಸ ಮಾಡುತ್ತಿದ್ದರು. ವಿಜಯ್‌ಗೆ ಖಾಸಗಿ ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತದ ಸಂದರ್ಭದಲ್ಲಿ ಇಬ್ಬರು ಬೈಕ್ ಸವಾರರು ಹೆಲ್ಮೆಟ್ ಧರಿಸಿರಲಿಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ ಯಶವಂತಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರು ಘಟನೆಯ ಕುರಿತು ತನಿಖೆ ಆರಂಭಿಸಿದ್ದು, ಅಪಘಾತದ ನಿಖರ ಕಾರಣವನ್ನು ಪತ್ತೆಹಚ್ಚಲು ಪರಿಶೀಲನೆ ನಡೆಸುತ್ತಿದ್ದಾರೆ.












