ಬೆಂಗಳೂರು, ಆಗಸ್ಟ್ 7: ಸಾರ್ವಜನಿಕ ರಸ್ತೆ, ಪಾದಚಾರಿ ಮಾರ್ಗ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ದೀರ್ಘಕಾಲದಿಂದ ಅನಾಥವಾಗಿ ನಿಲ್ಲಿಸಿರುವ ವಾಹನಗಳ ವಿರುದ್ಧ ಬೆಂಗಳೂರು ಪೂರ್ವ ನಗರ ಪಾಲಿಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಈಗಾಗಲೇ ವಶಪಡಿಸಿಕೊಂಡಿರುವ ವಾಹನಗಳ ಮಾಲೀಕರಿಗೆ 15 ದಿನಗಳ ಕಾಲಾವಕಾಶ ನೀಡಿದೆ.
ನಗರದ ರಸ್ತೆಗಳಲ್ಲಿ ಸಂಚಾರ ಸುಗಮಗೊಳಿಸುವುದು, ಪಾದಚಾರಿಗಳ ಸುರಕ್ಷತೆ ಕಾಪಾಡುವುದು ಹಾಗೂ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛ ಮತ್ತು ಅತಿಕ್ರಮಣಮುಕ್ತವಾಗಿಡುವ ಉದ್ದೇಶದಿಂದ ಪಾಲಿಕೆ ಬೀಡಾಡಿ ವಾಹನಗಳ ತೆರವು ಕಾರ್ಯಾಚರಣೆ ನಡೆಸುತ್ತಿದೆ. ದೀರ್ಘಕಾಲದಿಂದ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿರುವ ಇಂತಹ ವಾಹನಗಳಿಂದ ಸಂಚಾರಕ್ಕೆ ಅಡಚಣೆ ಉಂಟಾಗುವುದರ ಜತೆಗೆ ಸಾರ್ವಜನಿಕ ಸುರಕ್ಷತೆ ಮತ್ತು ನಗರ ಸೌಂದರ್ಯಕ್ಕೂ ಧಕ್ಕೆಯಾಗುತ್ತಿದೆ ಎಂದು ಪಾಲಿಕೆ ತಿಳಿಸಿದೆ.
ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕ ರಸ್ತೆ, ಬೀದಿ, ಪಾದಚಾರಿ ಮಾರ್ಗ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಅನಾಥವಾಗಿ ಬಿಟ್ಟಿದ್ದ ವಾಹನಗಳನ್ನು ಗುರುತಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಾಯ್ದೆ, 2024ರ ಸೆಕ್ಷನ್ 324ರ ಅನ್ವಯ ತೆರವುಗೊಳಿಸಿ ಪಾಲಿಕೆಯ ವಶಕ್ಕೆ ಪಡೆಯಲಾಗಿದೆ ಎಂದು ಆಯುಕ್ತ ಡಿ.ಎಸ್. ರಮೇಶ್ ತಿಳಿಸಿದ್ದಾರೆ.

15 ದಿನಗಳಲ್ಲಿ ದಾಖಲೆ ಸಲ್ಲಿಸಿ
ಪಾಲಿಕೆಯ ವಶದಲ್ಲಿರುವ ವಾಹನಗಳ ಮಾಲೀಕರು ಅಥವಾ ಕಾನೂನುಬದ್ಧ ಹಕ್ಕುದಾರರು ಪ್ರಕಟಣೆ ಹೊರಡಿಸಿದ ದಿನಾಂಕದಿಂದ 15 ದಿನಗಳೊಳಗೆ ವಾಹನದ ಮಾಲೀಕತ್ವವನ್ನು ಸಾಬೀತುಪಡಿಸುವ ದಾಖಲೆಗಳೊಂದಿಗೆ ಸಂಪರ್ಕಾಧಿಕಾರಿಗಳನ್ನು ಸಂಪರ್ಕಿಸಬೇಕು. ಅನ್ವಯವಾಗುವ ಶುಲ್ಕ ಮತ್ತು ದಂಡವನ್ನು ಪಾವತಿಸಿದ ಬಳಿಕ ವಾಹನವನ್ನು ಬಿಡುಗಡೆ ಮಾಡಿಕೊಳ್ಳಲು ಅವಕಾಶವಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ವಶಪಡಿಸಿಕೊಂಡಿರುವ ವಾಹನಗಳ ವಿವರ
ಪಾಲಿಕೆ ವಶಕ್ಕೆ ಪಡೆದಿರುವ ವಾಹನಗಳಲ್ಲಿ:
- KA-51-B-9713 – ಮಾರುತಿ ಸ್ವಿಫ್ಟ್ ಡಿಜೈರ್ ಟೂರ್
- ಸಂಖ್ಯೆ ಫಲಕವಿಲ್ಲದ – ಟಾಟಾ ಇಂಡಿಕಾ ಕಾರು
- KA-51-ME-6087 – ಮಹೀಂದ್ರ ಎಲೆಕ್ಟ್ರಿಕ್
- DL-3C-BM-0321 – ಕಾರು
- KA-11-N-4549 – ಕಾರು
- KA-03-AF-1617 – ಟಾಟಾ ಇಂಡಿಕಾ ಕಾರು
ಈ ಅಧಿಕಾರಿಗಳನ್ನು ಸಂಪರ್ಕಿಸಿ
ವಾಹನಗಳ ಮಾಲೀಕರು ಅಥವಾ ಕಾನೂನುಬದ್ಧ ಹಕ್ಕುದಾರರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಅಧಿಕಾರಿಗಳನ್ನು ಸಂಪರ್ಕಿಸಬಹುದು:
ಶ್ರೀ ಕುಮಾರ್ ಸಿಂಗ್, ಎ.ಎಸ್.ಐ.
ಮೊಬೈಲ್: 9738779263
ಶ್ರೀ ಧನನಾಯಕ್, ಡಿಜಿಎಂ
ಮೊಬೈಲ್: 9448290730

15 ದಿನಗಳ ಬಳಿಕ ಸಾರ್ವಜನಿಕ ಹರಾಜು
ನಿಗದಿತ 15 ದಿನಗಳ ಅವಧಿಯಲ್ಲಿ ವಾಹನದ ಮಾಲೀಕರು ತಮ್ಮ ಹಕ್ಕನ್ನು ಸಾಬೀತುಪಡಿಸಿ ವಾಹನವನ್ನು ಬಿಡುಗಡೆ ಮಾಡಿಸಿಕೊಳ್ಳದಿದ್ದರೆ, ವಶಪಡಿಸಿಕೊಂಡಿರುವ ವಾಹನಗಳನ್ನು ಮುಂದಿನ ಯಾವುದೇ ಸೂಚನೆ ನೀಡದೆ ಸಾರ್ವಜನಿಕ ಹರಾಜಿನ ಮೂಲಕ ವಿಲೇವಾರಿ ಮಾಡಲಾಗುವುದು ಎಂದು ಪಾಲಿಕೆ ಎಚ್ಚರಿಕೆ ನೀಡಿದೆ.
ಹರಾಜು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸಂಬಂಧಪಟ್ಟ ವಾಹನಗಳ ಮೇಲೆ ಯಾವುದೇ ಹಕ್ಕು, ಆಕ್ಷೇಪಣೆ ಅಥವಾ ಬೇಡಿಕೆಯನ್ನು ಪರಿಗಣಿಸಲಾಗುವುದಿಲ್ಲ ಎಂದು ಆಯುಕ್ತ ಡಿ.ಎಸ್. ರಮೇಶ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕ ರಸ್ತೆ, ಪಾದಚಾರಿ ಮಾರ್ಗ ಹಾಗೂ ಇತರ ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಣ ಮತ್ತು ಬೀಡಾಡಿ ವಾಹನಗಳಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಇಂತಹ ವಿಶೇಷ ಕಾರ್ಯಾಚರಣೆಗಳನ್ನು ನಿರಂತರವಾಗಿ ಮುಂದುವರಿಸಲಾಗುವುದು. ಸಾರ್ವಜನಿಕರು ತಮ್ಮ ವಾಹನಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ದೀರ್ಘಕಾಲ ನಿಲ್ಲಿಸದೆ, ನಗರ ಪಾಲಿಕೆ ನಿಯಮಗಳನ್ನು ಪಾಲಿಸುವಂತೆ ಆಯುಕ್ತರು ಮನವಿ ಮಾಡಿದ್ದಾರೆ.











