ಬೆಂಗಳೂರು:ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಸೆಪ್ಟೆಂಬರ್ 26ರಿಂದ 30ರವರೆಗೆ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಐದು ದಿನಗಳ ಕಾಲ ‘ಕರ್ನಾಟಕ ಪರ್ವ-2026’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದರು.
ಇಂದು ಅಲ್ಪಸಂಖ್ಯಾತರ ನಿರ್ದೇಶನಾಲಯದ ಮೌಲಾನಾ ಅಜಾದ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಸೆಪ್ಟೆಂಬರ್ 26ರಂದು ಬೆಳಿಗ್ಗೆ 11.00 ಗಂಟೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮಕ್ಕೆ ಸಚಿವರು, ಶಾಸಕರು ಹಾಗೂ ನಿಗಮ-ಮಂಡಳಿಗಳ ಅಧ್ಯಕ್ಷರು ಉಪಸ್ಥಿತರಿರಲಿದ್ದಾರೆ.
ಅಲ್ಪಸಂಖ್ಯಾತ ಸಮುದಾಯದ ಕುಶಲಕರ್ಮಿಗಳ ಕಲೆ, ಕೌಶಲ್ಯ, ಕರಕುಶಲ ಉತ್ಪನ್ನಗಳು ಮತ್ತು ಉದ್ಯಮಶೀಲತೆಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧ ಭಾಗಗಳ ಅಲ್ಪಸಂಖ್ಯಾತ ಕುಶಲಕರ್ಮಿಗಳು ತಯಾರಿಸಿದ ವಿಶಿಷ್ಟ ಕರಕುಶಲ ಮತ್ತು ಸಾಂಪ್ರದಾಯಿಕ ಉತ್ಪನ್ನಗಳನ್ನು ಒಂದೇ ವೇದಿಕೆಯಲ್ಲಿ ಪ್ರದರ್ಶಿಸಿ, ಅವುಗಳಿಗೆ ವಿಶಾಲ ಮಾರುಕಟ್ಟೆ ಮತ್ತು ನೇರ ಗ್ರಾಹಕ ಸಂಪರ್ಕ ಕಲ್ಪಿಸುವುದು ಮುಖ್ಯ ಗುರಿ. ಈ ನಿಟ್ಟಿನಲ್ಲಿ ಸುಮಾರು 180ಕ್ಕೂ ಹೆಚ್ಚು ಸ್ಟಾಲ್‌ಗಳನ್ನು ಆಯೋಜಿಸಲಾಗುವುದು ಎಂದು ಸಚಿವರು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಕುಶಲಕರ್ಮಿಗಳಿಗೆ ಇ-ಕಾಮರ್ಸ್, ಡಿಜಿಟಲ್ ಮಾರ್ಕೆಟಿಂಗ್, ಆಧುನಿಕ ವ್ಯಾಪಾರ ಪದ್ಧತಿಗಳು, ಉದ್ಯಮ ಸಂಪರ್ಕ, ಮಾರುಕಟ್ಟೆ ವಿಸ್ತರಣೆ ಮತ್ತು ವ್ಯವಹಾರ ಜಾಲಬಂಧನ ಕುರಿತು ಜ್ಞಾನವರ್ಧಕ ತರಬೇತಿ ಹಾಗೂ ಸಂವಾದ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಕರಕುಶಲ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ಜೊತೆಗೆ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವೈವಿಧ್ಯಮಯ ಆಹಾರಮೇಳವನ್ನೂ ಆಯೋಜಿಸಲಾಗುವುದು. ರಾಜ್ಯದ ಕಲೆ, ಸಂಸ್ಕೃತಿ ಮತ್ತು ಆಹಾರ ಪರಂಪರೆಯ ವೈವಿಧ್ಯತೆಯನ್ನು ಸಾರ್ವಜನಿಕರಿಗೆ ಒಂದೇ ವೇದಿಕೆಯಲ್ಲಿ ಪರಿಚಯಿಸಲಾಗುವುದು ಎಂದು ಅವರು ಹೇಳಿದರು.
ಕುಶಲಕರ್ಮಿಗಳ ಆರ್ಥಿಕ ಸ್ವಾವಲಂಬನೆ ಹೆಚ್ಚಿಸುವುದು, ಅವರಲ್ಲಿ ಉದ್ಯಮಶೀಲತೆಯನ್ನು ಬೆಳೆಸುವುದು, ಸಾಂಪ್ರದಾಯಿಕ ಕಲೆ-ಕೌಶಲ್ಯಗಳನ್ನು ಮುಂದಿನ ಪೀಳಿಗೆಗೆ ಉಳಿಸುವುದು ಹಾಗೂ ಅವರ ಉತ್ಪನ್ನಗಳಿಗೆ ಸುಸ್ಥಿರ ಮಾರುಕಟ್ಟೆ ಸೃಷ್ಟಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶಗಳಾಗಿವೆ. ‘ಕಲೆ ಉಳಿಯಲಿ, ಕೌಶಲ್ಯ ಬೆಳೆಯಲಿ, ಕುಶಲಕರ್ಮಿಗಳ ಬದುಕು ಸಮೃದ್ಧವಾಗಲಿ’ ಎಂಬ ಆಶಯದೊಂದಿಗೆ ಮತ್ತು ‘ಕರ್ನಾಟಕ ಪರ್ವ ಸ್ವಾವಲಂಬನೆಯ ದಾರಿಯಲಿ’ ಎಂಬ ಸಂದೇಶದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ರಾಜ್ಯದ ಸಾರ್ವಜನಿಕರು, ಕಲಾಸಕ್ತರು, ಉದ್ಯಮಿಗಳು, ವ್ಯಾಪಾರಸ್ಥರು ಮತ್ತು ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕುಶಲಕರ್ಮಿಗಳ ಉತ್ಪನ್ನಗಳನ್ನು ವೀಕ್ಷಿಸಿ, ಖರೀದಿಸುವ ಮೂಲಕ ಅವರನ್ನು ಪ್ರೋತ್ಸಾಹಿಸಬೇಕು ಎಂದು ಸಚಿವ ಯು.ಟಿ. ಖಾದರ್ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಮನೋಜ್ ಜೈನ್, ನಿರ್ದೇಶಕರಾದ ಶ್ರೀಮತಿ ಯಾಸ್ಮಿನ್ ವಾಲಿಕಾರ್, ಜಂಟಿ ನಿರ್ದೇಶಕರಾದ ಪುಂಡಲೀಕ ಅನವಾಲ್ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶೇಖ್ ಲತೀಫ್ ಉಪಸ್ಥಿತರಿದ್ದರು.











