ಬೆಂಗಳೂರು: ದೇಶದ ಅತ್ಯಂತ ಹಿರಿಯ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿಯವರನ್ನು ಸಭಾಪತಿ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್ ಸರ್ಕಾರ ನಡೆದುಕೊಂಡಿರುವ ರೀತಿ ಯಾವುದೇ ಸತ್ಸಂಪ್ರದಾಯಕ್ಕೆ ಅನುಗುಣವಾಗಿಲ್ಲ. ಇದು ಸಭಾಪತಿ ಸ್ಥಾನದ ಗೌರವಕ್ಕೆ ಹಾಗೂ ಸಂವಿಧಾನಕ್ಕೆ ಎಸಗಿದ ಅಪಮಾನವಾಗಿದೆ. ಕರ್ನಾಟಕ ವಿಧಾನ ಪರಿಷತ್ತಿನ ಇತಿಹಾಸದಲ್ಲಿ ಇದೊಂದು ಕೆಟ್ಟ ನಡವಳಿಕೆ ಹಾಗೂ ಕಪ್ಪು ಚುಕ್ಕೆಯಾಗಿ ಉಳಿಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಹೇಳಿಕೆಯಲ್ಲಿ ಅವರು ಹೇಳಿರುವಂತೆ, ಬಸವರಾಜ ಹೊರಟ್ಟಿಯವರು ಸುದೀರ್ಘ 46 ವರ್ಷಗಳ ಕಾಲ ನಿರಂತರವಾಗಿ ವಿಧಾನ ಪರಿಷತ್ ಸದಸ್ಯರಾಗಿ, ಸಚಿವರಾಗಿ ಹಾಗೂ ಸಭಾಪತಿಯಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಪಕ್ಷಾತೀತವಾಗಿ ವಿಷಯಾಧಾರಿತ ರಾಜಕಾರಣಕ್ಕೆ ಹೆಸರುವಾಸಿಯಾದ ಅವರನ್ನು ಮುಖ್ಯಮಂತ್ರಿಗಳ ಮನೆಗೆ ಕರೆಯಿಸಿ ಮಾತನಾಡಿ, ವಿಧಾನಸೌಧದಲ್ಲಿಯೇ ಕುಳಿತು ಒತ್ತಾಯಪೂರ್ವಕವಾಗಿ ರಾಜೀನಾಮೆ ಪಡೆದಿರುವುದು ಮತ್ತು ರಾಜೀನಾಮೆ ನೀಡಿದ ಕೇವಲ ಐದು ನಿಮಿಷಗಳಲ್ಲೇ ಅದನ್ನು ಅಂಗೀಕರಿಸಿ ಪ್ರಕಟಣೆ ಹೊರಡಿಸಿರುವುದು ಸರ್ಕಾರದ ದುರಾಲೋಚನೆಯನ್ನು ಪ್ರದರ್ಶಿಸುತ್ತದೆ.
ಈ ಪ್ರಕ್ರಿಯೆ ಯಾವುದೇ ಸತ್ಸಂಪ್ರದಾಯಕ್ಕೆ ಹೊಂದಿಕೆಯಾಗುವುದಿಲ್ಲ. ಸಭಾಪತಿ ಸ್ಥಾನದ ಗೌರವ ಹಾಗೂ ಸಂವಿಧಾನಕ್ಕೆ ಇದು ಅಪಮಾನವಾಗಿದೆ ಎಂದು ಬೊಮ್ಮಾಯಿ ಆರೋಪಿಸಿದ್ದಾರೆ. ಸರ್ಕಾರದ ಈ ನಡವಳಿಕೆ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಧಕ್ಕೆಯಾಗಿದೆ ಎಂದು ಅವರು ಹೇಳಿದ್ದಾರೆ.
ಸಭಾಪತಿಯಾಗಿ ಹೊರಟ್ಟಿಯವರು ನೀಡಿದ ಕೊಡುಗೆ ಮತ್ತು ಮಾಡಿದ ಕೆಲಸಗಳು ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯಲಿವೆ. ರಾಜೀನಾಮೆಯ ನಂತರವೂ ಅವರು ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿ ಮುಂದುವರಿಯಬೇಕು. ಯುವಕರಿಗೆ ಹಾಗೂ ಹೊಸ ರಾಜಕಾರಣಿಗಳಿಗೆ ತಮ್ಮ ಸುದೀರ್ಘ ಅನುಭವದ ಮೂಲಕ ಮಾರ್ಗದರ್ಶನ ನೀಡಬೇಕು ಎಂಬುದು ಸಾರ್ವಜನಿಕರ ಅಪೇಕ್ಷೆಯಾಗಿದೆ. ಅವರ ಹಿರಿತನ ಮತ್ತು ಅಪಾರ ಅನುಭವಕ್ಕೆ ರಾಜ್ಯದ ಜನತೆ ಸದಾ ಗೌರವಪೂರ್ವಕವಾಗಿ ಋಣಿಯಾಗಿರುತ್ತದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.











