ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಹಾಗೂ ಸಂಕಷ್ಟದಲ್ಲಿರುವ ರೈತರ ಹಿತಾಸಕ್ತಿ ಕಾಪಾಡಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದ್ದಾರೆ.
ಈಗಾಗಲೇ 217 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ವೈಜ್ಞಾನಿಕ ಮೌಲ್ಯಮಾಪನ ಹಾಗೂ ಸ್ಥಳ ಪರಿಶೀಲನೆಯ ಆಧಾರದಲ್ಲಿ ಹೊಸದಾಗಿ 9 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಿ ಆದೇಶ ಹೊರಡಿಸಲಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಬರಪೀಡಿತ ತಾಲ್ಲೂಕುಗಳ ಸಂಖ್ಯೆ 226ಕ್ಕೆ ಏರಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಹೊಸದಾಗಿ ಘೋಷಿಸಲಾದ ತಾಲ್ಲೂಕುಗಳಲ್ಲಿ ಹಾಸನ ಜಿಲ್ಲೆಯ ಸಕಲೇಶಪುರವನ್ನು ತೀವ್ರ ಬರಪೀಡಿತ ಎಂದು ಗುರುತಿಸಲಾಗಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ, ಶಿವಮೊಗ್ಗ ಜಿಲ್ಲೆಯ ಹೊಸನಗರ ಮತ್ತು ಸಾಗರ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಮೂಡುಬಿದಿರೆ ಹಾಗೂ ಮೂಲ್ಕಿ, ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ಮತ್ತು ದಾಂಡೇಲಿ ಸೇರಿದಂತೆ 8 ತಾಲ್ಲೂಕುಗಳನ್ನು ಮಧ್ಯಮ ಬರಪೀಡಿತ ಎಂದು ಘೋಷಿಸಲಾಗಿದೆ.
ಇನ್ನುಳಿದ ತಾಲ್ಲೂಕುಗಳಲ್ಲೂ ಬರ ಪರಿಸ್ಥಿತಿಯ ಮೇಲ್ವಿಚಾರಣೆ ಮುಂದುವರಿಯಲಿದೆ. ಮಾನದಂಡಗಳಿಗೆ ಒಳಪಟ್ಟಲ್ಲಿ ಮುಂದಿನ ಹಂತದಲ್ಲಿ ಹೆಚ್ಚುವರಿ ತಾಲ್ಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಬರದಿಂದ ರೈತರ ಜೀವನೋಪಾಯಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದು, ಬೆಳೆಹಾನಿಗೆ ಸೂಕ್ತ ಪರಿಹಾರ ಒದಗಿಸುವುದು ಹಾಗೂ ಗ್ರಾಮೀಣ ಜನರ ಹಿತ ಕಾಯುವುದು ಸರ್ಕಾರದ ಆದ್ಯತೆ ಎಂದು ಅವರು ಹೇಳಿದ್ದಾರೆ.











