ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪ್ರಯಾಣಿಕರ ಸುರಕ್ಷತೆ ಮತ್ತು ರಸ್ತೆ ಸಂಚಾರ ನಿಯಮಗಳ ಪಾಲನೆಗೆ ಆದ್ಯತೆ ನೀಡಿ, ಚಾಲಕರಿಂದಾಗುವ ಅಪಘಾತಗಳು ಮತ್ತು ನಿಯಮ ಉಲ್ಲಂಘನೆಗಳನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಎಲ್ಲಾ ವಿಭಾಗೀಯ ಅಧಿಕಾರಿಗಳು, ಸಂಚಾರ ಅಧಿಕಾರಿಗಳು, ತಾಂತ್ರಿಕ ಅಭಿಯಂತರರು ಮತ್ತು ಘಟಕ ವ್ಯವಸ್ಥಾಪಕರೊಂದಿಗೆ ಸಭೆ ನಡೆಸಿ, ಅಪಘಾತರಹಿತ ಚಾಲನೆಗೆ ಚಾಲಕರಿಗೆ ದೈನಂದಿನ ಸೂಚನೆಗಳನ್ನು ನೀಡುವ ಬಗ್ಗೆ ಚರ್ಚಿಸಿದ್ದಾರೆ.
ಅಪಘಾತಗಳ ವಿಶ್ಲೇಷಣೆ
ಆಗಸ್ಟ್ 2025ರಲ್ಲಿ ಬಿಎಂಟಿಸಿ ಬಸ್‌ಗಳಿಗೆ ಸಂಬಂಧಿಸಿದ ಒಟ್ಟು 4 ಮಾರಣಾಂತಿಕ ಅಪಘಾತಗಳು ಸಂಭವಿಸಿವೆ. ಇವುಗಳಲ್ಲಿ ಒಂದು ವಿದ್ಯುತ್‌ಚಾಲಿತ ಬಸ್‌ಗೆ ಸಂಬಂಧಿಸಿದೆ. ಪರಿಶೀಲನೆಯ ಪ್ರಕಾರ, 3 ಪ್ರಕರಣಗಳಲ್ಲಿ ಬಿಎಂಟಿಸಿ ಚಾಲಕರ ತಪ್ಪಿಲ್ಲ, ಆದರೆ ಒಂದು ಪ್ರಕರಣದಲ್ಲಿ ಪ್ರಯಾಣಿಕರ ನಿರ್ಲಕ್ಷ್ಯ ಮತ್ತು ವಿದ್ಯುತ್ ಬಸ್ ಚಾಲಕನ ತಪ್ಪು ಕಾರಣವಾಗಿದೆ. ದ್ವಿಚಕ್ರ ವಾಹನ ಸವಾರರು ಬಸ್‌ಗಳನ್ನು ಅತಿಕ್ರಮಿಸುವಾಗ ನಿಯಂತ್ರಣ ಕಳೆದುಕೊಂಡು ಡಿಕ್ಕಿ ಹೊಡೆಯುವುದು ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ ಎಂದು ವರದಿ ತಿಳಿಸಿದೆ.
ಚಾಲಕರಿಗೆ ತರಬೇತಿ
ಸಂಚಾರ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಡಿಸೆಂಬರ್ 2023 ರಿಂದ ಬಿಎಂಟಿಸಿ ಚಾಲಕರಿಗೆ ಸುರಕ್ಷಿತ ಚಾಲನಾ ತರಬೇತಿಯನ್ನು ನೀಡುತ್ತಿದೆ. ಜುಲೈ 2025 ರವರೆಗೆ 11,835 ಚಾಲಕರು ಈ ತರಬೇತಿಯಲ್ಲಿ ಭಾಗವಹಿಸಿದ್ದಾರೆ. ಟ್ರಾಫಿಕ್ ಕಮಾಂಡ್ ಸೆಂಟರ್‌ನಲ್ಲಿ ಅಪಘಾತ ಮತ್ತು ನಿಯಮ ಉಲ್ಲಂಘನೆಯ ವೀಡಿಯೋ ತುಣುಕುಗಳನ್ನು ತೋರಿಸಿ ಚಾಲಕರಲ್ಲಿ ಜಾಗೃತಿ ಮೂಡಿಸಲಾಗಿದೆ. ವಿದ್ಯುತ್‌ಚಾಲಿತ ಬಸ್ ಚಾಲಕರಿಗೆ ವಿಶೇಷ ತರಬೇತಿಯನ್ನು ಒದಗಿಸಲಾಗಿದ್ದು, ಇದುವರೆಗೆ 1,187 ಚಾಲಕರು ತರಬೇತಿ ಪಡೆದಿದ್ದಾರೆ.
ಜಾಗೃತಿ ಕಾರ್ಯಕ್ರಮಗಳು
ಬಿಎಂಟಿಸಿ ಘಟಕಗಳಲ್ಲಿ ‘ಬದುಕು ಬದುಕಿಸು’ ಮತ್ತು ಬಸ್ ನಿಲ್ದಾಣಗಳಲ್ಲಿ ‘ಬಸ್ ಬಂತು ಬಸ್’ ಬೀದಿ ನಾಟಕಗಳ ಮೂಲಕ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಮೂಡಿಸಲಾಗುತ್ತಿದೆ. ಪ್ರತಿ ವರ್ಷ ಜನವರಿಯಲ್ಲಿ ರಸ್ತೆ ಸುರಕ್ಷತಾ ಸಪ್ತಾಹ/ಮಾಸ ಆಚರಿಸಲಾಗುತ್ತಿದೆ. ಜನವರಿ 24 ರಂದು ಚಾಲಕರ ದಿನಾಚರಣೆಯಂದು ಸುರಕ್ಷಿತ ಚಾಲನೆಗಾಗಿ ಚಾಲಕರನ್ನು ಗೌರವಿಸಲಾಗುತ್ತದೆ.
ಚಾಲಕರ ಒತ್ತಡ ನಿಯಂತ್ರಣ ಮತ್ತು ಪ್ರೋತ್ಸಾಹ
ಚಾಲಕರ ಒತ್ತಡ ಕಡಿಮೆ ಮಾಡಲು 2,000 ಅನುಸೂಚಿಗಳ ರನ್ನಿಂಗ್ ಟೈಮ್ ಅನ್ನು ಪರಿಷ್ಕರಿಸಲಾಗಿದೆ. ಅಪಘಾತರಹಿತ ಚಾಲಕರಿಗೆ ಮುಖ್ಯಮಂತ್ರಿಗಳ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ನೀಡಿ ಗೌರವಿಸಲಾಗುತ್ತಿದೆ. ಕರ್ತವ್ಯದ ವೇಳೆ ಮೊಬೈಲ್ ಬಳಕೆ ಪತ್ತೆಯಾದರೆ 15 ದಿನಗಳ ಅಮಾನತು ಮತ್ತು ಘಟಕ ವರ್ಗಾವಣೆಯಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಘಟಕ ಪ್ರವೇಶ ದ್ವಾರದಲ್ಲಿ ಮದ್ಯಪಾನ ತಪಾಸಣೆ ಮತ್ತು ಸಾರಥಿ ಗಸ್ತು ವಾಹನದಿಂದ ಮಾರ್ಗ ಮಧ್ಯದಲ್ಲಿ ಚಾಲಕರ ತಪಾಸಣೆ ನಡೆಸಲಾಗುತ್ತಿದೆ.
ಕಠಿಣ ಶಿಸ್ತು ಕ್ರಮಗಳು
ಮೊದಲ ಮಾರಣಾಂತಿಕ ಅಪಘಾತಕ್ಕೆ ಚಾಲಕರನ್ನು ಅಮಾನತುಗೊಳಿಸುವುದು ಮತ್ತು ಸೇವೆಯಿಂದ ವಜಾಗೊಳಿಸುವ ಕ್ರಮವನ್ನು ಜಾರಿಗೊಳಿಸಲಾಗಿದೆ. ಕಳೆದ ಒಂದು ವರ್ಷದಲ್ಲಿ 20 ಮಾರಣಾಂತಿಕ ಅಪಘಾತ ಪ್ರಕರಣಗಳಲ್ಲಿ 20 ಚಾಲಕರನ್ನು ಅಮಾನತುಗೊಳಿಸಲಾಗಿದೆ. ತಪ್ಪಿತಸ್ಥ ಚಾಲಕರಿಗೆ ವಡ್ಡರಹಳ್ಳಿ ತರಬೇತಿ ಕೇಂದ್ರದಲ್ಲಿ ವಿಶೇಷ ತರಬೇತಿಯನ್ನು ಕಡ್ಡಾಯಗೊಳಿಸಲಾಗಿದೆ.
ನಿರಂತರ ಮೇಲ್ವಿಚಾರಣೆ
ವ್ಯವಸ್ಥಾಪಕ ನಿರ್ದೇಶಕರ ಸೂಚನೆಯಂತೆ, ಎಲ್ಲಾ ಘಟಕಗಳಲ್ಲಿ ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ಸಭೆ ನಡೆಸಿ, ಚಾಲಕರಿಗೆ ಸುರಕ್ಷಿತ ಚಾಲನೆ ಮತ್ತು ನಿಯಮ ಪಾಲನೆಯ ಕುರಿತು ಸೂಚನೆಗಳನ್ನು ನೀಡಲಾಗುತ್ತಿದೆ. ವಲಯವಾರು ವಾರಕ್ಕೆ ಕನಿಷ್ಠ ಎರಡು ಬಾರಿ ಚಾಲನಾ ತರಬೇತಿಯನ್ನು ಏರ್ಪಡಿಸಲಾಗುತ್ತಿದೆ.
ಮಾಧ್ಯಮಗಳಿಗೆ ಮನವಿ
ಬಿಎಂಟಿಸಿ ಬಸ್‌ಗಳು ಮಾರಣಾಂತಿಕ ಅಪಘಾತಗಳಲ್ಲಿ ಭಾಗಿಯಾದಾಗ, ಚಾಲಕರ ತಪ್ಪಿಲ್ಲದಿದ್ದರೂ “ಕಿಲ್ಲರ್ ಬಿಎಂಟಿಸಿ” ಎಂಬಂತಹ ತಪ್ಪು ಶೀರ್ಷಿಕೆಗಳೊಂದಿಗೆ ವರದಿಗಳು ಪ್ರಕಟವಾಗುತ್ತಿರುವುದು ವಿಷಾದಕರವಾಗಿದೆ. ಆಗಸ್ಟ್ 2025ರ ಪರಿಶೀಲನೆಯ ಪ್ರಕಾರ, 4 ಅಪಘಾತಗಳಲ್ಲಿ 3ರಲ್ಲಿ ಬಿಎಂಟಿಸಿ ಚಾಲಕರ ತಪ್ಪಿಲ್ಲ. ಸಂಸ್ಥೆಯು ವಾಸ್ತವಾಧಾರಿತ ಮಾಹಿತಿಯನ್ನು ಪ್ರಕಟಿಸುವಂತೆ ಮಾಧ್ಯಮಗಳನ್ನು ಕೋರಿದೆ.
ಸಾರ್ವಜನಿಕರಿಗೆ ಮನವಿ
ಪ್ರಯಾಣಿಕರು ಮತ್ತು ದ್ವಿಚಕ್ರ ವಾಹನ ಸವಾರರು ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ, ಭಾರಿ ವಾಹನಗಳ ನಡುವೆ ಚಲಿಸುವಾಗ ಎಚ್ಚರಿಕೆಯಿಂದ ಚಾಲನೆ ಮಾಡುವಂತೆ ಮತ್ತು ಬಸ್‌ಗಳನ್ನು ಎಡಭಾಗದಿಂದ ಅತಿಕ್ರಮಿಸದಂತೆ ಬಿಎಂಟಿಸಿ ಮನವಿ ಮಾಡಿದೆ.
ಬಿಎಂಟಿಸಿಯ ಈ ಕ್ರಮಗಳು ರಸ್ತೆ ಸುರಕ್ಷತೆಯನ್ನು ಹೆಚ್ಚಿಸಿ, ಪ್ರಯಾಣಿಕರ ಜೀವ ರಕ್ಷಣೆಗೆ ಆದ್ಯತೆ ನೀಡುವ ಗುರಿಯನ್ನು ಹೊಂದಿವೆ.












