ಬೆಂಗಳೂರು: ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಶಾಸಕರ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಏಕಮತದಿಂದ ಆಯ್ಕೆ ಮಾಡಲಾಗಿದೆ.
ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ನಾಯಕ ಸ್ಥಾನಕ್ಕೆ ಸೂಚಿಸಿದರು. ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಇದನ್ನು ಅನುಮೋದಿಸಿದರು. ಸಭೆಯಲ್ಲಿದ್ದ ಎಲ್ಲ ಶಾಸಕರು ಒಕ್ಕೊರಲಿನಿಂದ ಬೆಂಬಲ ವ್ಯಕ್ತಪಡಿಸಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ನೂತನ ನಾಯಕರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದರು.
ಸಭೆಯ ಆರಂಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರು, ಶಾಸಕಾಂಗ ಪಕ್ಷದ ನಾಯಕ ಆಯ್ಕೆ ಪ್ರಕ್ರಿಯೆಯು ಸಿದ್ದರಾಮಯ್ಯ ಅವರ ಪ್ರಸ್ತಾವನೆಯೊಂದಿಗೆ ನಡೆಯಲಿದೆ ಎಂದು ಪ್ರಕಟಿಸಿ ಸಭೆಗೆ ಚಾಲನೆ ನೀಡಿದರು.
ನಂತರ ಸಿದ್ದರಾಮಯ್ಯ ಅವರು ಆಯ್ಕೆ ಪ್ರಕ್ರಿಯೆಯನ್ನು ಎಐಸಿಸಿ ವಿವೇಚನೆಗೆ ಬಿಡುವ ಸಂಕ್ಷಿಪ್ತ ನಿರ್ಣಯ ಮಂಡಿಸಿದರು. ಪರಮೇಶ್ವರ್ ಅವರು ಅನುಮೋದಿಸಿದರು. ಶಾಸಕರು ಕೈ ಎತ್ತಿ ಬೆಂಬಲಿಸಿದರು.

10 ನಿಮಿಷಗಳ ವಿರಾಮದ ನಂತರ ಸಿದ್ದರಾಮಯ್ಯ, ವೇಣುಗೋಪಾಲ್ ಮತ್ತು ಸುರ್ಜೆವಾಲ ಅವರು ಸಿಎಂ ಕೊಠಡಿಗೆ ತೆರಳಿ ವಾಪಸ್ಸು ಬಂದ ನಂತರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿತು.
ನೂತನ ನಾಯಕರಾಗಿ ಆಯ್ಕೆಯಾದ ಬಳಿಕ ಡಿ.ಕೆ. ಶಿವಕುಮಾರ್ ಅವರು, ನಿರ್ಗಮಿತ ನಾಯಕ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಅವಧಿಯ ಸೇವೆಯನ್ನು ಕೊಂಡಾಡುವ ನಿರ್ಣಯವನ್ನು ಮಂಡಿಸಿದರು. ಸಭೆ ಏಕಮತದಿಂದ ಇದನ್ನು ಬೆಂಬಲಿಸಿತು.












