ಮೈಸೂರು: ರಾಜ್ಯ ಸದಾ ಸುಭಿಕ್ಷವಾಗಿರಲಿ, ಉತ್ತಮ ಮಳೆ ಬಂದು ರೈತರ ಬದುಕು, ವರ್ತಕರ ವ್ಯಾಪಾರ ಮತ್ತು ಮಕ್ಕಳ ವಿದ್ಯಾಭ್ಯಾಸ ಪ್ರಗತಿಯಾಗಲಿ ಎಂದು ಹಾಗೂ ಹಿರಿಯ ನಾಯಕರಿಗೆ ಸಮಾಜ ಸೇವೆ ಮಾಡುವ ಶಕ್ತಿ ಮತ್ತು ತಾಳ್ಮೆ ದೊರಕಲಿ ಎಂದು ಚಾಮುಂಡೇಶ್ವರಿ ತಾಯಿ ಬಳಿ ಪ್ರಾರ್ಥಿಸಿದ್ದೇನೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದೇವರ ದರ್ಶನ ಮಾಡಿದ ಬಳಿಕ ಶನಿವಾರ ಮಾಧ್ಯಮಗಳಿಗೆ ಮಾತನಾಡಿದ ಅವರು, “ನಾನು ಇದೇ ಸ್ಥಳದಲ್ಲಿ ಈ ಹಿಂದೆ ಒಂದು ಮಾತು ಹೇಳಿದ್ದೆ. ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂದು. ಅದರ ಬಗ್ಗೆ ಅನೇಕರು ಚರ್ಚೆ ಮಾಡಿದರು, ಸಂತೋಷಪಟ್ಟರು, ನಕ್ಕರು, ಟೀಕೆ ಮಾಡಿದರು. ಆದರೆ ನನಗೆ ನಂಬಿಕೆ ಮತ್ತು ಚಾಮುಂಡೇಶ್ವರಿ ತಾಯಿಯ ಆಶೀರ್ವಾದ ಇತ್ತು. ಮೈಸೂರಿಗೆ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಬಂದಿದ್ದೇನೆ. ದುಃಖವನ್ನು ದೂರ ಮಾಡುವ ಚಾಮುಂಡಿ ತಾಯಿ ದುರ್ಗಾ ದೇವಿಯನ್ನು ದರ್ಶನ ಮಾಡಿದ್ದೇನೆ” ಎಂದು ಹೇಳಿದರು.
ಎಲ್ಲಾ ಧರ್ಮಗಳನ್ನು ಸಮಾನತೆಯಿಂದ ನೋಡಬೇಕು
“ನಾನು ನಂಬಿರುವ ನನ್ನ ಅಜ್ಜಯ್ಯ ಈ ರಾಜ್ಯ ಯಾವ ರೀತಿ ಸುಭಿಕ್ಷವಾಗಿರಬೇಕು ಎಂದು ಯಾವಾಗಲೂ ನನಗೆ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ. ಧರ್ಮ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಯಾವುದೇ ಧರ್ಮವಿರಲಿ, ಅವರವರ ನಂಬಿಕೆ, ಆಚಾರ-ವಿಚಾರ. ಸರ್ಕಾರವು ಎಲ್ಲಾ ಧರ್ಮಗಳನ್ನು ಸಮಾನತೆಯಿಂದ ನೋಡಬೇಕಾದ್ದು ಜವಾಬ್ದಾರಿ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಕುವೆಂಪು ಅವರ ಮಾತಿನಂತೆ ಈ ರಾಜ್ಯ ಶಾಂತಿಯ ತೋಟ. ಇದನ್ನು ಕಾಪಾಡುವುದು ನಮ್ಮ ಮೊದಲನೆಯ ಕರ್ತವ್ಯ” ಎಂದು ಸಿಎಂ ಹೇಳಿದರು.
“ಈ ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸಬೇಕು. ಸಾಕ್ಷಿ ಗುಡ್ಡೆಗಳನ್ನು ಬಿಟ್ಟುಹೋಗಬೇಕು ಎಂಬುದು ನನ್ನ ಧ್ಯೇಯ. ಎಲ್ಲರನ್ನೂ ಸಮಾನವಾಗಿ ಕರೆದುಕೊಂಡು ಹೋಗಬೇಕಿರುವುದು ನನ್ನ ಧರ್ಮ. ಧರ್ಮವನ್ನು ಎಲ್ಲಾ ಜನರ ಹಿತಕ್ಕಾಗಿ ಕಾಪಾಡಬೇಕು. ನಮ್ಮೆಲ್ಲರ ಕಷ್ಟ-ದುಃಖಗಳನ್ನು ದೂರ ಮಾಡಿ ಸುಭಿಕ್ಷತೆಯನ್ನು ಕೊಟ್ಟು ಆಶೀರ್ವದಿಸಬೇಕು, ನಮ್ಮೆಲ್ಲರನ್ನು ಕಾಪಾಡು ಎಂದು ನಾಡಿನ ದೇವತೆ ಚಾಮುಂಡೇಶ್ವರಿಯ ಪಾದಕ್ಕೆ ನಮಸ್ಕರಿಸಿದ್ದೇನೆ” ಎಂದರು.
ತಮಿಳುನಾಡಿಗೆ ನೀರು ಹರಿಸಲು ಮೌಖಿಕ ಸೂಚನೆ ಆಗಿದೆಯೇ ಎಂದು ಕೇಳಿದಾಗ, “ನೀರನ್ನು ನಾವು ತಡೆದು ಇಟ್ಟುಕೊಳ್ಳಲು ಆಗುವುದಿಲ್ಲ. ನಮ್ಮ ಸಂಕಟಗಳೆಲ್ಲಾ ದೂರವಾಗಲಿ ಎಂದು ಒಂದು ಮಾತಿನಲ್ಲಿ ಹೇಳಿದ್ದೇನೆ. ಆ ತಾಯಿಯ ಆಶೀರ್ವಾದ, ಗಂಗೆ-ಕಾವೇರಿ ಕೃಪೆ. ಕಾವೇರಿಯನ್ನು ನಂಬಿಕೊಂಡಂತೆ ಎಲ್ಲಾ ರೈತರಿಗೆ, ವರ್ತಕರಿಗೆ, ಕೈಗಾರಿಕೆಗಳಿಗೆ ಹಾಗೂ ತಮಿಳುನಾಡು, ಪುದುಚೇರಿ, ಬೆಂಗಳೂರು, ಮಂಡ್ಯ, ಮೈಸೂರು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶಗಳಿಗೆ ಚಾಮುಂಡೇಶ್ವರಿ ಅನುಗ್ರಹದಿಂದ ಈ ಕಾವೇರಿಯ ಸ್ವರೂಪಿ ಹರಿಯುತ್ತಿದ್ದಾಳೆ” ಎಂದು ಉತ್ತರಿಸಿದರು.
“ಪ್ರಾಣಿ-ಪಕ್ಷಿ ಆದಿಯಾಗಿ ಎಲ್ಲರೂ ಗಂಗೆಯಿಂದ ಬದುಕಬೇಕು. ಇದು ನಮ್ಮೆಲ್ಲರ ಸಂಕಲ್ಪವೂ ಆಗಿದೆ. ಉತ್ತಮ ವಾತಾವರಣ ಈ ರಾಜ್ಯದಲ್ಲಿ ನೆಲೆಸಲಿ, ಕಾವೇರಿ ತುಂಬಲಿ” ಎಂದು ಸಿಎಂ ಹೇಳಿದರು.











