ಭುವನೇಶ್ವರ್: ಆತ್ಮನಿರ್ಭರ ಭಾರತ ಮತ್ತು 2047ರ ವಿಕಸಿತ ಭಾರತದ ಕಡೆಗೆ ದೃಢ ಹೆಜ್ಜೆಯೊಂದಿಗೆ ಸಾಗುತ್ತಿರುವ ದೇಶದ ಪಯಣಕ್ಕೆ ಮತ್ತೊಂದು ಮೈಲುಗಲ್ಲು ಸೇರ್ಪಡೆಯಾಗಿದೆ. ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಇಂದು ಒಡಿಶಾದ ರೌರ್ಕೇಲಾ ಸ್ಟೀಲ್ ಪ್ಲಾಂಟ್‌ನಲ್ಲಿ ಸ್ಟೀಲ್ ಮೆಲ್ಟಿಂಗ್ ಶಾಪ್-2ರ ಅತ್ಯಾಧುನಿಕ ಕ್ಯಾಸ್ಟರ್-IV ಅನ್ನು ಉದ್ಘಾಟಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಡಿ ಸೇಲ್ (SAIL) ನಡೆಸುತ್ತಿರುವ ವಿಸ್ತರಣಾ ಯೋಜನೆಯಡಿ ಈ ಮಹತ್ವದ ಸಾಧನೆ ಸಾಕಾರಗೊಂಡಿದೆ. 1 ಮಿಲಿಯನ್ ಟನ್ ವಾರ್ಷಿಕ ಸಾಮರ್ಥ್ಯದ ಏಕ ತಂತು ಕ್ಯಾಸ್ಟರ್, 150 ಟನ್ ಲ್ಯಾಡಲ್ ಫರ್ನೇಸ್, ಸಂಪೂರ್ಣ ಸ್ವಯಂಚಾಲಿತ ತಂತ್ರಜ್ಞಾನ, ದುರಸ್ತಿ ಮತ್ತು ಸೌಲಭ್ಯಗಳ ಕೇಂದ್ರ, ಅಗ್ನಿಶಾಮಕ ವ್ಯವಸ್ಥೆ, ಬೃಹತ್ ತೈಲ ಶೇಖರಣಾ ಕೇಂದ್ರ, EOT ಕ್ರೇನ್‌ಗಳು ಮತ್ತು ಎಲಿವೇಟರ್‌ಗಳನ್ನೊಳಗೊಂಡ ಈ ಘಟಕವು ರೌರ್ಕೇಲಾ ಸ್ಟೀಲ್ ಪ್ಲಾಂಟ್‌ನ ಉತ್ಪಾದನಾ ಸಾಮರ್ಥ್ಯ, ದಕ್ಷತೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಯನ್ನು ಮತ್ತಷ್ಟು ಬಲಪಡಿಸಲಿದೆ.
ಈ ಕಾರ್ಯಕ್ರಮದಲ್ಲಿ ಕೇಂದ್ರ ಗಿರಿಜನ ವ್ಯವಹಾರಗಳ ಸಚಿವ ಜುವೆಲ್ ಒರಾಂ ಅವರು ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಸೇಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಮರೇಂದು ಪ್ರಕಾಶ್, ಕೇಂದ್ರ ಉಕ್ಕು ಸಚಿವಾಲಯದ ಹಿರಿಯ ಅಧಿಕಾರಿಗಳು ಹಾಗೂ ರೌರ್ಕೇಲಾ ಸ್ಟೀಲ್ ಪ್ಲಾಂಟ್‌ನ ಸಾವಿರಾರು ಶ್ರಮಿಕರು ಉಪಸ್ಥಿತರಿದ್ದರು.

“ಈ ಘಟಕದ ಆರಂಭವು ಕೇವಲ ಉತ್ಪಾದನಾ ಸಾಮರ್ಥ್ಯದ ಹೆಚ್ಚಳವಲ್ಲ, ಭವಿಷ್ಯದ ಸವಾಲುಗಳನ್ನು ಎದುರಿಸಲು ಸಿದ್ಧವಾಗಿರುವ ಆಧುನಿಕ ಭಾರತೀಯ ಉಕ್ಕು ಉದ್ಯಮದ ಸಂಕೇತ” ಎಂದು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಉದ್ಘಾಟನಾ ಭಾಷಣದಲ್ಲಿ ತಿಳಿಸಿದರು.
ರೌರ್ಕೇಲಾ ಸ್ಟೀಲ್ ಪ್ಲಾಂಟ್ ಈಗ ವಾರ್ಷಿಕವಾಗಿ 4.5 ಮಿಲಿಯನ್ ಟನ್‌ಗೂ ಅಧಿಕ ಉಕ್ಕು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ದೇಶದ ಮೂಲಸೌಕರ್ಯ, ರಕ್ಷಣೆ ಮತ್ತು ಉದ್ಯಮ ಕ್ಷೇತ್ರಗಳಿಗೆ ಮತ್ತಷ್ಟು ಬಲ ನೀಡಲಿದೆ.












