ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ಪಾಲಿಕೆಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆಗಾಗಿ ಸತತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಹೇಳಿದ್ದಾರೆ.
ರಾಷ್ಟ್ರೀಯ ವೈದ್ಯರ ದಿನಾಚರಣೆಯ ಸಂದರ್ಭದಲ್ಲಿ ಜಿಬಿಎ-ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಉತ್ತಮ ಸೇವೆ ಸಲ್ಲಿಸುತ್ತಿರುವ ಆರೋಗ್ಯ ಅಧಿಕಾರಿಗಳು, ಅಧೀಕ್ಷಕರು ಮತ್ತು ವೈದ್ಯರಿಗೆ ಧನ್ವಂತರಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಾ ಮಹೇಶ್ವರ್ ರಾವ್ ಅವರು ಈ ಮಾಹಿತಿ ನೀಡಿದರು.
“ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯಕೀಯ ವ್ಯವಸ್ಥೆ ಸಮರ್ಪಕವಾಗಿರಬೇಕು. ಜನನ ಪ್ರಮಾಣ ಹೆಚ್ಚಾಗಬೇಕು, ಮರಣ ಪ್ರಮಾಣ ಕಡಿಮೆಯಾಗಬೇಕು. ನಮ್ಮ ಆಸ್ಪತ್ರೆಗಳು ಉತ್ತಮ ಗುಣಮಟ್ಟದಲ್ಲಿ ಇರಬೇಕು. ಪಂಚ ಪಾಲಿಕೆಗಳಲ್ಲಿ ಆರೋಗ್ಯ ಕ್ಷೇತ್ರ ಸುಧಾರಣೆಗೆ ನಿರಂತರ ಕ್ರಮಗಳು ಜಾರಿಯಲ್ಲಿವೆ. ನಾಗರಿಕರಿಗೆ ಉತ್ತಮ ವೈದ್ಯಕೀಯ ಸೌಲಭ್ಯಗಳು ದೊರೆಯುವಂತೆ ಮಾಡುವುದೇ ನಮ್ಮ ಗುರಿ” ಎಂದು ಅವರು ಅಭಿಪ್ರಾಯಪಟ್ಟರು.
ಕೇಂದ್ರ ನಗರ ಪಾಲಿಕೆ ಆಯುಕ್ತ ಜಿ. ಜಗದೀಶ್ ಅವರು ಮಾತನಾಡಿ, “ಡಾ. ಬಿಧಾನ್ ಚಂದ್ರರಾಯರ ಸ್ಮರಣೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ ಅಚರಿಸಲಾಗುತ್ತಿದೆ. ಕೊವಿಡ್ ಸಂದರ್ಭದಲ್ಲಿ ವೈದ್ಯರು ಪ್ರಾಣವನ್ನು ಪಣಕ್ಕಿಟ್ಟು ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ. ಪಾಲಿಕೆಯ ಆಸ್ಪತ್ರೆಗಳನ್ನು ಹೈಟೆಕ್ ಆಸ್ಪತ್ರೆಗಳಾಗಿ ಪರಿವರ್ತಿಸಲು ಎಲ್ಲರೂ ಸಹಕಾರ ನೀಡಬೇಕು” ಎಂದು ಕರೆ ನೀಡಿದರು.
ವಿಶೇಷ ಆಯುಕ್ತ ವೆಂಕಟಚಲಪತಿ ಅವರು, “ವೈದ್ಯರು ದೇವರಂತೆ. ಕೊವಿಡ್ ಸಮಯದಲ್ಲಿ ಅವರು ಜೀವನ ಹಂಗು ತೊರೆದು ಸೇವೆ ಸಲ್ಲಿಸಿದ್ದಾರೆ. ಅವರ ಜೊತೆ ಕಾರ್ಯನಿರ್ವಹಿಸುವ ಸೌಭಾಗ್ಯ ನನ್ನದಾಗಿತ್ತು” ಎಂದು ಹೇಳಿದರು.
ಧನ್ವಂತರಿ ಪ್ರಶಸ್ತಿ ಪುರಸ್ಕೃತರು:
- ಡಾ. ಮನೋರಂಜನ್ ಹೆಗ್ಡೆ (ಆರೋಗ್ಯಧಿಕಾರಿ)
- ಡಾ. ಲತಾ ಎಫ್.ಜೆ (ವೈದ್ಯಕೀಯ ಅಧೀಕ್ಷಕರು)
- ಡಾ. ಟಿ. ವೆಂಕಟೇಶ್ (ಆರೋಗ್ಯ ವೈದ್ಯಾಧಿಕಾರಿ)
- ಡಾ. ಮಂಜುಳ ಡಿ. (ವೈದ್ಯಕೀಯ ಅಧೀಕ್ಷಕರು)
- ಡಾ. ಕೋಮಲ ಕೆ.ಆರ್. (ಆರೋಗ್ಯ ವೈದ್ಯಾಧಿಕಾರಿ)
- ಡಾ. ಲಲಿತಾ (ವೈದ್ಯಕೀಯ ಅಧೀಕ್ಷಕರು)
- ಡಾ. ಮಂಜುಳ ಡಿ. (ಆರೋಗ್ಯ ವೈದ್ಯಾಧಿಕಾರಿ)
- ಡಾ. ಭಾರತಿ ಜೆ.ಪಿ. (ವೈದ್ಯಕೀಯ ಅಧೀಕ್ಷಕರು)
- ಡಾ. ನವೀನ್ ಕುಮಾರ್ (ವೈದ್ಯಾಧಿಕಾರಿ)
- ಡಾ. ರಾಜೇಶ್ ಎನ್. (ವೈದ್ಯಾಧಿಕಾರಿ)
- ಡಾ. ಅನುಪಮಾ ಜಿ. (ವೈದ್ಯಾಧಿಕಾರಿ)
- ಡಾ. ಅನುಪಮಾ ಸಿ.ವಿ. (ಅರವಳಿಕೆ ತಜ್ಞರು)
- ಡಾ. ಸುಜಾತ (ನಗರ ಆರೋಗ್ಯ ಪ್ರಾಥಮಿಕ ಕೇಂದ್ರ)
- ಡಾ. ವಿ.ಜಿ. ನವೀನ್ (ನಗರ ಪ್ರಾಥಮಿಕ ಆರೋಗ್ಯ ಕೇಂದ್ರ)
ಈ ಸಮಾರಂಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ, ಜಿಬಿಎ-ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ. ಅಮೃತ್ ರಾಜ್, ಮುಖ್ಯ ಆರೋಗ್ಯಧಿಕಾರಿಗಳಾದ ಡಾ. ಸೈಯದ್ ಸಿರಾಜುದ್ದೀನ್ ಮದನಿ, ಡಾ. ನಿರ್ಮಲ ಬುಗ್ಗಿ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.











