ಬೆಂಗಳೂರು: ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ಅವರು ಇಂದು ಲೋಕಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರು ನೂತನ ರಾಜ್ಯಪಾಲರಿಗೆ ಅಧಿಕಾರ ಮತ್ತು ಗೌಪ್ಯತಾ ಪ್ರಮಾಣ ವಚನ ಬೋಧಿಸಿದರು.
ಪ್ರಮಾಣ ವಚನ ಸಮಾರಂಭಕ್ಕೂ ಮುನ್ನ ಡಾ. ಸುಧಾ ಯಾದವ್ ಅವರು ಬೆಂಗಳೂರಿನ ರಾಷ್ಟ್ರೀಯ ಮಿಲಿಟರಿ ಸ್ಮಾರಕಕ್ಕೆ ಭೇಟಿ ನೀಡಿ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರಿಗೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.

ಹಾಲಿ ರಾಜ್ಯಪಾಲರಾಗಿದ್ದ ಥಾವರ್ ಚಂದ್ ಗೆಹ್ಲೋಟ್ ಅವರ ಅಧಿಕಾರಾವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡಾ. ಸುಧಾ ಯಾದವ್ ಅವರನ್ನು ಕರ್ನಾಟಕದ ನೂತನ ರಾಜ್ಯಪಾಲರನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದರು. ಇದರೊಂದಿಗೆ ಅವರು ಕರ್ನಾಟಕದ 20ನೇ ರಾಜ್ಯಪಾಲರಾಗಿ ಹಾಗೂ ರಾಜ್ಯದ ಎರಡನೇ ಮಹಿಳಾ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿಂದೆ 1999ರಿಂದ 2002ರವರೆಗೆ ವಿ.ಎಸ್. ರಮಾದೇವಿ ಅವರು ರಾಜ್ಯದ ಮೊದಲ ಮಹಿಳಾ ರಾಜ್ಯಪಾಲೆಯಾಗಿ ಸೇವೆ ಸಲ್ಲಿಸಿದ್ದರು.

ಐತಿಹಾಸಿಕ ಪ್ರಮಾಣ ವಚನ ಸಮಾರಂಭದಲ್ಲಿ ನಿರ್ಗಮಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್, ಪ್ರವಾಸೋದ್ಯಮ ಹಾಗೂ ಇಂದನ ಸಚಿವ ಕೆ.ಜೆ. ಜಾರ್ಜ್, ಗೃಹ ಸಚಿವ ಪ್ರಿಯಂಕ್ ಖರ್ಗೆ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾಧಿ ಟಿ. ನಾರಾಯಣಸ್ವಾಮಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಸಚಿವರು, ಶಾಸಕರು, ಸಂಸದರು, ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಡಾ. ಸುಧಾ ಯಾದವ್ ಅವರ ಹಿನ್ನೆಲೆ:
ಡಾ. ಸುಧಾ ಯಾದವ್ ಅವರು ಕಾರ್ಗಿಲ್ ಯುದ್ಧ ಹುತಾತ್ಮ ಯೋಧನ ಪತ್ನಿ. ಅವರ ಪತಿ ಸುಖಬೀರ್ ಸಿಂಗ್ ಯಾದವ್ ಅವರು ಬಿಎಸ್ಎಫ್ ಉಪ ಕಮಾಂಡೆಂಟ್ ಆಗಿದ್ದು, 1999ರ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನಿ ಪಡೆಗಳ ಫಿರಂಗಿ ದಾಳಿಯಲ್ಲಿ ಹುತಾತ್ಮರಾಗಿದ್ದರು. ಅವರಿಗೆ ಮರಣೋತ್ತರವಾಗಿ ಸೇನಾ ಪದಕ ನೀಡಿ ಗೌರವಿಸಲಾಗಿತ್ತು.

ಉನ್ನತ ಶಿಕ್ಷಣ ಹೊಂದಿರುವ ಅವರು ಐಐಟಿ ರೂರ್ಕಿಯಲ್ಲಿ ರಸಾಯನಶಾಸ್ತ್ರದಲ್ಲಿ ಎಂ.ಎಸ್ಸಿ ಮುಗಿಸಿ ಚಿನ್ನದ ಪದಕ ಗಳಿಸಿದ್ದು, ಪಿಎಚ್ಡಿ ಪದವೀಧರೆಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರೇರಣೆಯಿಂದ ರಾಜಕೀಯಕ್ಕೆ ಪ್ರವೇಶಿಸಿದ ಅವರು 1999ರಿಂದ 2004ರವರೆಗೆ ಹರಿಯಾಣದ ಮಹೇಂದ್ರಗಢ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿ ಸೇವೆ ಸಲ್ಲಿಸಿದ್ದಾರೆ. ಬಿಜೆಪಿ ಸಂಸದೀಯ ಮಂಡಳಿಗೆ ಆಯ್ಕೆಯಾದ ಎರಡನೇ ಮಹಿಳೆ (ಸುಷ್ಮಾ ಸ್ವರಾಜ್ ಅವರ ನಂತರ) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೊತೆಗೆ ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಉಸ್ತುವಾರಿ ಹಾಗೂ ಕೇಂದ್ರ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಸದಸ್ಯೆಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ನಂತರದಲ್ಲಿ ವಿಧಾನಸೌಧದಲ್ಲಿ ನೂತನ ರಾಜ್ಯಪಾಲರ ಸ್ವಾಗತ ಹಾಗೂ ನಿಕಟಪೂರ್ವ ರಾಜ್ಯಪಾಲರ ಬೀಳ್ಕೊಡುಗೆ ಕಾರ್ಯಕ್ರಮವೂ ನಡೆಯಿತು.











