ಸಕಲೇಶಪುರ: ಕಸ್ತೂರಿ ರಂಗನ್ ವರದಿ ಜಾರಿ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ರಾಜ್ಯದ ನಿಲುವು ತಿಳಿಸುವ ಮುನ್ನ ರೈತರು, ಅರಣ್ಯ ಪ್ರದೇಶದ ಸುತ್ತಮುತ್ತ ವಾಸಿಸುವವರು ಹಾಗೂ ಸ್ಥಳೀಯ ಜನರ ಅಭಿಪ್ರಾಯವನ್ನು ನೇರವಾಗಿ ಪಡೆದು, ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ವಿಸ್ತೃತ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಭಾನುವಾರ ಸಕಲೇಶಪುರದ ಎಪಿಎಂಸಿ ಯಾರ್ಡ್ ಅವರಣದಲ್ಲಿ ನಡೆದ ಕಸ್ತೂರಿ ರಂಗನ್ ವರದಿ ಕುರಿತ ಸಾರ್ವಜನಿಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರ್ಕಾರ ಈ ಹಿಂದೆಯೇ ತಿರಸ್ಕರಿಸಿತ್ತು. ಆದರೆ ಕೇಂದ್ರ ಸರ್ಕಾರ ಮತ್ತೆ ರಾಜ್ಯದ ಅಭಿಪ್ರಾಯವನ್ನು ಸೆಪ್ಟೆಂಬರ್ 27ರೊಳಗೆ ತಿಳಿಸುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಈ ಕುರಿತು ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರೊಂದಿಗೆ ಚರ್ಚಿಸಲಾಗುತ್ತಿದೆ ಎಂದು ತಿಳಿಸಿದರು.
“ವಿರೋಧಪಕ್ಷದವರಿಗೆ ರಾಜಕಾರಣ ಮುಖ್ಯವಾಗಿರಬಹುದು; ನಮಗೆ ಜನರ ಬದುಕು ಮುಖ್ಯ” ಎಂದು ಅವರು ಹೇಳಿದರು.
ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರ್ಕಾರ ಹಿಂದಿನಿಂದಲೂ ವಿರೋಧಿಸುತ್ತಾ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿಯೂ ರಾಜ್ಯದ ವತಿಯಿಂದ ವರದಿಯನ್ನು ತಿರಸ್ಕರಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರ ಮತ್ತೆ ಈ ವಿಚಾರವನ್ನು ರಾಜ್ಯಕ್ಕೆ ಕಳುಹಿಸಿರುವ ಹಿನ್ನೆಲೆಯಲ್ಲಿ ಜನರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
ವರದಿಯಿಂದ ಉಂಟಾಗಬಹುದಾದ ಪರಿಣಾಮಗಳು, ಜನರ ಬದುಕಿನ ಮೇಲೆ ಬೀರುವ ಪರಿಣಾಮ, ರೈತರ ಸಮಸ್ಯೆಗಳು ಹಾಗೂ ಅರಣ್ಯ ಪ್ರದೇಶದ ಸುತ್ತಮುತ್ತ ವಾಸಿಸುವ ಜನರ ಆತಂಕಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಅವರು ಹೇಳಿದರು.
ಕಸ್ತೂರಿ ರಂಗನ್ ವರದಿ ಸೇರಿದಂತೆ ಜನರಿಗೆ ಸಂಬಂಧಿಸಿದ ಪ್ರಮುಖ ವಿಚಾರಗಳ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆಯಲಾಗಿದೆ. ಅಧಿವೇಶನದಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರಿಗೆ ವಿಸ್ತೃತವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ನೀಡಲಾಗುವುದು ಎಂದು ಅವರು ತಿಳಿಸಿದರು.
“ಜನರ ಭಾವನೆ ಏನು, ರೈತರ ಭಾವನೆ ಏನು, ಅರಣ್ಯದ ಪಕ್ಕದಲ್ಲಿ ವಾಸಿಸುವ ಜನರ ಪರಿಸ್ಥಿತಿ ಏನು ಎಂಬುದನ್ನು ತಿಳಿದುಕೊಂಡು, ನಂತರ ಸದನದಲ್ಲಿ ಚರ್ಚೆ ಮಾಡುತ್ತೇವೆ” ಎಂದು ಮುಖ್ಯಮಂತ್ರಿ ಹೇಳಿದರು.
ಈಗಾಗಲೇ ಉಡುಪಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಜನರ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ಈಗ ಹಾಸನ ಜಿಲ್ಲೆಯ ಸಕಲೇಶಪುರ ಭಾಗಕ್ಕೆ ಭೇಟಿ ನೀಡಲಾಗಿದೆ. ಮುಂದಿನ ಹಂತದಲ್ಲಿ ಸಂಬಂಧಿತ ಪ್ರದೇಶಗಳ ಜನರ ಸಮಸ್ಯೆಗಳನ್ನು ಆಲಿಸಿ ಸರ್ಕಾರದ ನಿರ್ಧಾರಕ್ಕೆ ಅವುಗಳನ್ನು ಪರಿಗಣಿಸಲಾಗುವುದು ಎಂದರು.
ವಿಶೇಷ ಅಧಿವೇಶನದಲ್ಲಿ ಬರ ಹಾಗೂ ರೈತರ ಸಮಸ್ಯೆಗಳ ಕುರಿತು ಚರ್ಚೆಗೆ ಅವಕಾಶವಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ರೈತರಿಗೆ ಸಂಬಂಧಿಸಿದ ವಿಚಾರಗಳ ಕುರಿತು ಸದನದಲ್ಲಿ ಈಗಾಗಲೇ ಅಗತ್ಯ ಅವಕಾಶಗಳನ್ನು ನೀಡಲಾಗಿದೆ ಎಂದು ಹೇಳಿದರು. ಪ್ರಶ್ನೋತ್ತರ, ಗಮನ ಸೆಳೆಯುವ ಸೂಚನೆ ಸೇರಿದಂತೆ ಸಾಮಾನ್ಯ ಕಲಾಪಗಳಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ನಿಗದಿತ ಸಮಯದಲ್ಲಿ ನಡೆಸಲಾಗಿದೆ. ವಿಶೇಷ ಅಧಿವೇಶನದ ಉದ್ದೇಶಕ್ಕೆ ಅನುಗುಣವಾಗಿ ಸದಸ್ಯರಿಗೆ ಚರ್ಚೆಗೆ ಅವಕಾಶ ನೀಡಲಾಗುವುದು ಎಂದರು.
ಸರ್ಕಾರ ಮತ್ತು ಜನರ ನಡುವೆ ಇರುವ ಅಂತರವನ್ನು ಕಡಿಮೆ ಮಾಡುವುದು ತಮ್ಮ ಉದ್ದೇಶ ಎಂದು ಹೇಳಿದ ಮುಖ್ಯಮಂತ್ರಿ, “ಸರ್ಕಾರಕ್ಕೂ ಜನರಿಗೂ ಮಧ್ಯೆ ಇರುವ ಗೋಡೆಯನ್ನು ಒಡೆಯಬೇಕು. ಎಷ್ಟು ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವೋ ಅಷ್ಟು ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ಮಾಡುತ್ತೇವೆ” ಎಂದರು.
ಪ್ರತಿ ಶನಿವಾರ ಸಚಿವರು ಹಾಗೂ ಶಾಸಕರು ಕಡ್ಡಾಯವಾಗಿ ಜನರ ಮಧ್ಯೆ ತೆರಳಿ ಅಹವಾಲು ಸ್ವೀಕರಿಸುವಂತೆ ಸೂಚಿಸಲಾಗಿದೆ. ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸಹಕಾರ ನೀಡುವಂತೆ ಕ್ರಮ ಕೈಗೊಳ್ಳಲಾಗಿದೆ. ಈ ಉದ್ದೇಶದಿಂದ ‘ಪ್ರಜಾಸೇವಾ’ ವ್ಯವಸ್ಥೆಯನ್ನೂ ಆರಂಭಿಸಲಾಗಿದ್ದು, ಹಂತ ಹಂತವಾಗಿ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಸಕಲೇಶಪುರ ಭಾಗದಲ್ಲಿ ಕಾಡಾನೆಗಳ ಹಾವಳಿ ತೀವ್ರವಾಗಿದ್ದು, ಕಳೆದ ಒಂದು ದಶಕದಿಂದ ಈ ಸಮಸ್ಯೆ ಮುಂದುವರಿದಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. ಕಸ್ತೂರಿ ರಂಗನ್ ವರದಿಯ ಜೊತೆಗೆ ಕಾಡಾನೆಗಳ ಹಾವಳಿ, ರೈತರ ಸಮಸ್ಯೆಗಳು ಹಾಗೂ ಅರಣ್ಯ ಪ್ರದೇಶದ ಸುತ್ತಮುತ್ತ ವಾಸಿಸುವ ಜನರ ಸಮಸ್ಯೆಗಳ ಬಗ್ಗೆಯೂ ಸಮಗ್ರವಾಗಿ ಚರ್ಚಿಸಲಾಗುವುದು ಎಂದರು.
“ನಾಳೆ ಶಾಸಕರು ಬಂದು ಮಾತನಾಡಲಿ, ಸಚಿವರು ಮಾತನಾಡಲಿ, ಎಲ್ಲರೂ ಮಾತನಾಡಲಿ. ಜನರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತೇವೆ” ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಶಿವಲಿಂಗೆಗೌಡ, ಸಂಸದರಾದ ಶ್ರೇಯಸ್ ಪಟೇಲ್, ಜಿ.ಸಿ. ಚಂದ್ರಶೇಖರ್, ಶಾಸಕರಾದ ಸಿಮೆಂಟ್ ಮಂಜು, ಟಿ.ಡಿ. ರಾಜೇಗೌಡ, ಸಿಎಂ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ, ಬಿಡಿಎ ಅಧ್ಯಕ್ಷರಾದ ಎನ್.ಎ. ಹ್ಯಾರಿಸ್, ಜಿಲ್ಲಾಧಿಕಾರಿ ಲತಾ ಕುಮಾರಿ, ಮಾಜಿ ಶಾಸಕರಾದ ಹೆಚ್.ಕೆ. ಕುಮಾರಸ್ವಾಮಿ, ಬಿ.ಆರ್. ಗುರುದೇವ್, ಹೆಚ್.ಎಂ. ವಿಶ್ವನಾಥ್, ಗೋಪಾಲಸ್ವಾಮಿ, ಕಾಂಗ್ರೆಸ್ ಮುಖಂಡರಾದ ಮುರಳಿ ಮೋಹನ್ ಮತ್ತಿತರರು ಉಪಸ್ಥಿತರಿದ್ದರು.











