ಬೆಂಗಳೂರು: ಬೆಂಗಳೂರಿನ ಬಿದರಹಳ್ಳಿಯಲ್ಲಿ ವಾಸವಾಗಿದ್ದ ಘಾನಾದ ಪ್ರಜೆ ಒವುಸು ಕಾಲಿನ್ಸ್ ಘಾನಿಯನ್ (35) ಎಂಬಾತನನ್ನು ಮಾರತ್‌ಹಳ್ಳಿ ಪೊಲೀಸರು ಡ್ರಗ್ಸ್ ಕೇಸ್‌ನಲ್ಲಿ ಬಂಧಿಸಿದ್ದಾರೆ. ಆರೋಪಿಯಿಂದ 50 ಲಕ್ಷ ರೂಪಾಯಿ ಮೌಲ್ಯದ ಎಂಡಿಎಂಎ (MDMA) ಸೇರಿದಂತೆ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೆಡಿಕಲ್ ವೀಸಾದ ಮೂಲಕ ಭಾರತಕ್ಕೆ ಆಗಮಿಸಿದ್ದ ಒವುಸು ಕಾಲಿನ್ಸ್ ಈ ಹಿಂದೆಯೂ ಡ್ರಗ್ಸ್ ಕೇಸ್‌ನಲ್ಲಿ ಬಂಧಿತನಾಗಿದ್ದ. ಮಾರತ್‌ಹಳ್ಳಿ ಪೊಲೀಸರು ಅವನನ್ನು ಅರೆಸ್ಟ್ ಮಾಡಿ, ನಂತರ ಸ್ವದೇಶಕ್ಕೆ ವಾಪಸ್ ಕಳುಹಿಸಿದ್ದರು. ಆದರೆ, ಆರೋಪಿ ಮತ್ತೆ ಭಾರತಕ್ಕೆ ಬಂದು ಡ್ರಗ್ಸ್ ವ್ಯವಹಾರದಲ್ಲಿ ತೊಡಗಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.
ಪೊಲೀಸರು ಆರೋಪಿಯಿಂದ 50 ಲಕ್ಷ ರೂಪಾಯಿ ಮೌಲ್ಯದ ಎಂಡಿಎಂಎ, 15,000 ರೂಪಾಯಿ ನಗದು, ತೂಕದ ಯಂತ್ರ, ಒಂದು ಕಾರು ಮತ್ತು ಒಂದು ಬೈಕ್‌ನ್ನು ವಶಪಡಿಸಿಕೊಂಡಿದ್ದಾರೆ.
ಮಾರತ್‌ಹಳ್ಳಿ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಡ್ರಗ್ಸ್ ಜಾಲದ ಇತರ ಸಂಪರ್ಕಗಳ ಬಗ್ಗೆ ತನಿಖೆ ಮುಂದುವರೆದಿದೆ.












