ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎ.ಪಿ. ರಂಗನಾಥ್ ಅವರು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಅವರನ್ನು 908 ಮತಗಳ ಅಂತರದಿಂದ ಸೋಲಿಸಿ ರಂಗನಾಥ್ ಅವರು ಚುನಾಯಿತರಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ಬೆಂಗಳೂರು ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ.

ನಗರದ ಡಾ. ಬಿ.ಆರ್. ಅಂಬೇಡ್ಕರ್ ವೀದಿಯಲ್ಲಿರುವ ಸರ್ಕಾರಿ ಕಲಾ ಕಾಲೇಜಿನಲ್ಲಿ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಯಿತು. ಮೊದಲ ಪ್ರಾಶಸ್ತ್ಯದ ಮತಗಳ ಎಣಿಕೆ ಪೂರ್ಣಗೊಂಡಾಗ ಎ.ಪಿ. ರಂಗನಾಥ್ ಅವರು 10,810 ಮತಗಳನ್ನು ಪಡೆದು ಗೆಲುವು ದಾಖಲಿಸಿದರು. ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಅವರು 9,902 ಮತಗಳನ್ನು ಪಡೆದರು.
ಇತರ ಅಭ್ಯರ್ಥಿಗಳ ಪೈಕಿ ಕರ್ನಾಟಕ ರಾಷ್ಟ್ರ ಸಮಿತಿಯ ಡಾ. ಜಿ.ಆರ್. ಹೆಬ್ಬೂರು 94 ಮತಗಳು, ಪಕ್ಷೇತರ ಅಭ್ಯರ್ಥಿ ಉಮೇಶ್ ಬಾಬು ಪಿಳ್ಳೆಗೌಡ 215 ಮತಗಳು, ಬಿ.ಎಸ್. ನಾಗರಾಜು 11 ಮತಗಳು ಹಾಗೂ ಡಾ. ಎನ್. ಲಕ್ಷ್ಮಣ ಸ್ವಾಮಿ 24 ಮತಗಳನ್ನು ಪಡೆದಿದ್ದಾರೆ.
ಒಟ್ಟು 21,056 ಮತಗಳು ಮಾನ್ಯವಾಗಿದ್ದು, 1,857 ಮತಗಳು ತಿರಸ್ಕೃತಗೊಂಡಿವೆ ಎಂದು ಬಿಸ್ವಾಸ್ ಮಾಹಿತಿ ನೀಡಿದ್ದಾರೆ.

ಶೇ.81.98ರಷ್ಟು ಮತದಾನ
ಅಕ್ಟೋಬರ್ 23ರಂದು ನಡೆದ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಒಟ್ಟು 27,405 ಮತದಾರರ ಪೈಕಿ 22,468 ಮಂದಿ ಮತ ಚಲಾಯಿಸಿದ್ದರು. ಈ ಮೂಲಕ ಶೇ.81.98ರಷ್ಟು ಮತದಾನ ದಾಖಲಾಗಿತ್ತು. ಮತ ಚಲಾಯಿಸಿದವರಲ್ಲಿ 8,360 ಪುರುಷರು ಹಾಗೂ 14,108 ಮಹಿಳೆಯರು ಸೇರಿದ್ದರು.
ಚುನಾವಣೆಯಲ್ಲಿ ಗೆಲುವು ಸಾಧಿಸಿದ ಎ.ಪಿ. ರಂಗನಾಥ್ ಅವರಿಗೆ ಚುನಾವಣಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತರು ಪ್ರಮಾಣಪತ್ರ ವಿತರಿಸಲಿದ್ದಾರೆ ಎಂದು ಚುನಾವಣಾಧಿಕಾರಿಗಳ ಕಚೇರಿ ತಿಳಿಸಿದೆ.











