ಬೆಂಗಳೂರು: ರಾಜ್ಯದ ಪ್ರವಾಸೋದ್ಯಮ ಮೂಲಸೌಕರ್ಯ ಬಲಪಡಿಸುವ ಮತ್ತು ಖಾಸಗಿ ಹೂಡಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಪ್ರವಾಸೋದ್ಯಮ ನೀತಿಯ 6ನೇ ಅಧಿಕಾರಯುಕ್ತ ಸಮಿತಿ ಸಭೆಯಲ್ಲಿ ಮಹತ್ವದ ನಿರ್ಧಾರಗಳು ಕೈಗೊಳ್ಳಲಾಗಿದೆ.
ಪ್ರವಾಸೋದ್ಯಮ ನೀತಿಯಡಿ 8 ಪ್ರೀಮಿಯಂ ಮತ್ತು 10 ಬಜೆಟ್ ಹೋಟೆಲ್‌ಗಳು ಸೇರಿದಂತೆ ಒಟ್ಟು 18 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗಳ ಮೂಲಕ ₹314.93 ಕೋಟಿ ಹೂಡಿಕೆಯಾಗಲಿದ್ದು, 655 ಹೊಸ ಹೋಟೆಲ್ ಕೊಠಡಿಗಳು ಸೇರ್ಪಡೆಯಾಗಿವೆ. ಇದರಿಂದ 1,542 ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಯೋಜನೆಗಳಿಗೆ ಅಂದಾಜು ₹47.23 ಕೋಟಿ ಸಹಾಯಧನವನ್ನು ಸಭೆಯಲ್ಲಿ ಅನುಮೋದಿಸಲಾಗಿದೆ.

ಇದೇ ಸಭೆಯಲ್ಲಿ 2024–29ರ ಕರ್ನಾಟಕ ಪ್ರವಾಸೋದ್ಯಮ ನೀತಿಯಡಿ 35 ಪ್ರೀಮಿಯಂ ಹಾಗೂ 43 ಬಜೆಟ್ ಹೋಟೆಲ್‌ಗಳು ಸೇರಿದಂತೆ ಒಟ್ಟು 78 ಯೋಜನೆಗಳಿಗೆ ತಾತ್ವಿಕ ಅನುಮೋದನೆ ನೀಡಲಾಗಿದೆ. ಈ ಯೋಜನೆಗಳು ಅನುಷ್ಠಾನಗೊಂಡ ಬಳಿಕ ರಾಜ್ಯದಲ್ಲಿ ₹1,080.97 ಕೋಟಿ ಹೂಡಿಕೆಯಾಗಲಿದ್ದು, 3,424 ಹೊಸ ಕೊಠಡಿಗಳು ಸೇರ್ಪಡೆಯಾಗುವ ನಿರೀಕ್ಷೆ ಇದೆ. ಇದರೊಂದಿಗೆ 3,707 ಉದ್ಯೋಗಗಳು ಸೃಷ್ಟಿಯಾಗಲಿವೆ.
ಹೊಸ ಹೋಟೆಲ್ ಯೋಜನೆಗಳಿಂದ ಪ್ರವಾಸಿ ತಾಣಗಳಲ್ಲಿ ಗುಣಮಟ್ಟದ ವಸತಿ ಸೌಲಭ್ಯ ಹೆಚ್ಚುವುದರ ಜೊತೆಗೆ, ಖಾಸಗಿ ಹೂಡಿಕೆ, ಸ್ಥಳೀಯ ಉದ್ಯೋಗ ಹಾಗೂ ಪ್ರವಾಸೋದ್ಯಮ ಆಧಾರಿತ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಚಿವ ಕೆ.ಜೆ. ಜಾರ್ಜ್ ಅವರು ಮಾತನಾಡಿ, “ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ಅಪಾರ ಅವಕಾಶಗಳಿದ್ದು, ಅದಕ್ಕೆ ಪೂರಕವಾಗಿ ಗುಣಮಟ್ಟದ ವಸತಿ ಮತ್ತು ಆತಿಥ್ಯ ಮೂಲಸೌಕರ್ಯವನ್ನು ಹೆಚ್ಚಿಸುವುದು ನಮ್ಮ ಆದ್ಯತೆಯಾಗಿದೆ. ಹೊಸ ಪ್ರವಾಸೋದ್ಯಮ ನೀತಿಯಡಿ ಖಾಸಗಿ ಹೂಡಿಕೆಗೆ ಉತ್ತೇಜನ ನೀಡುವುದರ ಜೊತೆಗೆ, ರಾಜ್ಯದ ವಿವಿಧ ಭಾಗಗಳಲ್ಲಿ ಉದ್ಯೋಗ ಮತ್ತು ಸ್ಥಳೀಯ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುವ ಗುರಿ ಹೊಂದಿದ್ದೇವೆ. ₹1,080 ಕೋಟಿಗೂ ಹೆಚ್ಚಿನ ಹೂಡಿಕೆಯೊಂದಿಗೆ 78 ಹೊಸ ಹೋಟೆಲ್ ಯೋಜನೆಗಳಿಗೆ ದೊರೆತಿರುವ ತಾತ್ವಿಕ ಅನುಮೋದನೆ ರಾಜ್ಯದ ಪ್ರವಾಸೋದ್ಯಮ ವಲಯದ ಬೆಳವಣಿಗೆಗೆ ಉತ್ತಮ ಸೂಚನೆಯಾಗಿದೆ” ಎಂದು ಹೇಳಿದ್ದಾರೆ.
ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಡಾ. ರಾಮ್ ಪ್ರಸಾದ್ ಮನೋಹರ್ ಅವರು, “ಹೊಸ ಹೋಟೆಲ್ ಯೋಜನೆಗಳ ಮೂಲಕ ಕೇವಲ ಕೊಠಡಿಗಳ ಸಂಖ್ಯೆಯನ್ನು ಹೆಚ್ಚಿಸುವುದಷ್ಟೇ ಅಲ್ಲ, ಪ್ರವಾಸಿಗರಿಗೆ ವಿವಿಧ ಬೆಲೆ ಶ್ರೇಣಿಗಳಲ್ಲಿ ಉತ್ತಮ ವಸತಿ ಆಯ್ಕೆಗಳನ್ನು ಕಲ್ಪಿಸುವುದು ನಮ್ಮ ಉದ್ದೇಶವಾಗಿದೆ. 35 ಪ್ರೀಮಿಯಂ ಮತ್ತು 43 ಬಜೆಟ್ ಹೋಟೆಲ್ ಯೋಜನೆಗಳು ಅನುಷ್ಠಾನಗೊಂಡಾಗ 3,424 ಕೊಠಡಿಗಳು ಹಾಗೂ 3,707 ಉದ್ಯೋಗಗಳು ಸೇರ್ಪಡೆಯಾಗಲಿವೆ. ಯೋಜನೆಗಳ ಅನುಷ್ಠಾನವನ್ನು ನಿಗದಿತ ಅವಧಿಯಲ್ಲಿ ಮುಂದುವರಿಸಲು ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ” ಎಂದು ತಿಳಿಸಿದ್ದಾರೆ.











