ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಈಜೀಪುರ ಮೇಲ್ಸೇತುವೆ ಕಾಮಗಾರಿ ಅಕ್ಟೋಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ಯೋಜನೆಯ ಮುಖ್ಯ ಅಭಿಯಂತರ ಡಾ. ರಾಘವೇಂದ್ರ ಪ್ರಸಾದ್ ತಿಳಿಸಿದ್ದಾರೆ.
ಕಾಮಗಾರಿಗೆ ಇತ್ತೀಚೆಗೆ ಗಣನೀಯ ವೇಗ ಸಿಕ್ಕಿದ್ದು, ಪ್ರಮುಖ ಮೇಲ್ಸೇತುವೆ ನಿರ್ಮಾಣ ಮುಗಿದ ಬಳಿಕ ರ್ಯಾಂಪ್‌ಗಳು ಮತ್ತು ಉಳಿದ ಕೆಲಸಗಳನ್ನು ಪೂರ್ಣಗೊಳಿಸಿ ಈ ವರ್ಷವೇ ಸಂಚಾರಕ್ಕೆ ತೆರೆಯಲು ಯೋಜನೆ ರೂಪಿಸಲಾಗಿದೆ ಎಂದು ಅವರು ಹೇಳಿದರು.
ಸೆಂಟ್ ಜಾನ್ಸ್ ಅಡ್ಡಿ ನಿವಾರಣೆಯಿಂದ ವೇಗ
‘ಈಜೀಪುರ-ಕೇಂದ್ರೀಯ ಸದನ ಮೇಲ್ಸೇತುವೆ’ ಯೋಜನೆ ಅಂತಿಮ ಹಂತದಲ್ಲಿದೆ. ಕಳೆದ ಫೆಬ್ರವರಿ 2026ರಲ್ಲಿ ಸೆಂಟ್ ಜಾನ್ಸ್ ಆಸ್ಪತ್ರೆ ಸಮೀಪದ ಅತ್ಯಂತ ಜಟಿಲ ‘ಪೋರ್ಟಲ್ ಫ್ರೇಮ್’ ನಿರ್ಮಾಣದ ಅಡ್ಡಿಯನ್ನು ಯಶಸ್ವಿಯಾಗಿ ನಿವಾರಿಸಲಾಗಿದೆ. ಮಾನ್ಯ ಉಪ ಮುಖ್ಯಮಂತ್ರಿಗಳು, ಸಾರಿಗೆ ಮತ್ತು ಮುಜರಾಯಿ ಸಚಿವರು ಹಾಗೂ ಮುಖ್ಯ ಆಯುಕ್ತರ ನಿರಂತರ ಮೇಲ್ವಿಚಾರಣೆಯಿಂದ ಸೆಂಟ್ ಜಾನ್ಸ್ ಆಡಳಿತ ಮಂಡಳಿಯು ತನ್ನ ಜಮೀನಿನಲ್ಲಿ ಪೋರ್ಟಲ್ ಫ್ರೇಮ್ ಕಾಮಗಾರಿ ನಡೆಸಲು ಅನುಮತಿ ನೀಡಿದೆ.

ಪ್ರಸ್ತುತ ಪ್ರಗತಿ (ಮೇ 2026):
- ಎಲ್ಲಾ ಅಡಿಪಾಯ ಕಾಮಗಾರಿಗಳು (ಪೈಲ್ಸ್, ಪೈಲ್ ಕ್ಯಾಪ್‌ಗಳು ಮತ್ತು ಪಿಯರ್ಸ್‌ಗಳು) ಪೂರ್ಣಗೊಂಡಿವೆ.
- ಪೋರ್ಟಲ್ ಬೀಮ್‌ಗಳ ಸ್ಟೇಜಿಂಗ್ ಕಾಮಗಾರಿ ಪ್ರಗತಿಯಲ್ಲಿದೆ.
- ಒಟ್ಟು 762 ಸೆಗ್ಮೆಂಟ್‌ಗಳಲ್ಲಿ 728 ಸೆಗ್ಮೆಂಟ್‌ಗಳು ಕಾಸ್ಟ್ ಆಗಿವೆ. ಕೇವಲ 15 ಸ್ಪಾನ್‌ಗಳ ಅಳವಡಿಕೆ ಮಾತ್ರ ಬಾಕಿ ಉಳಿದಿದೆ.
- ಗ್ರೇಡ್ ಮಟ್ಟದ ರಸ್ತೆ ಅಗಲೀಕರಣ ಮತ್ತು ಪಾದಚಾರಿ ಮಾರ್ಗಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಯೋಜನೆಯ ಹಿನ್ನೆಲೆ:
2017ರಲ್ಲಿ ರೂ. 203.20 ಕೋಟಿ ವೆಚ್ಚದಲ್ಲಿ ಪ್ರಾರಂಭವಾದ ಈ 2.38 ಕಿ.ಮೀ ಉದ್ದದ ಯೋಜನೆಯಲ್ಲಿ ಮೊದಲ ಗುತ್ತಿಗೆದಾರರು ನಿಧಾನಗತಿಯಿಂದ ಕೆಲಸ ಮಾಡಿದ್ದರಿಂದ 2022ರಲ್ಲಿ ಹೈಕೋರ್ಟ್ ಆದೇಶದ ಮೇರೆಗೆ “ರಿಸ್ಕ್ ಅಂಡ್ ಕಾಸ್ಟ್” ಅಡಿಯಲ್ಲಿ ಗುತ್ತಿಗೆ ರದ್ದುಪಡಿಸಲಾಗಿತ್ತು. ನಂತರ 2023 ನವೆಂಬರ್‌ನಲ್ಲಿ ಮೆ. ಬಿ.ಎಸ್.ಸಿ.ಪಿ.ಎಲ್ ಇನ್‌ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್‌ಗೆ ಹೊಸ ಕಾರ್ಯಾದೇಶ ನೀಡಲಾಗಿದೆ. ಹೊಸ ಗುತ್ತಿಗೆದಾರರು ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುತ್ತಾ ಕಾಮಗಾರಿಯನ್ನು ವೇಗಗೊಳಿಸಿದ್ದಾರೆ.
ಈಜೀಪುರ ಮೇಲ್ಸೇತುವೆ ಪೂರ್ಣಗೊಂಡರೆ ಪ್ರದೇಶದ ಸಂಚಾರ ದಟ್ಟಣೆ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.












