ಬೆಂಗಳೂರು: ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ಉಂಟಾಗುವ ಕುಡಿಯುವ ನೀರಿನ ಅಭಾವವನ್ನು ಸಮರ್ಪಕವಾಗಿ ನಿರ್ವಹಿಸಲು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಜೊತೆಗೆ ನಿಯಮಿತ ಸಭೆಗಳನ್ನು ನಡೆಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದ್ದಾರೆ.
ಮುಂದಿನ ಮೂರು ತಿಂಗಳ ಅವಧಿಯಲ್ಲಿ ಪ್ರತಿ ತಿಂಗಳ 2ನೇ ಮತ್ತು 4ನೇ ಸೋಮವಾರ ಪಿಡಿಒಗಳೊಂದಿಗೆ ಕುಡಿಯುವ ನೀರಿನ ಸಮಸ್ಯೆಯ ವಸ್ತುಸ್ಥಿತಿ ಕುರಿತು ಕಡ್ಡಾಯ ಸಭೆ ನಡೆಸಬೇಕು. ಅಲ್ಲದೆ, ಪ್ರತಿ 2ನೇ ಮತ್ತು 4ನೇ ಮಂಗಳವಾರ ಪತ್ರಿಕಾ ಗೋಷ್ಠಿ ಕರೆದು ಜಿಲ್ಲೆಯಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ಸಚಿವರು ಎಲ್ಲಾ ಜಿಲ್ಲಾ ಪಂಚಾಯತ್ ಸಿಇಒಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕುಡಿಯುವ ನೀರಿನ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಎಲ್ಲಾ ಜಿಲ್ಲಾ ಪಂಚಾಯತ್‌ಗಳಲ್ಲಿ 24/7 ನಿಯಂತ್ರಣ ಕೊಠಡಿಗಳನ್ನು ತೆರೆಯುವುದು, ಸಿಬ್ಬಂದಿಯನ್ನು ನಿಯೋಜಿಸುವುದು ಹಾಗೂ ತಾಲ್ಲೂಕು ಮಟ್ಟದಲ್ಲಿ ತ್ವರಿತ ಕಾರ್ಯಪಡೆ (Rapid Task Force) ರಚಿಸಿ ಪರಿಸ್ಥಿತಿಯನ್ನು ನಿರ್ವಹಿಸುವಂತೆ ಸೂಚಿಸಲಾಗಿದೆ.
ಗ್ರಾಮೀಣ ನೀರಿನ ಮೂಲಗಳನ್ನು 100% ಭೌತಿಕ ಪರಿಶೀಲನೆ ಮಾಡಿ, ಕೊಳವೆ ಬಾವಿಗಳ ಸುತ್ತಲೂ ಕಲುಷಿತ ನೀರು ಅಥವಾ ಚರಂಡಿ ನೀರು ನಿಲ್ಲದಂತೆ ಮುಂಜಾಗ್ರತೆ ವಹಿಸಬೇಕು. ಕೊಳವೆ ಬಾವಿಗಳ ಸುತ್ತ ಕಾಂಕ್ರೀಟ್ ಕಟ್ಟೆ ನಿರ್ಮಿಸಿ ಕಲುಷಿತ ನೀರು ಸೇರದಂತೆ ಖಚಿತಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿವರಿಸಿದ್ದಾರೆ.
ಬೇಸಿಗೆಯಲ್ಲಿ ಜಲಮೂಲಗಳು ಬತ್ತಿಹೋಗುವುದು, ಕೊಳವೆ ಬಾವಿಗಳ ಇಳುವರಿ ಕಡಿಮೆಯಾಗುವುದರಿಂದ ಕೆಲವು ಜಿಲ್ಲೆಗಳ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿದೆ. ಇದನ್ನು ಎದುರಿಸಲು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವುದು, ನೀರಿನ ಮೂಲಗಳ ಸುರಕ್ಷತೆಯನ್ನು ಖಚಿತಪಡಿಸುವುದು ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.
ಸರ್ಕಾರವು ಈಗಾಗಲೇ ಈ ಕುರಿತು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದು, ಗ್ರಾಮೀಣ ಜನರಿಗೆ ಸುರಕ್ಷಿತ ಕುಡಿಯುವ ನೀರು ಒದಗಿಸುವುದು ಪ್ರಾಥಮಿಕ ಆದ್ಯತೆಯಾಗಿದೆ ಎಂದು ಸಚಿವರು ಒತ್ತಿ ಹೇಳಿದ್ದಾರೆ.












