ಶಿವಮೊಗ್ಗ (ಹೊಸನಗರ): ಕಾಂಗ್ರೆಸ್ ಪಕ್ಷದೊಳಗೆ ನಡೆಯುತ್ತಿರುವ ಅಧಿಕಾರದ ಸಂಘರ್ಷ ಈಗ ಬಹಿರಂಗವಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ. ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮೂಲೆಗುಂಪು ಮಾಡುವ ಪ್ರಯತ್ನಗಳು ಪಕ್ಷದೊಳಗೇ ನಡೆಯುತ್ತಿವೆಯೇ ಎಂಬ ಗಂಭೀರ ಅನುಮಾನಗಳು ಮೂಡಿವೆ ಎಂದು ಅವರು ಹೇಳಿದರು.
“ಯಾವ ಸಿದ್ದರಾಮಯ್ಯನವರ ನಾಯಕತ್ವದಿಂದ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿತೋ, ಅದೇ ಸಿದ್ದರಾಮಯ್ಯನವರನ್ನು ಮೂಲೆಗುಂಪು ಮಾಡುವ ಪ್ರಯತ್ನಗಳು ಕಾಂಗ್ರೆಸ್ನೊಳಗೇ ನಡೆಯುತ್ತಿವೆ. ಸ್ಟಿಂಗ್ ಆಪರೇಷನ್ಗಳ ಸುತ್ತ ನಡೆಯುತ್ತಿರುವ ಬೆಳವಣಿಗೆಗಳು ಪಕ್ಷದ ಆಂತರಿಕ ಅಧಿಕಾರ ಸಂಘರ್ಷವನ್ನು ಬಹಿರಂಗಪಡಿಸುತ್ತಿವೆ” ಎಂದು ವಿಜಯೇಂದ್ರ ತಿಳಿಸಿದರು.
ಸ್ಟಿಂಗ್ ಆಪರೇಷನ್ಗಳ ಹಿಂದೆ ಯಾರು ಇದ್ದಾರೆ, ಅವುಗಳನ್ನು ರೂಪಿಸಿದವರು ಯಾರು, ನಿರ್ದೇಶಕರು ಯಾರು ಎಂಬುದನ್ನು ಕಾಂಗ್ರೆಸ್ ನಾಯಕರೇ ಸ್ಪಷ್ಟಪಡಿಸಬೇಕು ಎಂದು ಅವರು ಒತ್ತಾಯಿಸಿದರು. ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ಹೇಳಿಕೆಗಳು ಸೇರಿದಂತೆ ಕಾಂಗ್ರೆಸ್ ನಾಯಕರ ಇತ್ತೀಚಿನ ಮಾತುಗಳನ್ನು ಗಮನಿಸಿದರೆ, ಪಕ್ಷದೊಳಗೆ ಏನು ನಡೆಯುತ್ತಿದೆ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ ಎಂದು ಅವರು ಹೇಳಿದರು.
ಸಿದ್ದರಾಮಯ್ಯ ಅವರು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿರುವುದು ಈ ಬೆಳವಣಿಗೆಗಳ ಗಂಭೀರತೆಯನ್ನು ತೋರಿಸುತ್ತದೆ. ನ್ಯಾಯಾಲಯದ ತಡೆಯಾಜ್ಞೆಯ ಕುರಿತ ಚರ್ಚೆಗಿಂತಲೂ, ಕಾಂಗ್ರೆಸ್ನೊಳಗಿನ ಅಧಿಕಾರ ಸಂಘರ್ಷವೇ ದೊಡ್ಡ ವಿಚಾರ ಎಂದು ವಿಜಯೇಂದ್ರ ಅಭಿಪ್ರಾಯಪಟ್ಟರು.
ಸಚಿವರು ಮತ್ತು ಶಾಸಕರು ಪರಸ್ಪರ ಅನುಮಾನ ಹಾಗೂ ಆತಂಕದ ವಾತಾವರಣದಲ್ಲಿ ಇರುವಂತಾಗಿದೆ. ಯಾವ ಸಚಿವರ ವಿರುದ್ಧ ಯಾವಾಗ ಸ್ಟಿಂಗ್ ಆಪರೇಷನ್ ನಡೆಯಬಹುದು, ಅದರ ಹಿಂದೆ ಪಕ್ಷದೊಳಗಿನವರೇ ಇದ್ದಾರೆಯೇ ಎಂಬ ಪ್ರಶ್ನೆಗಳು ಅವರನ್ನು ಕಾಡುತ್ತಿವೆ ಎಂದು ಅವರು ಆರೋಪಿಸಿದರು.
ಕಾಂಗ್ರೆಸ್ ಪಕ್ಷದೊಳಗಿನ ಅಧಿಕಾರದ ಕಚ್ಚಾಟ ಇದೇ ರೀತಿ ಮುಂದುವರಿದರೆ ರಾಜ್ಯದಲ್ಲಿ ಮೂರನೇ ಮುಖ್ಯಮಂತ್ರಿ ಬಂದರೂ ಅಚ್ಚರಿಪಡಬೇಕಿಲ್ಲ ಎಂದು ವಿಜಯೇಂದ್ರ ಎಚ್ಚರಿಸಿದರು. “ಈ ಮಾತನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಆಡಳಿತ ಪಕ್ಷದೊಳಗಿನ ಗೊಂದಲ ಯಾವ ಹಂತಕ್ಕೆ ತಲುಪುತ್ತದೆ ಎಂಬುದನ್ನು ಕಾದು ನೋಡಬೇಕಿದೆ” ಎಂದು ಅವರು ಹೇಳಿದರು.
ನಾಳೆಯೇ ಚುನಾವಣೆ ಘೋಷಣೆಯಾದರೂ ಆಡಳಿತ ಪಕ್ಷದ 20–25 ಶಾಸಕರು ಬಿಜೆಪಿಗೆ ಸೇರುವಂತಹ ರಾಜಕೀಯ ವಾತಾವರಣ ರಾಜ್ಯದಲ್ಲಿದೆ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು. ಆದರೆ ಬಿಜೆಪಿ ಈ ಸರ್ಕಾರವನ್ನು ಕೆಡವಿ ಅಧಿಕಾರಕ್ಕೆ ಬರುವ ಉದ್ದೇಶ ಹೊಂದಿಲ್ಲ. ಕಾಂಗ್ರೆಸ್ ಸರ್ಕಾರ ಇನ್ನೊಂದು ವರ್ಷ ಆಡಳಿತ ನಡೆಸಲಿ ಎಂಬುದೇ ಪಕ್ಷದ ಆಶಯ. ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವ ಜವಾಬ್ದಾರಿ ಕಾಂಗ್ರೆಸ್ ಸರ್ಕಾರದ ಮೇಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಕಾಂಗ್ರೆಸ್ನ ಆಂತರಿಕ ಸಂಘರ್ಷ, ಸ್ಟಿಂಗ್ ಆಪರೇಷನ್ಗಳ ವಿವಾದ ಹಾಗೂ ನಾಯಕತ್ವದ ಕುರಿತ ಗೊಂದಲಗಳಿಗೆ ಕಾಂಗ್ರೆಸ್ ನಾಯಕರೇ ಉತ್ತರ ನೀಡಬೇಕು. ರಾಜ್ಯದ ಜನರು ಇಂತಹ ಬೆಳವಣಿಗೆಗಳನ್ನು ಗಮನಿಸುತ್ತಿದ್ದಾರೆ. ಆಡಳಿತ ಪಕ್ಷವು ತನ್ನ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವತ್ತ ಗಮನ ಹರಿಸಬೇಕು ಎಂದು ವಿಜಯೇಂದ್ರ ತಿಳಿಸಿದರು.











