ನಿರ್ದೇಶನನೇಮಕಾತಿಯಲ್ಲಿ ಶೇ.5 ಮೀಸಲಾತಿ ಖಚಿತಪಡಿಸಲು ಇಲಾಖೆಗಳಿಗೆ ಸೂಚನೆ; ಉಚ್ಚ ನ್ಯಾಯಾಲಯದ ಆದೇಶ ಪಾಲನೆಗೆ ಮುಖ್ಯ
ಬೆಂಗಳೂರು: ವಿಕಲಚೇತನರ ಹಕ್ಕುಗಳ ಕಾಯ್ದೆ-2016 ಮತ್ತು ಅದರ ನಿಯಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹಾಗೂ ಗೌರವಾನ್ವಿತ ಕರ್ನಾಟಕ ಉಚ್ಚ ನ್ಯಾಯಾಲಯವು (W.P. No. 11351/2020) ದಿನಾಂಕ 01.06.2026ರಂದು ಪ್ರವೇಶಯೋಗ್ಯತೆ ಕುರಿತು ನೀಡಿರುವ ಕಾಲಮಿತಿಯ ನಿರ್ದೇಶನಗಳನ್ನು ಪಾಲಿಸಲು ರಾಜ್ಯ ಸರ್ಕಾರವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ತಿಳಿಸಿದ್ದಾರೆ.
ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಮುಂದುವರಿದ ಭಾಗವಾಗಿ, ಇಂದು ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಸಭೆಯಲ್ಲಿ ವಿವಿಧ ಇಲಾಖೆಗಳು ತುರ್ತಾಗಿ ಕೈಗೊಳ್ಳಬೇಕಾದ ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಲಾಯಿತು.

ನೇಮಕಾತಿಯಲ್ಲಿ ಶೇ.5 ಮೀಸಲಾತಿ ಕಡ್ಡಾಯ
ಎಲ್ಲಾ ಸರ್ಕಾರಿ ಇಲಾಖೆಗಳು ನೇಮಕಾತಿ ಅಧಿಸೂಚನೆ ಹೊರಡಿಸುವ ಮುನ್ನ ವಿಕಲಚೇತನ ಅಭ್ಯರ್ಥಿಗಳಿಗೆ ಶೇ.5ರಷ್ಟು ಹುದ್ದೆಗಳನ್ನು ಮೀಸಲಿಟ್ಟಿರುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೃಢೀಕರಿಸಿದ ಮಾಹಿತಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ಸಾರ್ವಜನಿಕ ಮೂಲಸೌಕರ್ಯ ಮತ್ತು GIS ದಾಖಲೀಕರಣ
ನಗರ ಸ್ಥಳೀಯ ಸಂಸ್ಥೆಗಳ ರಸ್ತೆಗಳು, ಪಾದಚಾರಿ ಮಾರ್ಗಗಳು, ಉದ್ಯಾನವನಗಳು, ಮಾರುಕಟ್ಟೆಗಳು ಮತ್ತು ಸಾರ್ವಜನಿಕ ಶೌಚಾಲಯಗಳನ್ನು ವಿಕಲಚೇತನ ಸ್ನೇಹಿಯಾಗಿ ವಿನ್ಯಾಸಗೊಳಿಸಿರುವ ಬಗ್ಗೆ ಸಂಬಂಧಿತ ಇಂಜಿನಿಯರಿಂಗ್ ವಿಭಾಗಗಳು ದೃಢೀಕರಣ ನೀಡಬೇಕು. ರಾಜ್ಯಾದ್ಯಂತ ಲಭ್ಯವಿರುವ ಕಟ್ಟಡಗಳ ಏಕೀಕೃತ ದಾಖಲೆಗಾಗಿ ಈ ಮಾಹಿತಿಯನ್ನು ಕರ್ನಾಟಕ ರಾಜ್ಯ ದೂರಸಂವೇದಿ ಅನ್ವಯಿಕ ಕೇಂದ್ರ ನಿರ್ವಹಿಸುತ್ತಿರುವ GIS ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು ಎಂದು ನಿರ್ದೇಶಿಸಲಾಗಿದೆ.
ಕಟ್ಟಡ ನಿರ್ಮಾಣ ನಿಯಮಗಳ ಕಟ್ಟುನಿಟ್ಟಿನ ಪಾಲನೆ
ವಸತಿ ಯೋಜನೆಗಳು, ವಸತಿನಿಲಯಗಳು ಹಾಗೂ ಸಾರ್ವಜನಿಕ ಕಟ್ಟಡಗಳಲ್ಲಿ ವಿಕಲಚೇತನರಿಗೆ ಪೂರಕ ವ್ಯವಸ್ಥೆಗಳನ್ನು ಅಳವಡಿಸುವುದು ಕಡ್ಡಾಯ. ನಿಗದಿತ ಮಾನದಂಡಗಳನ್ನು ಪಾಲಿಸದ ಕಟ್ಟಡಗಳಿಗೆ ಸ್ವಾಧೀನಾನುಭವ ಪತ್ರ (Occupancy Certificate) ಅಥವಾ ಪೂರ್ಣಗೊಳಿಸುವಿಕೆ ಪ್ರಮಾಣಪತ್ರ (Completion Certificate) ನೀಡದಂತೆ ಸೂಚಿಸಲಾಗಿದೆ.
ಸಾರಿಗೆ ಮತ್ತು ಸಂಚಾರ ವ್ಯವಸ್ಥೆಯಲ್ಲಿ ಸೌಲಭ್ಯ
ಸಾರ್ವಜನಿಕ ಸಾರಿಗೆ ಬಸ್ಸುಗಳು ಮತ್ತು ನಿಲ್ದಾಣಗಳಲ್ಲಿ ವಿಕಲಚೇತನರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದರ ಜೊತೆಗೆ ಸಿಬ್ಬಂದಿಗೆ ಸಂವೇದನಾಶೀಲತಾ ಶಿಬಿರಗಳನ್ನು ಆಯೋಜಿಸಬೇಕು. ವಿಕಲಚೇತನರು ಸುಲಭವಾಗಿ ರಸ್ತೆ ದಾಟಲು ಅನುಕೂಲವಾಗುವಂತೆ ಟ್ರಾಫಿಕ್ ಸಿಗ್ನಲ್‌ಗಳ ಸಾಫ್ಟ್‌ವೇರ್‌ನಲ್ಲಿ ಅಗತ್ಯ ಬದಲಾವಣೆ ಮಾಡಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ.
ಡಿಜಿಟಲ್ ಪ್ರವೇಶಯೋಗ್ಯತೆ ಮತ್ತು ಇ-ಕನ್ನಡ ನಿಘಂಟು
ಎಲ್ಲಾ ಸರ್ಕಾರಿ ವೆಬ್‌ಸೈಟ್‌ಗಳನ್ನು ವಿಕಲಚೇತನರು ಸುಲಭವಾಗಿ ಬಳಸುವಂತೆ (Text to Voice ಮತ್ತು Voice to Text) ಮಾನದಂಡಗಳನ್ನು ಇ-ಆಡಳಿತ ಇಲಾಖೆ ಪಾಲಿಸಬೇಕು. ವಿಕಲಚೇತನರಿಗಾಗಿ ಅಭಿವೃದ್ಧಿಪಡಿಸಲಾಗುತ್ತಿರುವ ‘ಇ-ಕನ್ನಡ’ (e-Kannada) ಇಂಗ್ಲಿಷ್-ಕನ್ನಡ ನಿಘಂಟನ್ನು ಶೀಘ್ರ ಪೂರ್ಣಗೊಳಿಸಿ ವ್ಯಾಪಕ ಪ್ರಚಾರ ನೀಡಲು ನಿರ್ಧರಿಸಲಾಗಿದೆ.
ಕ್ರೀಡೆ ಮತ್ತು ಶಿಕ್ಷಣಕ್ಕೆ ಉತ್ತೇಜನ
ಶಾಲಾ ಹಂತದಿಂದಲೇ ಪ್ಯಾರಾ ಕ್ರೀಡೆಗಳಿಗೆ ಉತ್ತೇಜನ ನೀಡಲು ಅರ್ಹ ಮಕ್ಕಳಿಗೆ ಶ್ರವಣ ಸಾಧನಗಳನ್ನು (Hearing Aids) ಒದಗಿಸಿ ಅವರ ಕ್ರೀಡಾ ಪ್ರತಿಭೆಯನ್ನು ಗುರುತಿಸಬೇಕು. ಶಾಲಾ ಶಿಕ್ಷಣ ಇಲಾಖೆಯಲ್ಲಿ ಸಂಗೀತ ಶಿಕ್ಷಕರ ಹುದ್ದೆಗಳು ಇಲ್ಲದಿರುವುದರಿಂದ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಕ್ರಮವಹಿಸಲಾಗುವುದು.
ನೋಡಲ್ ಅಧಿಕಾರಿಗಳ ನೇಮಕ ಮತ್ತು ನಿರಂತರ ಪರಿಶೀಲನೆ
ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ‘ಪ್ರವೇಶಯೋಗ್ಯತೆ ನೋಡಲ್ ಅಧಿಕಾರಿ’ಗಳನ್ನು ನೇಮಿಸಿ, ಅವರ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿನ ಸೌಲಭ್ಯಗಳ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ನಿರಂತರ ಆಡಿಟ್ ನಡೆಸಿ ಸುಧಾರಣಾ ಕ್ರಮ ಕೈಗೊಳ್ಳಲಿದೆ. ವಿಕಲಚೇತನರಿಗೆ ಸಂಬಂಧಿಸಿದ ನೀತಿ-ನಿಯಮಗಳನ್ನೊಳಗೊಂಡ ಕೈಪಿಡಿಯನ್ನು (Handbook) ಸಿದ್ಧಪಡಿಸಲು ಸೂಚಿಸಲಾಗಿದೆ.
ವಾರದೊಳಗೆ ಅನುಪಾಲನಾ ವರದಿ
ಉಚ್ಚ ನ್ಯಾಯಾಲಯದ ನಿರ್ದೇಶನಗಳ ಅನುಪಾಲನೆ ಕುರಿತು ಪ್ರತಿ ಕೆಡಿಪಿ (KDP) ಸಭೆಯಲ್ಲಿ ವಿಷಯಸೂಚಿಯನ್ನು ಕಡ್ಡಾಯವಾಗಿ ಸೇರಿಸಬೇಕು. ಎಲ್ಲಾ ಇಲಾಖೆಗಳು ನಿಗದಿತ ಕಾಲಮಿತಿಯೊಳಗೆ ಕೈಗೊಂಡ ಕ್ರಮಗಳ ಕುರಿತು ‘ಅನುಪಾಲನಾ ವರದಿ’ಯನ್ನು (Action Taken Compliance Report) ಒಂದು ವಾರದೊಳಗೆ ಸಲ್ಲಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.











