ಬೆಂಗಳೂರು: ಬೆಂಗಳೂರಿನ ಸಂಚಾರ ಸಮಸ್ಯೆಗೆ ಪರಿಹಾರವಾಗಿ 2025-26ರ ಬಜೆಟ್ನಲ್ಲಿ ₹3,000 ಕೋಟಿ ವೆಚ್ಚದಲ್ಲಿ 425 ಕಿ.ಮೀ. ಉದ್ದದ ಬಫರ್ ರಸ್ತೆ ನಿರ್ಮಾಣ ಘೋಷಿಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರ್ಕಾರದ ಯೋಜನೆ ಮೊದಲ ಹಂತದಲ್ಲೇ ನಿಧಾನಗತಿಯಲ್ಲಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ಟೀಕೆ ಮಾಡಿದ್ದಾರೆ.
ಮೊದಲ ಹಂತದಲ್ಲಿ ₹200 ಕೋಟಿ ವೆಚ್ಚದಲ್ಲಿ 67.69 ಕಿ.ಮೀ. ರಸ್ತೆ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದ್ದರೂ, ಹಲವು ತಿಂಗಳುಗಳು ಕಳೆದರೂ ಕೇವಲ 10 ಕಿ.ಮೀ. ವ್ಯಾಪ್ತಿಯಲ್ಲಿ ಮಾತ್ರ ಕಾಮಗಾರಿ ಆರಂಭವಾಗಿದೆ ಎಂದು ಅವರು ಆರೋಪಿಸಿದ್ದಾರೆ. ವಿಂಡ್ ಟನಲ್ ರಸ್ತೆಯಲ್ಲಿ ಎಚ್ಎಎಲ್ ಸಂಸ್ಥೆಯಿಂದ 51,367.29 ಚದರ ಮೀಟರ್ ಜಾಗ ಹಸ್ತಾಂತರವಾಗಿದ್ದರೂ ಕಾಮಗಾರಿ ಆರಂಭಿಸಲು ನಿರ್ಲಕ್ಷ್ಯ ತೋರಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ 1.50 ಕೋಟಿ ದಾಟಿದ್ದು, ಪ್ರತಿದಿನ 2,700ಕ್ಕೂ ಹೆಚ್ಚು ಹೊಸ ವಾಹನಗಳು ನೋಂದಣಿಯಾಗುತ್ತಿವೆ. ಸಂಚಾರ ದಟ್ಟಣೆ, ಪ್ರವಾಹ ಮತ್ತು ರಸ್ತೆ ಸಂಪರ್ಕ ಸಮಸ್ಯೆಗಳಿಂದ ನಾಗರಿಕರು ನಿತ್ಯ ಪರದಾಡುತ್ತಿದ್ದಾರೆ. ಆದರೆ ಸರ್ಕಾರ ಘೋಷಣೆಗಳಲ್ಲೇ ಕಾಲ ಕಳೆಯುತ್ತಿದೆ ಎಂದು ಅಶೋಕ್ ಆರೋಪಿಸಿದ್ದಾರೆ.
“ಹಣವಿಲ್ಲ, ಅಭಿವೃದ್ಧಿಯಿಲ್ಲ, ಯೋಜನೆಗಳ ಅನುಷ್ಠಾನವಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಪ್ರಚಾರವೇ ಆದ್ಯತೆ. ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಜನರ ಕಣ್ಣಿಗೆ ಮಣ್ಣೆರಚುವುದನ್ನು ನಿಲ್ಲಿಸಿ. ಘೋಷಣೆ ಮಾತ್ರ ಇದೆ, ಯೋಜನೆ ಜಾರಿಯಿಲ್ಲ; ಪ್ರಚಾರ ಮಾತ್ರ ಇದೆ, ಅಭಿವೃದ್ಧಿಯಿಲ್ಲ” ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಅಭಿವೃದ್ಧಿಯಲ್ಲಿ 20 ವರ್ಷ ಹಿಂದಕ್ಕೆ ಕೊಂಡೊಯ್ಯುತ್ತಿದೆ ಎಂದು ಆರೋಪಿಸಿ, ಬೆಂಗಳೂರಿನ ಜನರಿಗೆ ಉತ್ತರ ನೀಡುವಂತೆ ಮುಖ್ಯಮಂತ್ರಿಗಳನ್ನು ಅವರು ಕೇಳಿಕೊಂಡಿದ್ದಾರೆ.











