ಬೆಂಗಳೂರು: ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದ ಸ್ವರಾಜ್ ದ್ವೀಪದಲ್ಲಿ ಭಾರತದ ಹೆಮ್ಮೆ ಹೆಚ್ಚಿಸುವ ಐತಿಹಾಸಿಕ ಸಾಹಸ ಕಾರ್ಯಾಚರಣೆ ಯಶಸ್ವಿಯಾಗಿ ನೆರವೇರಿದೆ. ಸಮುದ್ರದ ಆಳದಲ್ಲಿ ದೇಶದ ಅತಿ ದೊಡ್ಡ ತ್ರಿವರ್ಣ ಧ್ವಜವನ್ನು ಅನಾವರಣಗೊಳಿಸುವ ಮೂಲಕ ‘ಗಿನ್ನೆಸ್ ವರ್ಲ್ಡ್ ರೆಕಾರ್ಡ್’ ನಿರ್ಮಿಸಲಾಗಿದೆ. ಈ ಸಾಧನೆಯಲ್ಲಿ ಬೆಂಗಳೂರಿನ ಸಾಹಸ ಕ್ರೀಡಾ ತಜ್ಞ ಶರತ್ ಆರ್. ಅಶೋಕ್ ಅವರು ಭಾಗಿಯಾಗಿರುವುದು ಕರ್ನಾಟಕಕ್ಕೆ ಹೆಮ್ಮೆಯ ಸಂಗತಿಯಾಗಿದೆ.
ಮೇ 2ರಂದು ನಡೆದ ಈ ವಿಶೇಷ ಅಭಿಯಾನದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ 200ಕ್ಕೂ ಹೆಚ್ಚು ನುರಿತ ಸ್ಕೂಬಾ ಡೈವರ್‌ಗಳು ಪಾಲ್ಗೊಂಡಿದ್ದರು. ಅಂಡಮಾನ್ ಆಡಳಿತ ಮತ್ತು ಭಾರತೀಯ ರಕ್ಷಣಾ ಪಡೆಗಳ ಸಹಯೋಗದಲ್ಲಿ 60×40 ಮೀಟರ್ (2,400 ಚದರ ಮೀಟರ್) ವಿಸ್ತೀರ್ಣದ ಬೃಹತ್ ರಾಷ್ಟ್ರಧ್ವಜವನ್ನು ಸಮುದ್ರದಾಳದಲ್ಲಿ ಅನಾವರಣಗೊಳಿಸಲಾಯಿತು. ಅಲೆಗಳ ಅಬ್ಬರ ಮತ್ತು ನೀರಿನ ತೀವ್ರ ಒತ್ತಡದ ನಡುವೆ ಈ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಈ ಅಪೂರ್ವ ಸಾಧನೆಯನ್ನು ಗುರುತಿಸಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಲೆಫ್ಟಿನೆಂಟ್ ಗವರ್ನರ್ ಡಿ.ಕೆ. ಜೋಶಿ ಅವರು ಗಿನ್ನೆಸ್ ವಿಶ್ವ ದಾಖಲೆ ಪ್ರಮಾಣಪತ್ರ ನೀಡಿ ತಂಡವನ್ನು ಗೌರವಿಸಿದರು.

ಶರತ್ ಆರ್. ಅಶೋಕ್ ಅವರು ಕಳೆದ ಒಂದು ದಶಕದಿಂದ ಸಾಹಸ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿದ್ದು, ಪ್ರಮಾಣೀಕೃತ ಡೈವ್ ಮಾಸ್ಟರ್ ಹಾಗೂ ಸ್ಕೂಬಾ ಇನ್ಸ್ಟ್ರಕ್ಟರ್ ಆಗಿದ್ದಾರೆ. ಪ್ಯಾರಾಗ್ಲೈಡಿಂಗ್, ಪ್ಯಾರಾಮೋಟರ್ ಪೈಲಟಿಂಗ್, ಮೊಟೊಕ್ರಾಸ್ ಮತ್ತು ಪರ್ವತಾರೋಹಣ ಕ್ಷೇತ್ರಗಳಲ್ಲಿಯೂ ಅವರು ಪರಿಣತಿ ಹೊಂದಿದ್ದಾರೆ.
ಸಾಧನೆಯ ಬಗ್ಗೆ ಪ್ರತಿಕ್ರಿಯಿಸಿದ ಶರತ್, “ತ್ರಿವರ್ಣ ಧ್ವಜವು ದೇಶದ ಏಕತೆ ಮತ್ತು ಶಕ್ತಿಯ ಪ್ರತೀಕ. ಸಮುದ್ರದಾಳದಲ್ಲಿ ಅದನ್ನು ಅನಾವರಣಗೊಳಿಸಿದ ಕ್ಷಣ ನನ್ನ ಜೀವನದ ಅತ್ಯಂತ ಗೌರವದ ಕ್ಷಣ” ಎಂದು ಹೇಳಿದ್ದಾರೆ.
ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಪುತ್ರರಾಗಿರುವ ಶರತ್ ಅವರ ಈ ಸಾಧನೆ ರಾಜ್ಯದ ಯುವಜನತೆಗೆ ಪ್ರೇರಣೆಯಾಗಿದೆ.












