ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸಂತಸ ವ್ಯಕ್ತಪಡಿಸಿ ಗ್ರಾಹಕರಿಗೆ, ವಿಶೇಷವಾಗಿ ಯುವಜನರಿಗೆ ಧನ್ಯವಾದ
ಹಾಸನ: ಸ್ವಾತಂತ್ರ್ಯ ದಿನಾಚರಣೆಯಂದು ಹೆಚ್‌ಎಂಟಿ ಕೈಗಡಿಯಾರಗಳ ಮಾರಾಟ ದಾಖಲೆಯ ಪ್ರಮಾಣದಲ್ಲಿ ನಡೆದಿದ್ದು, ಒಂದೇ ದಿನ ಸುಮಾರು ₹35 ಲಕ್ಷಕ್ಕೂ ಹೆಚ್ಚು ವಹಿವಾಟು ಆಗಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸ್ವಾತಂತ್ರ್ಯ ದಿನದ ಪ್ರಯುಕ್ತ ಹೆಚ್‌ಎಂಟಿ ಕಂಪನಿ ವಿಶೇಷ ಆವೃತ್ತಿಯ ಕೆಲವು ಅಪರೂಪದ ಕೈಗಡಿಯಾರಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಅಂದು ವಾಚ್‌ಗಳ ಖರೀದಿಗೆ ಮುಗಿಬಿದ್ದ ಗ್ರಾಹಕರು ಸುಮಾರು ಎರಡುವರೆ ಕಿಲೋಮೀಟರ್‌ಗೂ ಹೆಚ್ಚು ದೂರ ಸಾಲಿನಲ್ಲಿ ನಿಂತು ಖರೀದಿ ಮಾಡಿದ್ದರು. ಇದನ್ನು ಕಂಡು ನಾನು ಆಶ್ಚರ್ಯಚಕಿತನಾಗಿದ್ದೆ ಎಂದು ಅವರು ಹೇಳಿದರು.
“ಅಂದು ನಮ್ಮ ಕಡೆಯಿಂದ ಸಾವಿರಾರು ಕೈಗಡಿಯಾರಗಳು ಮಾರಾಟವಾಗಿದ್ದು, ಒಂದೇ ದಿನ ₹35 ಲಕ್ಷ ವಹಿವಾಟು ನಡೆದಿರುವುದು ಕಂಪನಿಯನ್ನು ಪುನಶ್ಚೇತನಗೊಳಿಸುವ ನಮ್ಮ ಉದ್ದೇಶಕ್ಕೆ ಮತ್ತಷ್ಟು ಬಲ ನೀಡಿದೆ” ಎಂದು ಸಚಿವರು ಹೇಳಿದರು.
ಹೆಚ್‌ಎಂಟಿ ಗಡಿಯಾರಗಳ ಬಗ್ಗೆ ಜನರಲ್ಲಿ ಇಂದಿಗೂ ಅಭಿಮಾನ ಮತ್ತು ಗೌರವ ಇದೆ. ಹಿಂದೆ ಹೆಚ್‌ಎಂಟಿ ಗಡಿಯಾರ ಕಟ್ಟುವುದು ಹೆಮ್ಮೆ ಮತ್ತು ಪ್ರತಿಷ್ಠೆಯ ಸಂಗತಿಯಾಗಿತ್ತು. ಆ ವೈಭವವನ್ನು ಮರಳಿ ತರುವುದು ನಮ್ಮ ಉದ್ದೇಶವಾಗಿದೆ. ಅದಕ್ಕಾಗಿ ಗಂಭೀರ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ಕಾರ್ಖಾನೆಗೆ ಮರುಜೀವ ನೀಡುವ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದ ನಿರಂತರ ಪ್ರಯತ್ನ ನಡೆಯುತ್ತಿದೆ. ಈ ಕುರಿತು ಯೋಜನಾ ಆಯೋಗದ ಸದಸ್ಯರಾದ ವಿ.ಕೆ. ಸಾರಸ್ವತ್ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿತ್ತು. ಸಮಿತಿ ಈಗಾಗಲೇ ವರದಿ ಸಲ್ಲಿಸಿ ಕೆಲವು ಮಹತ್ವದ ಶಿಫಾರಸುಗಳನ್ನು ಮಾಡಿದೆ. ಅದರಂತೆ ಕಾರ್ಖಾನೆಗೆ ಮರುಜೀವ ನೀಡಲು ಕೇಂದ್ರದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ಸಚಿವರು ಮಾಹಿತಿ ನೀಡಿದರು.
ಯುವಕರಿಗೆ ಕೃತಜ್ಞತೆ
ದೊಡ್ಡ ಪ್ರಮಾಣದಲ್ಲಿ ಯುವಕರು ಸ್ವಾತಂತ್ರ್ಯ ದಿನದ ವಾಚ್‌ಗಳನ್ನು ಖರೀದಿಸಿದ್ದಾರೆ. ವಯಸ್ಸಿನ ಹಂಗಿಲ್ಲದೆ ಹಿರಿಯರು, ಕಿರಿಯರು ಮತ್ತು ಮಕ್ಕಳು ಕೂಡ ಸಾಲಿನಲ್ಲಿ ನಿಂತು ಗಡಿಯಾರಗಳನ್ನು ಖರೀದಿಸಿದ್ದಾರೆ. ಹೆಚ್‌ಎಂಟಿಯ ಮೇಲೆ ಅವರೆಲ್ಲರೂ ಇರಿಸಿರುವ ಅಭಿಮಾನಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ಮುಖ್ಯವಾಗಿ ಯುವಜನತೆ ನಮ್ಮ ಗಡಿಯಾರಗಳಿಗೆ ಅತಿ ಹೆಚ್ಚು ಅಭಿಮಾನ ತೋರುತ್ತಿದ್ದಾರೆ. ಅವರ ಬೆಂಬಲ ಹೀಗೆಯೇ ಮುಂದುವರಿಯಲಿ ಎಂದು ಸಚಿವ ಕುಮಾರಸ್ವಾಮಿ ಅವರು ಕೋರಿದರು.











