ಐಎಸ್‌ಒ ೫೦೦೦೧:೨೦೧೮ ಅಂತಾರಾಷ್ಟ್ರೀಯ ಪ್ರಮಾಣಪತ್ರ ಪಡೆದ ಬಿಡಬ್ಲ್ಯೂಎಸ್‌ಎಸ್‌ಬಿ
ಬೆಂಗಳೂರು: ಬೆಂಗಳೂರು ಜಲಮಂಡಳಿ (BWSSB) ಇಂಧನ ನಿರ್ವಹಣಾ ವ್ಯವಸ್ಥೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದು, ISO 50001:2018 ಅಂತಾರಾಷ್ಟ್ರೀಯ ಪ್ರಮಾಣಪತ್ರ ಪಡೆದ ಭಾರತದ ಮೊದಲ ಜಲಮಂಡಳಿ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬ್ಯೂರೋ ವೆರಿಟಾಸ್ ಸಂಸ್ಥೆಯು ಏಪ್ರಿಲ್ ೧೪, ೨೦೨೬ ರಂದು ಅಧಿಕೃತವಾಗಿ ನೀಡಿರುವ ಈ ಪ್ರತಿಷ್ಠಿತ ಪ್ರಮಾಣಪತ್ರವು, ಮಂಡಳಿಯ ಇಂಧನ ನಿರ್ವಹಣಾ ವ್ಯವಸ್ಥೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿದೆ. ವಿಶೇಷವಾಗಿ ಟಿ.ಕೆ. ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿ ಎಂಬ ಮೂರು ಪ್ರಮುಖ ಬೃಹತ್ ನೀರು ಸರಬರಾಜು ಪಂಪಿಂಗ್ ಸ್ಟೇಷನ್‌ಗಳು, ಕಾವೇರಿ ಭವನದ ಪ್ರಧಾನ ಕಚೇರಿ ಹಾಗೂ ಬೃಹತ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ನೀರು ಸರಬರಾಜು ಪ್ರಕ್ರಿಯೆಯನ್ನು ಒಳಗೊಂಡಿದೆ.

ಇಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾದ್ ಮನೋಹರ್ ಅವರ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಪ್ರಮಾಣಪತ್ರವನ್ನು ಹಸ್ತಾಂತರಿಸಿ ಧನ್ಯವಾದಗಳನ್ನು ಸಮರ್ಪಿಸಿದರು.
ಈ ಸಾಧನೆಯನ್ನು ಸ್ವಾಗತಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, “ಪ್ರತಿಷ್ಠಿತ ISO 50001:2018 ಪ್ರಮಾಣಪತ್ರ ಪಡೆಯುವುದು ಸ್ಮರಣೀಯ ಸಾಧನೆಯಾಗಿದೆ. ಇದು ಬೆಂಗಳೂರು ನಗರಕ್ಕೆ ವಿಶ್ವದರ್ಜೆಯ, ಸುಸ್ಥಿರ ಜಲ ಮೂಲಸೌಕರ್ಯವನ್ನು ನಿರ್ಮಿಸುವಲ್ಲಿ ನಮ್ಮ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಬೃಹತ್ ಪಂಪಿಂಗ್ ಸ್ಟೇಷನ್‌ಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಬೆಂಗಳೂರು ಜಲಮಂಡಳಿ ರಾಷ್ಟ್ರೀಯ ಮಾನದಂಡವನ್ನು ಸ್ಥಾಪಿಸಿದ್ದು, ಲಕ್ಷಾಂತರ ನಾಗರಿಕರಿಗೆ ದಕ್ಷ, ವಿಶ್ವಾಸಾರ್ಹ ಮತ್ತು ತಡೆರಹಿತ ನೀರಿನ ಸೇವೆ ಒದಗಿಸುತ್ತಿದೆ. ಇದು ಬ್ರ್ಯಾಂಡ್ ಬೆಂಗಳೂರನ್ನು ಹವಾಮಾನ-ಸ್ಥಿತಿಸ್ಥಾಪಕ ಜಾಗತಿಕ ಮಹಾನಗರವಾಗಿ ಪರಿವರ್ತಿಸುವ ನಮ್ಮ ದೃಷ್ಟಿಕೋನಕ್ಕೆ ಬಲವು ನೀಡುತ್ತದೆ” ಎಂದು ಹೇಳಿದರು.
ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರು ಮಾತನಾಡಿ, “ಈ ಐತಿಹಾಸಿಕ ಪ್ರಮಾಣಪತ್ರವು ಬಿಡಬ್ಲ್ಯೂಎಸ್‌ಎಸ್‌ಬಿಯಲ್ಲಿನ ಪ್ರತಿಯೊಬ್ಬರ ಕಠಿಣ ಪರಿಶ್ರಮ ಮತ್ತು ಸಮರ್ಪಣಾಭಾವದ ಫಲಿತಾಂಶವಾಗಿದೆ” ಎಂದು ತಿಳಿಸಿದರು.

ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾದ್ ಮನೋಹರ್ ಐಎಎಸ್ ಅವರು, “ಪ್ರತಿ ಮನೆಗೂ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರು ಒದಗಿಸುವುದು ನಮ್ಮ ಬದ್ಧತೆ. ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳ ನಾಯಕತ್ವದಲ್ಲಿ ಅಂತಾರಾಷ್ಟ್ರೀಯ ಮಾನದಂಡಗಳನ್ನು ಅಳವಡಿಸಿಕೊಳ್ಳುತ್ತಿದ್ದೇವೆ. ಮುಖ್ಯ ಅಭಿಯಂತರರಾದ ಡಾ. ರಾಜೀವ್ ಮತ್ತು ಶ್ರೀ ರಾಜಶೇಖರ್ ಅವರ ಸಂಘಟಿತ ಪ್ರಯತ್ನಕ್ಕೆ ಧನ್ಯವಾದಗಳು” ಎಂದು ಹೇಳಿದರು.
ಕಳೆದ ವರ್ಷವಷ್ಟೇ ಕೊಳವೆ ಮೂಲಕ ಕುಡಿಯುವ ನೀರು ಸರಬರಾಜು ನಿರ್ವಹಣೆಗೆ BIS (ಭಾರತೀಯ ಮಾನದಂಡಗಳ ಬ್ಯೂರೋ) ಪ್ರಮಾಣಪತ್ರ ಪಡೆದ ದೇಶದ ಮೊದಲ ಜಲಮಂಡಳಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬಿಡಬ್ಲ್ಯೂಎಸ್‌ಎಸ್‌ಬಿ, ಈಗ ISO 50001:2018 ಜೊತೆಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಗುಣಮಟ್ಟವನ್ನು ಮತ್ತಷ್ಟು ಎತ್ತರಕ್ಕೇರಿಸಿದೆ.
ಈ ಸಾಧನೆ ಬೆಂಗಳೂರಿನ ನೀರಿನ ಸೇವೆಯನ್ನು ಹೆಚ್ಚು ದಕ್ಷತೆಯುತವಾಗಿ, ಸುಸ್ಥಿರವಾಗಿ ಮತ್ತು ವಿಶ್ವದರ್ಜೆಗೆ ತಲುಪಿಸುವಲ್ಲಿ ಮಹತ್ವದ ಮೈಲಿಗಲ್ಲಾಗಿದೆ.












