ಶಿಕ್ಷಕರನ್ನು ಎಸ್‌ಐಆರ್ ಮತ್ತು ಇತರ ಸರ್ವೆ ಕಾರ್ಯಗಳಿಂದ ಮುಕ್ತಗೊಳಿಸಿ; ಹೊಸ ಮಸೂದೆ ತರಲು ತಯಾರಿ
ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಕಾರ್ಯಕ್ಕೆ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರನ್ನು ನಿಯೋಜಿಸಿರುವುದರಿಂದ ಮಕ್ಕಳ ಶಿಕ್ಷಣಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕಾರ್ಯ ವಿಳಂಬವಾಗುತ್ತಲೇ ಇದ್ದು ಶಾಲೆಗಳಲ್ಲಿ ಸರಿಯಾಗಿ ಪಾಠ ನಡೆಯುತ್ತಿಲ್ಲ. ಹೀಗಾಗಿ ಶಿಕ್ಷಕರನ್ನು ಎಸ್‌ಐಆರ್ ಸೇರಿದಂತೆ ಇತರ ಸರ್ವೆ ಕಾರ್ಯಗಳಿಂದ ಹೊರಗಿಡಬೇಕು ಎಂದು ಅವರು ಚುನಾವಣಾ ಆಯೋಗಕ್ಕೆ ಒತ್ತಾಯಿಸಿದ್ದಾರೆ.
ಗೃಹ ಕಚೇರಿಯಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, “ನಮ್ಮ ಶಿಕ್ಷಕರನ್ನು ಎಸ್‌ಐಆರ್ ಪ್ರಕ್ರಿಯೆಯಿಂದ ಹೊರಗಿಡಿ. ಮಕ್ಕಳ ವಿದ್ಯಾಭ್ಯಾಸಕ್ಕೆ ಬಹಳ ತೊಂದರೆಯಾಗುತ್ತಿದೆ ಎಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ. ಚುನಾವಣಾ ಆಯೋಗ ಮಾನವೀಯತೆ ಇಲ್ಲದಂತೆ ವರ್ತಿಸುತ್ತಿದೆ” ಎಂದು ಹೇಳಿದರು.
ಎಸ್‌ಐಆರ್ ಕಾರ್ಯದ ಹೊರೆಯಿಂದಾಗಿ ಶಿಕ್ಷಕರು ಬಳಲಿದ್ದಾರೆ. ಶಾಲೆಗಳಲ್ಲಿ ಸರಿಯಾಗಿ ಶೈಕ್ಷಣಿಕ ಚಟುವಟಿಕೆಗಳು ನಡೆಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಮಕ್ಕಳ ಫಲಿತಾಂಶದ ಮೇಲೂ ಪರಿಣಾಮ ಬೀರುವ ಆತಂಕವಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಶಾಲಾ ಮಕ್ಕಳು ಮತ್ತು ಪೋಷಕರಿಂದ “ಶಾಲೆಯಲ್ಲಿ ಶಿಕ್ಷಕರೇ ಇಲ್ಲ, ಮಧ್ಯಾಹ್ನದ ಊಟದ ಬಳಿಕ ಮಕ್ಕಳನ್ನು ಮನೆಗೆ ಕಳುಹಿಸಲಾಗುತ್ತಿದೆ” ಎಂಬಂತಹ ದೂರುಗಳು ಬಂದಿವೆ ಎಂದು ಅವರು ತಿಳಿಸಿದರು.

ಶಿಕ್ಷಕರಿಗಾಗಿ ಪ್ರತ್ಯೇಕ ವಿಧೇಯಕ
ಜಾತಿ ಗಣತಿ, ವಿವಿಧ ಸಮೀಕ್ಷೆಗಳು ಹಾಗೂ ಆಡಳಿತಾತ್ಮಕ ಸರ್ವೆ ಕಾರ್ಯಗಳಿಗೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರನ್ನು ಬಳಸಿಕೊಳ್ಳದಂತೆ ಹೊಸ ಮಸೂದೆ ರೂಪಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು. “ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕಾದರೆ, ಶಿಕ್ಷಕರನ್ನು ಅನ್ಯ ಕೆಲಸಗಳಿಗೆ ಬಳಸಿಕೊಳ್ಳುವುದು ನಿಲ್ಲಬೇಕು. ಇದಕ್ಕಾಗಿ ಹೊಸ ವಿಧೇಯಕ ಸಿದ್ಧಪಡಿಸುತ್ತಿದ್ದೇನೆ. ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದ್ದೇನೆ. ಸಚಿವ ಸಂಪುಟದ ಮುಂದೆ ತಂದು ಮುಂದಿನ ಅಧಿವೇಶನದಲ್ಲಿ ಬಿಲ್ ಜಾರಿಗೆ ತರುವ ಪ್ರಯತ್ನ ಮಾಡುತ್ತೇವೆ” ಎಂದು ಅವರು ಹೇಳಿದರು.
ಶಿಕ್ಷಕರಿಗೆ ಪಾಠ ಬೋಧನೆಯೇ ಪ್ರಮುಖ ಜವಾಬ್ದಾರಿ. ಆದರೆ ಜಾತಿ ಗಣತಿ, ವಿವಿಧ ಸರ್ವೆಗಳಿಗೆ ಶಿಕ್ಷಕರನ್ನೇ ಬಳಸಿಕೊಳ್ಳುವ ವ್ಯವಸ್ಥೆ ನಿರ್ಮಾಣವಾಗಿದೆ. ಇದನ್ನು ಬದಲಾಯಿಸಲೇಬೇಕು ಎಂದು ಅವರು ಒತ್ತಿ ಹೇಳಿದರು. ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರು ಸಹ ಈ ವಿಚಾರವನ್ನು ಹಲವು ಬಾರಿ ಪ್ರಸ್ತಾಪಿಸಿ ಒತ್ತಡ ಹಾಕಿದ್ದಾರೆ ಎಂದು ಸಚಿವರು ನೆನಪಿಸಿದರು.
ರಾಜ್ಯ ಸರ್ಕಾರ ವಿವಿಧ ಸಮೀಕ್ಷೆಗಳನ್ನು ನಡೆಸಿದಾಗ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಎಸ್‌ಐಆರ್‌ನಿಂದ ಮಾತ್ರ ಸಾಕಷ್ಟು ತೊಂದರೆಯಾಗುತ್ತಿದೆ. ಯಾವುದೇ ಸರ್ಕಾರಿ ನೌಕರರನ್ನು ಕೇಳಿದರೂ “ಎಸ್‌ಐಆರ್ ಕೆಲಸದಲ್ಲಿದ್ದೇವೆ” ಎಂಬ ಉತ್ತರ ಬರುತ್ತಿದೆ ಎಂದು ಅವರು ಪ್ರಶ್ನಿಸಿದರು.
ಸಿಜೆಪಿ ಪ್ರತಿನಿಧಿಗಳು ರಾಜ್ಯದ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರ ನಿಯೋಜನೆಯಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದರು. ಇದು ರಾಷ್ಟ್ರೀಯ ವಿಷಯವಾಗಿದ್ದು, ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ ಮಾನವೀಯವಾಗಿ ನಡೆದುಕೊಳ್ಳಬೇಕು ಎಂದು ಸಚಿವರು ಉತ್ತರಿಸಿದ್ದಾರೆ.
ಮಧ್ಯವಾರ್ಷಿಕ ಪರೀಕ್ಷೆಗಳು ಆರಂಭವಾಗಿದ್ದು, ಪೂರ್ವಭಾವಿ ಪರೀಕ್ಷೆಗಳು ಮುಂದುವರಿಯುತ್ತಿವೆ. ಈ ಸಂದರ್ಭದಲ್ಲಿ ಶಿಕ್ಷಕರು ಶಾಲೆಗಳಲ್ಲಿ ಲಭ್ಯವಿಲ್ಲದಿದ್ದರೆ ಮಕ್ಕಳು ಉತ್ತಮವಾಗಿ ಪರೀಕ್ಷೆ ಎದುರಿಸುವುದು ಹೇಗೆ ಎಂಬ ಆತಂಕವಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಎಸ್‌ಐಆರ್ ಕುರಿತು ರಾಜಕೀಯ ಆರೋಪಗಳು
ಎಸ್‌ಐಆರ್ ಪ್ರಕ್ರಿಯೆ ಕುರಿತು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ವ್ಯಕ್ತವಾಗುತ್ತಿರುವ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ಮತದಾನದ ಹಕ್ಕಿನ ರಕ್ಷಣೆಯ ಕುರಿತು ಪ್ರಶ್ನೆಗಳು ಉದ್ಭವಿಸಿರುವುದಾಗಿ ಹೇಳಿದರು. “ಮತಗಳೇ ಅಕ್ರಮವಾಗಿ ಕಳೆದುಹೋದರೆ ಪ್ರಜಾಪ್ರಭುತ್ವಕ್ಕೆ ಏನು ಬೆಲೆ? ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನಕ್ಕೆ ಬೆಲೆಯೇ ಇಲ್ಲವೇ? ಮತದಾನದ ವ್ಯವಸ್ಥೆಯ ಮೇಲೆ ಜನರ ನಂಬಿಕೆ ಉಳಿಯಬೇಕು” ಎಂದು ಅವರು ಹೇಳಿದರು.
ಶೂ-ಸಾಕ್ಸ್ ಗುಣಮಟ್ಟ ಕಳಪೆ ಎಂಬುದು ಸುಳ್ಳು
ಶಾಲಾ ಮಕ್ಕಳಿಗೆ ವಿತರಿಸಲಾಗುತ್ತಿರುವ ಶೂ ಮತ್ತು ಸಾಕ್ಸ್‌ಗಳ ಗುಣಮಟ್ಟ ಕಳಪೆಯಾಗಿದೆ ಎಂಬ ಆರೋಪವನ್ನು ಸಚಿವರು ನಿರಾಕರಿಸಿದರು. “ಗುಣಮಟ್ಟ ಕಳಪೆ ಎಂಬುದು ಸುಳ್ಳು. ಆದರೆ ಸೈಜ್‌ನಲ್ಲಿ ವ್ಯತ್ಯಾಸವಾಗಿರುವುದನ್ನು ಒಪ್ಪಿಕೊಳ್ಳುತ್ತೇನೆ” ಎಂದು ಹೇಳಿದ ಅವರು, ಲೋಕಾಯುಕ್ತರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸುವ ಎರಡು ದಿನಗಳ ಮುನ್ನವೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ತಿಳಿಸಿದರು. ಎಲ್ಲಾ ಜಿಲ್ಲೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ ಶಾಲೆಗಳಿಗೆ ಭೇಟಿ ನೀಡಿ ವರದಿ ನೀಡುವಂತೆ ಸೂಚಿಸಲಾಗಿದೆ. ಸೈಜ್ ಸಮಸ್ಯೆ ಇರುವ ಮಕ್ಕಳಿಗೆ ಬೇರೆ ಶೂ ಮತ್ತು ಸಾಕ್ಸ್ ವಿತರಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.











