27,700ಕ್ಕೂ ಹೆಚ್ಚು ಪಂಪ್‌ಸೆಟ್‌ಗಳು ಕಾರ್ಯಾರಂಭ; ವರ್ಷಕ್ಕೆ ₹200 ಕೋಟಿಗೂ ಅಧಿಕ ಉಳಿತಾಯ
ಬೆಂಗಳೂರು: ಕರ್ನಾಟಕ ಸರ್ಕಾರ ಕೃಷಿಯಲ್ಲಿ ಸೌರ ವಿದ್ಯುತ್ ಬಳಕೆಯನ್ನು ವೇಗವಾಗಿ ಉತ್ತೇಜಿಸುತ್ತಿರುವುದರಿಂದ ರಾಜ್ಯದಲ್ಲಿ ಸೌರ ಕೃಷಿ ಪಂಪ್‌ಸೆಟ್‌ಗಳ ಅಳವಡಿಕೆ ಗಣನೀಯವಾಗಿ ಹೆಚ್ಚಾಗಿದೆ. ಪ್ರಸ್ತುತ 27,700ಕ್ಕೂ ಹೆಚ್ಚು ಸೌರ ಕೃಷಿ ಪಂಪ್‌ಸೆಟ್‌ಗಳು ಕಾರ್ಯಾರಂಭಗೊಂಡಿದ್ದು, ಇವುಗಳಿಂದ ಗ್ರಿಡ್ ಮೇಲಿನ 144 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಕಡಿಮೆಯಾಗಿದೆ. ಇದರೊಂದಿಗೆ ವರ್ಷಕ್ಕೆ 240 ಮಿಲಿಯನ್ ಯೂನಿಟ್ ವಿದ್ಯುತ್ ಖರೀದಿಯನ್ನು ತಪ್ಪಿಸುವ ಮೂಲಕ ಎಸ್ಕಾಂಗಳಿಗೆ ಸುಮಾರು ₹146 ಕೋಟಿ ಹಾಗೂ ರಾಜ್ಯ ಸರ್ಕಾರಕ್ಕೆ ಕೃಷಿ ವಿದ್ಯುತ್ ಸಹಾಯಧನದಲ್ಲಿ ₹200 ಕೋಟಿಗೂ ಅಧಿಕ ಉಳಿತಾಯವಾಗಲಿದೆ.
ಆರಂಭಿಕ ವರ್ಷಗಳಲ್ಲಿ ನಿಧಾನಗತಿಯಲ್ಲಿದ್ದ ಈ ಯೋಜನೆಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ವಿಶೇಷ ಆಸಕ್ತಿ, ನಿರಂತರ ಮೇಲ್ವಿಚಾರಣೆ ಮತ್ತು ಆಡಳಿತಾತ್ಮಕ ಹಸ್ತಕ್ಷೇಪದಿಂದ ಹೊಸ ಚೈತನ್ಯ ದೊರೆತಿದೆ. ಇಂಧನ ಇಲಾಖೆ, ಎಸ್ಕಾಂಗಳು, ಅನುಷ್ಠಾನ ಸಂಸ್ಥೆಗಳು ಹಾಗೂ ಪೂರೈಕೆದಾರರ ಸಮನ್ವಯದಿಂದ ಸಮಸ್ಯೆಗಳನ್ನು ಪರಿಹರಿಸಿದ ಬಳಿಕ ರೈತರ ಸ್ಪಂದನೆ ಗಣನೀಯವಾಗಿ ಹೆಚ್ಚಾಗಿದೆ. ಒಂದು ಲಕ್ಷಕ್ಕೂ ಹೆಚ್ಚು ರೈತರು ಅರ್ಜಿ ಸಲ್ಲಿಸಿದ್ದು, ಇದು ಸೌರ ಪಂಪ್‌ಸೆಟ್‌ಗಳತ್ತ ರೈತರ ವಿಶ್ವಾಸ ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗಿದೆ. 40 ಸಾವಿರ ಪಂಪ್‌ಸೆಟ್‌ಗಳ ಗುರಿಯನ್ನು ಮುಟ್ಟುವತ್ತ ಯೋಜನೆ ವೇಗವಾಗಿ ಮುನ್ನಡೆಯುತ್ತಿದೆ.
ಕುಸುಮ್-ಬಿ ಯೋಜನೆಯಡಿ ಸೌರ ಪಂಪ್‌ಸೆಟ್‌ಗಳ ಅಳವಡಿಕೆಗೆ ಕರ್ನಾಟಕ ಸರ್ಕಾರವೇ ಶೇ.50ರಷ್ಟು ಆರ್ಥಿಕ ಸಹಾಯಧನ ನೀಡುತ್ತಿದೆ. ಇದರಿಂದ ಸಾವಿರಾರು ರೈತರು ಕಡಿಮೆ ವೆಚ್ಚದಲ್ಲಿ ಸೌರ ವಿದ್ಯುತ್ ಬಳಸಲು ಸಾಧ್ಯವಾಗಿದ್ದು, ಸಾಂಪ್ರದಾಯಿಕ ವಿದ್ಯುತ್ ಮೇಲಿನ ಅವಲಂಬನೆ ಕಡಿಮೆಯಾಗಿದೆ. ರಾತ್ರಿ ವೇಳೆ ಹೊಲಗಳಿಗೆ ತೆರಳಿ ಪಂಪ್‌ಗಳನ್ನು ಚಾಲನೆ ಮಾಡುವುದು ಹಾಗೂ ನೀರಾವರಿಗಾಗಿ ಇಡೀ ರಾತ್ರಿ ಜಾಗರಣೆ ಮಾಡುವಂತಹ ಸಮಸ್ಯೆಗಳಿಂದ ರೈತರಿಗೆ ಮುಕ್ತಿ ದೊರಕುತ್ತಿದೆ. ಹಗಲಿನ ವೇಳೆಯಲ್ಲೇ ವಿಶ್ವಾಸಾರ್ಹ ವಿದ್ಯುತ್ ಲಭ್ಯವಾಗುತ್ತಿರುವುದರಿಂದ ರೈತರ ಸುರಕ್ಷತೆ, ಅನುಕೂಲತೆ ಮತ್ತು ಉತ್ಪಾದಕತೆ ಹೆಚ್ಚುತ್ತಿದೆ.
ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಮಾತನಾಡಿ, “ಕರ್ನಾಟಕದ ಸೌರ ಕೃಷಿ ಕ್ರಾಂತಿ ಸುಸ್ಥಿರ ಕೃಷಿ ಹಾಗೂ ಉತ್ತಮ ಆಡಳಿತಕ್ಕೆ ಹೊಸ ಮಾದರಿಯಾಗಿದೆ. ಯೋಜನೆಯ ಅನುಷ್ಠಾನದಲ್ಲಿದ್ದ ಅಡೆತಡೆಗಳನ್ನು ನಿವಾರಿಸಿ, ಪ್ರಕ್ರಿಯೆಯನ್ನು ಸರಳಗೊಳಿಸಿ ಹೊಸ ವೇಗ ನೀಡಿದ್ದೇವೆ. ಪ್ರತಿಯೊಂದು ಸೌರ ಕೃಷಿ ಪಂಪ್‌ಸೆಟ್ ಕರ್ನಾಟಕದ ಭವಿಷ್ಯಕ್ಕೆ ಮಾಡುವ ಶಾಶ್ವತ ಹೂಡಿಕೆಯಾಗಿದೆ. ಇದು ರಾಜ್ಯದ ವಿದ್ಯುತ್ ಖರೀದಿ ವೆಚ್ಚವನ್ನು ಕಡಿಮೆ ಮಾಡುತ್ತದೆ, ವಿದ್ಯುತ್ ಸಹಾಯಧನದ ಹೊರೆ ತಗ್ಗಿಸುತ್ತದೆ, ಇಂಧನ ಭದ್ರತೆಯನ್ನು ಬಲಪಡಿಸುತ್ತದೆ ಮತ್ತು ರೈತರ ಜೀವನಮಟ್ಟವನ್ನು ಸುಧಾರಿಸುತ್ತದೆ. ಇದು ಕೇವಲ ನವೀಕರಿಸಬಹುದಾದ ಇಂಧನ ಯೋಜನೆಯಲ್ಲ; ರಾಜ್ಯದ ಆರ್ಥಿಕ ಹಾಗೂ ಸಾಮಾಜಿಕ ಪರಿವರ್ತನೆಗೆ ದಾರಿಯಾಗಿರುವ ಮಹತ್ವದ ಕಾರ್ಯಕ್ರಮವಾಗಿದೆ” ಎಂದು ತಿಳಿಸಿದ್ದಾರೆ.
ಪ್ರಮುಖ ಅಂಶಗಳು:
- 27,700ಕ್ಕೂ ಹೆಚ್ಚು ಸೌರ ಕೃಷಿ ಪಂಪ್‌ಸೆಟ್‌ಗಳು ರಾಜ್ಯಾದ್ಯಂತ ಕಾರ್ಯಾರಂಭ
- ಸಚಿವ ಕೆ.ಜೆ. ಜಾರ್ಜ್ ಅವರ ಮುತುವರ್ಜಿಯಿಂದ 1 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಸ್ವೀಕಾರ
- ಸೌರ ಪಂಪ್‌ಸೆಟ್ ಅಳವಡಿಕೆಗೆ ಸರ್ಕಾರದಿಂದ ಶೇ.50 ಆರ್ಥಿಕ ಸಹಾಯಧನ
- 144 ಮೆಗಾವ್ಯಾಟ್ ಗ್ರಿಡ್ ವಿದ್ಯುತ್ ಬೇಡಿಕೆ ಕಡಿತ
- ವರ್ಷಕ್ಕೆ 240 ಮಿಲಿಯನ್ ಯೂನಿಟ್ ವಿದ್ಯುತ್ ಖರೀದಿ ತಪ್ಪಿಸುವ ಸಾಧನೆ
- ಎಸ್ಕಾಂಗಳಿಗೆ ವರ್ಷಕ್ಕೆ ಸುಮಾರು ₹146 ಕೋಟಿ ಉಳಿತಾಯ
- ರಾಜ್ಯ ಸರ್ಕಾರಕ್ಕೆ ವರ್ಷಕ್ಕೆ ₹200 ಕೋಟಿಗೂ ಹೆಚ್ಚು ಕೃಷಿ ವಿದ್ಯುತ್ ಸಹಾಯಧನ ಉಳಿತಾಯ
- ಹಗಲಿನ ವೇಳೆಯಲ್ಲೇ ವಿಶ್ವಾಸಾರ್ಹ ವಿದ್ಯುತ್ ಲಭ್ಯವಾಗುವುದರಿಂದ ರೈತರ ಸುರಕ್ಷತೆ, ಅನುಕೂಲತೆ ಮತ್ತು ಉತ್ಪಾದಕತೆ ಹೆಚ್ಚಳ











