ಬೆಂಗಳೂರು: ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸುವ ಕುರಿತಾಗಿ ತ್ವರಿತ ಕ್ರಮ ಕೈಗೊಳ್ಳುವಂತೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರ ನೇತೃತ್ವದ ಶಾಸಕರ ತಂಡ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದೆ. ರಾಜ್ಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಅವರು ಈ ಕುರಿತು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಪ್ರಕಟಣೆ ತಿಳಿಸಿದೆ.
1990ರ ದಶಕದಲ್ಲಿ ಜಾರ್ಜ್ ಫರ್ನಾಂಡಿಸ್ ಅವರು ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ಅನುಷ್ಠಾನಗೊಂಡ ಕೊಂಕಣ ರೈಲ್ವೆ ಯೋಜನೆಗೆ ಈಗ 30 ವರ್ಷಗಳು ಪೂರೈಸಿದರೂ, ಇನ್ನೂ ಇದು ಏಕ ಹಳಿಯ ವ್ಯವಸ್ಥೆಯಲ್ಲಿಯೇ ಸೀಮಿತವಾಗಿದೆ. ಇದರಿಂದ ಹೆಚ್ಚುವರಿ ರೈಲ್ವೆ ಸೇವೆಗಳನ್ನು ನಿರ್ವಹಿಸಲು ಅಡಚಣೆ ಉಂಟಾಗುತ್ತಿದ್ದು, ಆರ್ಥಿಕ ಅನುದಾನದ ಕೊರತೆಯಿಂದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೂ ಅಡೆತಡೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ, ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸುವ ಮೂಲಕ ಸರ್ಕಾರದ ಅನುದಾನವನ್ನು ಪಡೆದು ಕರಾವಳಿ ಪ್ರದೇಶದ ರೈಲ್ವೆ ಸಂಪರ್ಕ ಮತ್ತು ಮೂಲಭೂತ ಸೌಕರ್ಯಗಳನ್ನು ವಿಸ್ತರಿಸಬೇಕೆಂದು ನಿಯೋಗ ಆಗ್ರಹಿಸಿದೆ.
ಈ ಸಂಬಂಧ ಸಚಿವರೊಂದಿಗೆ ನಿಯೋಗವು ಸುದೀರ್ಘ ಚರ್ಚೆ ನಡೆಸಿತು. ವಿಲೀನ ಪ್ರಕ್ರಿಯೆ ಮುಂದುವರೆದರೆ, ಏಕ ಹಳಿಯನ್ನು ಡಬ್ಲಿಂಗ್ ಮಾಡುವುದು ಸೇರಿದಂತೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಲಿದೆ ಎಂಬುದಾಗಿ ನಿಯೋಗವು ಸಚಿವರಿಗೆ ಮನವರಿಕೆ ಮಾಡಿಸಿತು. ಚರ್ಚೆಯ ಬಳಿಕ, ಸಚಿವ ಎಂ. ಬಿ. ಪಾಟೀಲ ಒಪ್ಪಿಗೆ ಸೂಚಿಸಿ, ತಕ್ಷಣವೇ ಇಲಾಖಾ ಪ್ರಧಾನ ಕಾರ್ಯದರ್ಶಿ ಮಂಜುಳಾ ಅವರಿಗೆ ದೂರವಾಣಿ ಮೂಲಕ ಸೂಚನೆ ನೀಡಿ, ಕಡತ ಸಿದ್ಧಪಡಿಸುವಂತೆ ಆದೇಶ ನೀಡಿದರು. ಮುಂದಿನ ಹಂತದಲ್ಲಿ ಸಚಿವ ಸಂಪುಟದ ಅನುಮೋದನೆ ಪಡೆದು, ಕೊಂಕಣ ರೈಲ್ವೆ ವಿಲೀನ ಪ್ರಕ್ರಿಯೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿಯವರೊಂದಿಗೆ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮತ್ತು ಉಡುಪಿಯ ಶಾಸಕ ಯಶ್‍ಪಾಲ್ ಸುವರ್ಣ ನಿಯೋಗದಲ್ಲಿ ಭಾಗವಹಿಸಿದ್ದರು.












