ಕಳೆದಕಲಬುರಗಿ ಪೀಠ: ಒಂದು ವರ್ಷದಲ್ಲಿ 188 ದಿನ ವಿಚಾರಣೆ, 3,694 ಪ್ರಕರಣ ವಿಲೇವಾರಿ; 80 ಅಧಿಕಾರಿಗಳಿಗೆ ₹7.78 ಲಕ್ಷ ದಂಡ
ಕಲಬುರಗಿ: ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದ ರಾಜ್ಯ ಮಾಹಿತಿ ಆಯುಕ್ತ ಬಿ. ವೆಂಕಟಸಿಂಗ್ ಅವರು ಅಧಿಕಾರ ವಹಿಸಿಕೊಂಡು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಗಣನೀಯ ಸಾಧನೆ ಮೆರೆದಿದ್ದಾರೆ. ಕಳೆದ ಒಂದು ವರ್ಷದಲ್ಲಿ 188 ದಿನಗಳ ವಿಚಾರಣೆ ನಡೆಸಿ ಒಟ್ಟು 3,694 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಮಾಹಿತಿ ನೀಡದ 80 ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ₹7,78,000 ದಂಡ ವಿಧಿಸಲಾಗಿದ್ದು, ಇದರಲ್ಲಿ ₹7,37,000 ವಸೂಲಿ ಮಾಡಲಾಗಿದೆ. ಜೊತೆಗೆ 35 ಮೇಲ್ಮನವಿದಾರರಿಗೆ ಒಟ್ಟು ₹96,000 ಪರಿಹಾರ ನೀಡಲು ಆದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನವೆಂಬರ್ 25, 2025ರಿಂದ ವಿಚಾರಣೆ ಆರಂಭಿಸಲಾಗಿದ್ದು, ಇಂದಿನವರೆಗೆ ಒಟ್ಟು 7,262 ಪ್ರಕರಣಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡು ಅವುಗಳಲ್ಲಿ 3,694 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಕಲಬುರಗಿ ಪೀಠದಲ್ಲಿ ಒಟ್ಟು 20,398 ದ್ವಿತೀಯ ಮೇಲ್ಮನವಿ ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳಲ್ಲಿ 13,468 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಪ್ರಸ್ತುತ 6,930 ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿವೆ.
ಹಿಂದೆ ಬೆಂಗಳೂರಿನಲ್ಲಿ ಸಲ್ಲಿಸಬೇಕಾಗಿದ್ದ ದ್ವಿತೀಯ ಮೇಲ್ಮನವಿ ಅರ್ಜಿಗಳನ್ನು ಈ ವರ್ಷದ ಫೆಬ್ರವರಿಯಿಂದ ಕಲಬುರಗಿ ಪೀಠದಲ್ಲೇ ಸ್ವೀಕರಿಸಲಾಗುತ್ತಿದೆ. ಇಲ್ಲಿಯವರೆಗೆ 2,432 ದ್ವಿತೀಯ ಮೇಲ್ಮನವಿ ಅರ್ಜಿಗಳು ಸಲ್ಲಿಕೆಯಾಗಿವೆ. ವಿಶೇಷವಾಗಿ ಗ್ರಾಮ ಪಂಚಾಯತ್ಗಳಿಗೆ ಸಂಬಂಧಿಸಿದ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿವೆ ಎಂದು ಆಯುಕ್ತರು ತಿಳಿಸಿದರು.
ಜಿಲ್ಲಾವಾರು ಬಾಕಿ ಪ್ರಕರಣಗಳು:
ಬೀದರ್ – 560, ಕಲಬುರಗಿ – 1,483, ಯಾದಗಿರಿ – 665, ರಾಯಚೂರು – 2,059, ಕೊಪ್ಪಳ – 649, ಬಳ್ಳಾರಿ – 885, ವಿಜಯನಗರ – 629. ಒಟ್ಟು 6,930 ಪ್ರಕರಣಗಳು ಬಾಕಿ ಇವೆ.
ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮತ್ತು ಪ್ರಥಮ ಮೇಲ್ಮನವಿ ಪ್ರಾಧಿಕಾರಗಳ ಅಧಿಕಾರಿಗಳಿಗೆ ಮಾಹಿತಿ ನೀಡುವಲ್ಲಿ ಇರುವ ಗೊಂದಲಗಳನ್ನು ನಿವಾರಿಸಲು ಕಲಬುರಗಿ ಪೀಠ ವ್ಯಾಪ್ತಿಯ 7 ಜಿಲ್ಲೆಗಳಲ್ಲಿ ಕಾರ್ಯಾಗಾರಗಳನ್ನು ಏರ್ಪಡಿಸಲಾಗಿದೆ.
ಮಹತ್ವದ ಪ್ರಕರಣಗಳು
ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ಗಳನ್ನು ಸಾರ್ವಜನಿಕ ಪ್ರಾಧಿಕಾರ ಎಂದು ಘೋಷಿಸಿದ್ದು ಪ್ರಮುಖ ಆದೇಶವಾಗಿದೆ. 2010ರಿಂದ 2022ರವರೆಗೆ ಬಾಕಿ ಉಳಿದಿದ್ದ 500ಕ್ಕೂ ಹೆಚ್ಚು ಹಳೆಯ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ.
ಸಿರವಾರ ಪೊಲೀಸ್ ಠಾಣೆಯಲ್ಲಿ ಸಿಸಿಟಿವಿ ದೃಶ್ಯಾವಳಿ ನೀಡಲು ವಿಳಂಬ ಮಾಡಿದ್ದಕ್ಕಾಗಿ ಮೂವರು ಪಿಎಸ್ಐಗಳಿಗೆ ತಲಾ ₹25,000 ದಂಡ ವಿಧಿಸಿ ವಸೂಲಿ ಮಾಡಲಾಗಿದೆ. ಜೊತೆಗೆ ಪೊಲೀಸ್ ಕಾಯ್ದೆ ನಿಯಮ 7ರ ಅಡಿಯಲ್ಲಿ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿದ್ದು, ಹಿರಿಯ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
ನಿವೇಶನ ಮತ್ತು ಸಿಬ್ಬಂದಿ ಕೊರತೆ
ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಕಲಬುರಗಿ ಪೀಠ 2024ರಿಂದ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಲೋಕೋಪಯೋಗಿ ಇಲಾಖೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಖಾಯಂ ಕಟ್ಟಡ ನಿರ್ಮಾಣಕ್ಕೆ ಸೂಕ್ತ ನಿವೇಶನ ಒದಗಿಸುವಂತೆ ಮುಖ್ಯಮಂತ್ರಿ, ಜಿಲ್ಲಾ ಇನ್ಚಾರ್ಜ್ ಸಚಿವ ಮತ್ತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಆಯೋಗಕ್ಕೆ ಅಗತ್ಯ ಸಿಬ್ಬಂದಿ ಕೊರತೆ ಇದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಿಬ್ಬಂದಿ ನೀಡಿದರೆ ಹೆಚ್ಚು ಪ್ರಕರಣಗಳನ್ನು ವೇಗವಾಗಿ ವಿಲೇವಾರಿ ಮಾಡಲು ಸಾಧ್ಯವಾಗುತ್ತದೆ ಎಂದು ಆಯುಕ್ತರು ಹೇಳಿದ್ದಾರೆ.











