ಮಂಗಳೂರು: ಬಹುಕಾಲದಿಂದ ನಿರೀಕ್ಷೆಯಲ್ಲಿದ್ದ ತುಳು ಭಾಷೆಗೆ ಕರ್ನಾಟಕ ರಾಜ್ಯದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ ನೀಡುವ ಮಹತ್ವದ ತೀರ್ಮಾನವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಮಂಗಳೂರಿನಲ್ಲಿ ಶುಕ್ರವಾರ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಜೊತೆಗೆ ಕರಾವಳಿ ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ 2026 ಸೇರಿದಂತೆ ಒಟ್ಟು 32,611 ಕೋಟಿ ರೂಪಾಯಿ ವೆಚ್ಚದ ವಿವಿಧ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.
ಸಭೆಯ ನಂತರ ಪತ್ರಿಕಾಗೋಷ್ಠಿ ನಡೆಸಿದ ಸಿಎಂ ಡಿ.ಕೆ. ಶಿವಕುಮಾರ್, “ನಮ್ಮ ಸರ್ಕಾರ ಜನರ ಭಾವನೆಯನ್ನು ಗೌರವಿಸಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತುಳು ಭಾಷೆಯನ್ನು ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಿಸುವ ಬೇಡಿಕೆ ಬಹಳ ದಿನಗಳಿಂದ ಇತ್ತು. ಹಿಂದಿನವರು ಏಕೆ ತೀರ್ಮಾನ ತೆಗೆದುಕೊಳ್ಳಲಿಲ್ಲ ಎಂದು ಚರ್ಚಿಸುವುದಿಲ್ಲ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ” ಎಂದು ಹೇಳಿದರು. ತುಳು ಭಾಷೆಯನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸೀಮಿತವಾಗಿ ರಾಜ್ಯದ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಮಾಜಿ ಸಚಿವ ರಮಾನಾಥ ರೈ ಅವರು ತುಳು ಭಾಷೆಗೆ ಎರಡನೇ ಹೆಚ್ಚುವರಿ ಭಾಷೆಯ ಸ್ಥಾನಮಾನ ನೀಡುವ ಬೇಡಿಕೆಯನ್ನು ಮೊದಲು ಮುಂದಿಟ್ಟಿದ್ದರು ಎಂದು ಸ್ಮರಿಸಿದ ಸಿಎಂ, ಸಚಿವ ಯು.ಟಿ. ಖಾದರ್, ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ ಹಲವು ಜನಪ್ರತಿನಿಧಿಗಳು ಒಟ್ಟಾಗಿ ಒತ್ತಡ ಹೇರಿದ್ದರು ಎಂದು ತಿಳಿಸಿದರು. ತುಳು ಭಾಷೆಗೆ ಈ ಸ್ಥಾನಮಾನ ದೊರಕಿಸುವಲ್ಲಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
32,611 ಕೋಟಿ ರೂಪಾಯಿ ಯೋಜನೆಗಳಿಗೆ ಅನುಮೋದನೆ
ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದ ಯೋಜನೆಗಳಲ್ಲಿ 16,000 ಕೋಟಿ ರೂಪಾಯಿ ವೆಚ್ಚದ ಗ್ರಾಮೀಣ ಸಂಪರ್ಕ ರಸ್ತೆ ಮತ್ತು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಪ್ರಮುಖವಾಗಿದೆ. ಉಳಿದ ಮೊತ್ತ ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಸಂಬಂಧಿಸಿದೆ. 150 ಎಕರೆ ಪ್ರದೇಶದಲ್ಲಿ ಮೀನುಗಾರಿಕೆ ಪಾರ್ಕ್ ನಿರ್ಮಾಣ, ಪುತ್ತೂರಿನಲ್ಲಿ 549 ಕೋಟಿ ರೂಪಾಯಿ ವೆಚ್ಚದ ವೈದ್ಯಕೀಯ ಕಾಲೇಜು ಸ್ಥಾಪನೆ ಸೇರಿದಂತೆ ಹಲವು ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.
ಮೀನುಗಾರಿಕೆ ಮತ್ತು ನೀಲಿ ಆರ್ಥಿಕತೆಗೆ ಸಂಬಂಧಿಸಿದಂತೆ Fisheries, Blue Economy University ಸ್ಥಾಪಿಸಲಾಗುವುದು. ಪ್ರಸ್ತುತ ಮೀನುಗಾರಿಕಾ ಕಾಲೇಜಿನ ವಿದ್ಯಾರ್ಥಿ ಪ್ರವೇಶವನ್ನು 60ರಿಂದ 200 ಸೀಟುಗಳಿಗೆ ಹೆಚ್ಚಿಸಲಾಗುವುದು ಎಂದು ಸಿಎಂ ತಿಳಿಸಿದರು.
ಕರಾವಳಿ ಮಲೆನಾಡು ಪ್ರವಾಸೋದ್ಯಮ ನೀತಿ 2026
ಕರಾವಳಿ ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ 2026ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದು ಈವರೆಗಿನ ಎಲ್ಲಾ ನೀತಿಗಳಿಗಿಂತ ಭಿನ್ನವಾಗಿದ್ದು, ಹೂಡಿಕೆದಾರರಿಗೆ ಹೆಚ್ಚಿನ ಸೌಲಭ್ಯ ಮತ್ತು ಸಾಲ ಮರುಪಾವತಿಗೆ ಹೆಚ್ಚುವರಿ ಅವಕಾಶ ನೀಡಲಾಗುವುದು. ಮಲೆನಾಡು ಸೇರಿದಂತೆ ಕರಾವಳಿ ಪ್ರದೇಶದಲ್ಲಿ ಪ್ರವಾಸೋದ್ಯಮ ಯೋಜನೆಗಳನ್ನು ಮೂಲಸೌಕರ್ಯ ಯೋಜನೆಗಳೆಂದು ಪರಿಗಣಿಸಿ ಹಲವು ಪ್ರೋತ್ಸಾಹಕಗಳನ್ನು ನೀಡಲು ಯೋಜಿಸಲಾಗಿದೆ.
ದಕ್ಷಿಣ ಕನ್ನಡಕ್ಕೆ ಮಂಗಳೂರು ಮರುನಾಮಕರಣ: ಜನಾಭಿಪ್ರಾಯ ಸಂಗ್ರಹ
ಮಂಗಳೂರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಎಂದು ಬದಲಾಯಿಸುವ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಿ ತೀರ್ಮಾನಿಸಲಾಗುವುದು. ಕರಡು ಅಧಿಸೂಚನೆ ಹೊರಡಿಸಿ ಒಂದು ತಿಂಗಳ ಅವಧಿ ನೀಡಿ ಜನರ ಅಭಿಪ್ರಾಯ ಪಡೆದು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಹೇಳಿದರು.
ಮುಂದಿನ 15 ತಿಂಗಳಲ್ಲಿ 10-12 ಕಡೆ ಸಚಿವ ಸಂಪುಟ ಸಭೆ
ಬೆಂಗಳೂರಿನಿಂದಾಚೆಗೆ ಮಂಗಳೂರಿನಲ್ಲಿ ಮೊದಲ ಬಾರಿಗೆ ಸಚಿವ ಸಂಪುಟ ಸಭೆ ನಡೆಸಿರುವುದು ಸ್ವಾಗತಾರ್ಹ ಎಂದು ಹೇಳಿದ ಸಿಎಂ, ಮುಂದಿನ 15 ತಿಂಗಳ ಅವಧಿಯಲ್ಲಿ ರಾಜ್ಯದ 10-12 ಸ್ಥಳಗಳಲ್ಲಿ ಸಚಿವ ಸಂಪುಟ ಸಭೆ ನಡೆಸುವ ಉದ್ದೇಶವಿದೆ ಎಂದು ತಿಳಿಸಿದರು. “ಎಲ್ಲಿ ಸಾಮರ್ಥ್ಯ ಮತ್ತು ಅಗತ್ಯವಿದೆಯೋ ಅಲ್ಲಿ ಸಭೆ ನಡೆಸಲಾಗುವುದು. ಸಮಗ್ರ ಕರ್ನಾಟಕ, ಸಮೃದ್ಧ ಕರ್ನಾಟಕವನ್ನು ನಿರ್ಮಿಸುವುದು ನಮ್ಮ ಗುರಿ” ಎಂದು ಅವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆ ಧಾರ್ಮಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ದೇಶದಲ್ಲೇ ಗಮನ ಸೆಳೆದಿದೆ. ದೇಶಕ್ಕೆ ಆರು ರಾಷ್ಟ್ರೀಕೃತ ಬ್ಯಾಂಕುಗಳನ್ನು ನೀಡಿದ ಆರ್ಥಿಕ ಶಕ್ತಿಯ ಕೇಂದ್ರವಾಗಿದೆ. ಬಂದರುಗಳು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಪ್ರಮುಖ ಕೇಂದ್ರವಾಗಿದೆ ಎಂದು ಸಿಎಂ ವಿವರಿಸಿದರು.
ಕಸ್ತೂರಿ ರಂಗನ್ ವರದಿ ಕುರಿತು ಇಂದು ಹೆಬ್ರಿಯಲ್ಲಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ನಾಳೆ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಜನರ ಅಭಿಪ್ರಾಯ ಪಡೆಯಲಾಗುವುದು ಎಂದು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಜನತೆ ತೋರಿಸಿದ ಅಭಿಮಾನ ಮತ್ತು ಸ್ವಾಗತಕ್ಕೆ ಕೃತಜ್ಞತೆ ಸಲ್ಲಿಸಿದ ಸಿಎಂ, ಪಕ್ಷಭೇದ ಮರೆತು ಶಾಸಕರು, ಸಂಸದರು ಮತ್ತು ವಿಧಾನಪರಿಷತ್ ಸದಸ್ಯರು ಜಿಲ್ಲೆಯ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.











