ಓಬಿಸಿ ಜನಗಣತಿ ವರದಿ ಜಾರಿಗೆ ಹೋರಾಟ ಅಗತ್ಯ; ಸಂವಿಧಾನ ರಕ್ಷಿಸಿದರೆ ಮಾತ್ರ ಅದು ನಮ್ಮ ಹಕ್ಕುಗಳನ್ನು ರಕ್ಷಿಸುತ್ತದೆ: ಹರಿಪ್ರಸಾದ್
ಬೆಂಗಳೂರು: ಮೀಸಲಾತಿ ಎಂಬುದು ಬಡತನ ನಿರ್ಮೂಲನೆಗಾಗಿ ರೂಪಿಸಲಾದ ಯೋಜನೆಯಲ್ಲ, ಉದ್ಯೋಗ ನೀಡುವ ದಯಾಧರ್ಮವೂ ಅಲ್ಲ. ಅದು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತಂದು, ಅಧಿಕಾರದಲ್ಲಿ ಪಾಲು ನೀಡುವ ಸಾಂವಿಧಾನಿಕ ಸಾಧನವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದರು.
ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಓಬಿಸಿ ಮಹಾಸಂಘದ 11ನೇ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಓಬಿಸಿ ಪ್ರತಿನಿಧಿಗಳನ್ನು ಸ್ವಾಗತಿಸಿ, ಮೀಸಲಾತಿಗೆ ಭದ್ರಬುನಾದಿ ಹಾಕಿದ ಕರ್ನಾಟಕದಲ್ಲಿ ರಾಷ್ಟ್ರೀಯ ಓಬಿಸಿ ಸಮಾವೇಶ ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಬಸವಣ್ಣನವರಿಂದ ಸಾಮಾಜಿಕ ಸಮಾನತೆಗೆ ಭದ್ರ ಬುನಾದಿ
12ನೇ ಶತಮಾನದಲ್ಲಿಯೇ ಬಸವಣ್ಣನವರು ಕಲ್ಯಾಣ ಕ್ರಾಂತಿಯ ಮೂಲಕ ಸಾಮಾಜಿಕ ಸಮಾನತೆಯ ಸಂದೇಶ ಸಾರಿದ್ದರು. ಜನ್ಮದ ಆಧಾರದ ಮೇಲೆ ಮನುಷ್ಯರನ್ನು ಶ್ರೇಷ್ಠರು ಮತ್ತು ಕನಿಷ್ಠರು ಎಂದು ವಿಂಗಡಿಸುತ್ತಿದ್ದ ಕಾಲದಲ್ಲಿ ಕಾಯಕಕ್ಕೆ ಘನತೆ ನೀಡಿ, ಶ್ರಮಿಸುವ ಪ್ರತಿಯೊಬ್ಬರೂ ಗೌರವಕ್ಕೆ ಅರ್ಹರು ಎಂಬ ಸಂದೇಶ ನೀಡಿದ್ದರು. ಜಾತಿ, ಲಿಂಗ ಮತ್ತು ವೃತ್ತಿಯ ಕಟ್ಟಳೆಗಳನ್ನು ಮೀರಿ ಶರಣರು ಹಾಗೂ ಶರಣೆಯರಿಗೆ ಅನುಭವ ಮಂಟಪದಲ್ಲಿ ವಿಚಾರ ಮಂಡಿಸಲು ಅವಕಾಶ ನೀಡಿದ ಇತಿಹಾಸ ಕರ್ನಾಟಕಕ್ಕಿದೆ ಎಂದು ಹೇಳಿದರು.
ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಮಹತ್ವದ ಕೊಡುಗೆ ನೀಡಿದರು. 1918ರಲ್ಲಿ ಮಿಲ್ಲರ್ ಆಯೋಗ ರಚಿಸಿ ಹಿಂದುಳಿದ ಸಮುದಾಯಗಳಿಗೆ ಪ್ರಾತಿನಿಧ್ಯ ಕಲ್ಪಿಸುವ ಕ್ರಮ ಕೈಗೊಂಡಿದ್ದರು. ಅದೇ ರೀತಿ ಕೊಲ್ಹಾಪುರ ಸಂಸ್ಥಾನದ ಛತ್ರಪತಿ ಶಾಹು ಮಹಾರಾಜರು 1902ರಲ್ಲೇ ಹಿಂದುಳಿದ ಬಹುಜನ ಸಮುದಾಯಗಳಿಗೆ ಶೇ.50ರಷ್ಟು ಪ್ರಾತಿನಿಧ್ಯ ಕಲ್ಪಿಸುವ ಆದೇಶ ಹೊರಡಿಸಿದ್ದರು. ಇವರ ಪ್ರಯತ್ನಗಳು ಇಂದಿಗೂ ಸಾಮಾಜಿಕ ನ್ಯಾಯದ ಹೋರಾಟಕ್ಕೆ ಮಾದರಿಯಾಗಿವೆ ಎಂದರು.

ಹಾವನೂರು ವರದಿ ಸಾಮಾಜಿಕ ಕ್ರಾಂತಿಗೆ ಮಾರ್ಗಸೂಚಿ
ಸ್ವಾತಂತ್ರ್ಯಾನಂತರವೂ ಕರ್ನಾಟಕ ಮೀಸಲಾತಿಯ ಪರಂಪರೆಯನ್ನು ಮುಂದುವರಿಸಿತು. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಅದನ್ನು ಮತ್ತಷ್ಟು ಬಲಪಡಿಸಿ, ಸಾಮಾಜಿಕ ನಾಯಕತ್ವದ ಬೆಳವಣಿಗೆಗೆ ಹೊಸ ರಾಜಕೀಯ ದಿಕ್ಕು ನೀಡಿದರು. 1972ರಲ್ಲಿ ಎಲ್.ಜಿ. ಹಾವನೂರು ಅವರ ಅಧ್ಯಕ್ಷತೆಯಲ್ಲಿ ರಾಜ್ಯದ ಮೊದಲ ಹಿಂದುಳಿದ ವರ್ಗಗಳ ಆಯೋಗ ರಚನೆಯಾಯಿತು. ಹಾವನೂರು ವರದಿ ಕೇವಲ ಕಾಗದದ ದಾಖಲೆಯಾಗಿರಲಿಲ್ಲ. ಅದು ಕರ್ನಾಟಕದ ಮೌನ ಸಾಮಾಜಿಕ ಕ್ರಾಂತಿಗೆ ಮಾರ್ಗಸೂಚಿಯಾಗಿತ್ತು ಎಂದು ಹರಿಪ್ರಸಾದ್ ಹೇಳಿದರು.
ಓಬಿಸಿ ಸಮುದಾಯಕ್ಕೆ ಒಗ್ಗೂಡಿದ ಐಕಾನ್ ಅಗತ್ಯ
ಎಸ್ಸಿ ಮತ್ತು ಎಸ್ಟಿ ಸಮುದಾಯಗಳಿಗೆ ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಅವರಂತಹ ಪ್ರಮುಖ ಐಕಾನ್‌ಗಳಿದ್ದಾರೆ. ಆದರೆ ಓಬಿಸಿ ಸಮುದಾಯಕ್ಕೆ ಒಗ್ಗೂಡಿದ ರಾಷ್ಟ್ರೀಯ ಐಕಾನ್ ಇಲ್ಲದಿರುವುದು ಸಮಸ್ಯೆಯಾಗಿದೆ. ನಾರಾಯಣಗುರು, ಶಾಹು ಮಹಾರಾಜ್, ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ ಸೇರಿದಂತೆ ಹಲವು ಮಹನೀಯರನ್ನು ಸ್ಮರಿಸುತ್ತೇವೆ. ಆದರೆ ಸಣ್ಣ ಸಣ್ಣ ಹಿಂದುಳಿದ ಸಮುದಾಯಗಳು ಬೆಳಕಿಗೆ ಬರಲು ಇನ್ನಷ್ಟು ಸಂಘಟಿತ ಪ್ರಯತ್ನ ಅಗತ್ಯವಿದೆ ಎಂದರು.
ಸಂಸತ್ತಿನಲ್ಲಿ ಓಬಿಸಿ ವಿಚಾರದ ಬಗ್ಗೆ ಹಲವು ಬಾರಿ ಧ್ವನಿ ಎತ್ತಿದ್ದೇನೆ
1990ರಿಂದ ರಾಜ್ಯಸಭಾ ಸದಸ್ಯನಾಗಿ ವಿವಿಧ ಅವಧಿಗಳಲ್ಲಿ ಸೇವೆ ಸಲ್ಲಿಸಿರುವುದಾಗಿ ತಿಳಿಸಿದ ಹರಿಪ್ರಸಾದ್, 1993ರಲ್ಲಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ರಚನೆಯ ಸಂದರ್ಭದಲ್ಲಿ ನಡೆದ ಚರ್ಚೆಗಳಿಗೆ ತಾವು ಸಾಕ್ಷಿಯಾಗಿದ್ದಾಗಿ ಹೇಳಿದರು.
2017ರ ಜುಲೈ 31ರಂದು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ 123ನೇ ಸಂವಿಧಾನ ತಿದ್ದುಪಡಿ ಮಸೂದೆ ಕುರಿತು ಸಂಸತ್ತಿನಲ್ಲಿ ವಿಸ್ತೃತವಾಗಿ ಮಾತನಾಡಿದ್ದಾಗಿ ತಿಳಿಸಿದರು. 2018ರಲ್ಲಿಯೂ ಓಬಿಸಿ ಜನಗಣತಿ, ಕ್ರೀಮಿ ಲೇಯರ್, ರಾಜ್ಯಗಳ ಅಧಿಕಾರ, ಮಹಿಳೆಯರು ಮತ್ತು ಅಲ್ಪಸಂಖ್ಯಾತ ಓಬಿಸಿಗಳ ಪ್ರಾತಿನಿಧ್ಯ, ಸರ್ಕಾರಿ ಉದ್ಯೋಗಗಳಲ್ಲಿನ ಕೊರತೆ ಹಾಗೂ ರಾಜಕೀಯ ಪ್ರಾತಿನಿಧ್ಯದ ಕುರಿತು ಪ್ರಶ್ನೆಗಳನ್ನು ಎತ್ತಿದ್ದಾಗಿ ಹೇಳಿದರು.
ದೇಶದ ಶೇ.50ಕ್ಕೂ ಹೆಚ್ಚಿನ ಜನಸಂಖ್ಯೆಗೆ ಸಂಬಂಧಿಸಿದ ಓಬಿಸಿ ವಿಚಾರಗಳು ಸಂಸತ್ತಿನಲ್ಲಿ ತನ್ನ ಸುಮಾರು ಮೂರು ದಶಕಗಳ ಅನುಭವದಲ್ಲಿ ಕೇವಲ ನಾಲ್ಕೈದು ಬಾರಿ ಮಾತ್ರ ವಿಸ್ತೃತವಾಗಿ ಚರ್ಚೆಯಾಗಿರುವುದು ನೋವಿನ ಸಂಗತಿ ಎಂದು ಅವರು ಹೇಳಿದರು.

ತಮಿಳುನಾಡಿನ 69% ಮೀಸಲಾತಿ ಮಾದರಿ: ಹರಿಪ್ರಸಾದ್
ಮೀಸಲಾತಿಯಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ ಎಂಬ ವಾದವನ್ನು ತಳ್ಳಿಹಾಕಿದ ಅವರು, ತಮಿಳುನಾಡಿನಲ್ಲಿ ಶೇ.69ರಷ್ಟು ಮೀಸಲಾತಿ ಜಾರಿಯಲ್ಲಿದ್ದರೂ ಅದು ದೇಶದ ಅಭಿವೃದ್ಧಿಶೀಲ ರಾಜ್ಯಗಳ ಸಾಲಿನಲ್ಲಿ ಮುಂಚೂಣಿಯಲ್ಲಿದೆ ಎಂದರು.
ದಕ್ಷಿಣ ಭಾರತದ ಹಲವು ರಾಜ್ಯಗಳು ಸುಮಾರು ಶೇ.50ರಷ್ಟು ಮೀಸಲಾತಿ ಕಲ್ಪಿಸಿಯೂ ಶಿಕ್ಷಣ, ಸಾಮಾಜಿಕ ಅಭಿವೃದ್ಧಿ ಮತ್ತು ಮಾನವ ಸಂಪನ್ಮೂಲ ಕ್ಷೇತ್ರಗಳಲ್ಲಿ ದೇಶಕ್ಕೆ ಮಾದರಿಯಾಗಿವೆ. ಮೀಸಲಾತಿ ಅಭಿವೃದ್ಧಿಗೆ ಅಡ್ಡಿಯಲ್ಲ; ಸಾಮಾಜಿಕ ನ್ಯಾಯದ ಮೂಲಕ ಸಮಗ್ರ ಅಭಿವೃದ್ಧಿಗೆ ಅದು ಸಹಕಾರಿಯಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ಕೇರಳದಲ್ಲಿ ಶ್ರೀನಾರಾಯಣಗುರು, ತಮಿಳುನಾಡಿನಲ್ಲಿ ಪೆರಿಯಾರ್, ಆಂಧ್ರಪ್ರದೇಶದಲ್ಲಿ ವೇಮನ ಹಾಗೂ ಕರ್ನಾಟಕದಲ್ಲಿ ಬಸವಣ್ಣನವರ ಸಾಮಾಜಿಕ ಚಳವಳಿಗಳು ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಪ್ರಗತಿಗೆ ಕಾರಣವಾಗಿವೆ. ಮಹಾರಾಷ್ಟ್ರದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್, ಜ್ಯೋತಿಬಾ-ಸಾವಿತ್ರಿಬಾಯಿ ಫುಲೆ ದಂಪತಿ, ಫಾತಿಮಾ ಶೇಖ್ ಹಾಗೂ ಶಾಹು ಮಹಾರಾಜರ ಹೋರಾಟಗಳು ಸಾಮಾಜಿಕ ನ್ಯಾಯದ ಚಳವಳಿಗೆ ಬಲ ನೀಡಿವೆ ಎಂದರು.
ಆರ್ಟಿಕಲ್ 340 ಓಬಿಸಿಗಳ ಪಾಲಿಗೆ ಸಂವಿಧಾನದ ಆತ್ಮ
ಸಂವಿಧಾನದ 340ನೇ ವಿಧಿ ಓಬಿಸಿಗಳ ಪಾಲಿಗೆ ಸಂವಿಧಾನದ ಆತ್ಮದಂತಿದೆ ಎಂದು 2018ರ ಸಂಸತ್ ಚರ್ಚೆಯಲ್ಲಿ ಹೇಳಿದ್ದಾಗಿ ಹರಿಪ್ರಸಾದ್ ತಿಳಿಸಿದರು. ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಸ್ಥಿತಿಗತಿಗಳನ್ನು ಪರಿಶೀಲಿಸಿ, ಅವರಿಗೆ ಸೂಕ್ತ ಪರಿಹಾರ ಸೂಚಿಸುವ ವಿಶೇಷ ಜವಾಬ್ದಾರಿಯನ್ನು ಈ ವಿಧಿ ಹೊಂದಿದೆ ಎಂದರು.
ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವುದನ್ನು ಬೆಂಬಲಿಸಿದ್ದರೂ, ಓಬಿಸಿ ಪಟ್ಟಿಗಳನ್ನು ಗುರುತಿಸುವ ರಾಜ್ಯಗಳ ಅಧಿಕಾರ ಕಡಿಮೆಯಾಗಬಾರದು ಎಂದು 2017 ಮತ್ತು 2018ರಲ್ಲಿಯೇ ಎಚ್ಚರಿಸಿದ್ದೆ. ಆರ್ಟಿಕಲ್ 342A ಅನ್ನು ಇದೇ ರೂಪದಲ್ಲಿ ಜಾರಿಗೊಳಿಸಿದರೆ ರಾಜ್ಯಗಳ ಅಧಿಕಾರಕ್ಕೆ ಧಕ್ಕೆಯಾಗಬಹುದು ಎಂದು ಸಂಸತ್ತಿನಲ್ಲಿ ಆತಂಕ ವ್ಯಕ್ತಪಡಿಸಿದ್ದೆ. ನಂತರ 2021ರ ಮರಾಠ ಮೀಸಲಾತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ನನ್ನ ಸಂಸತ್ ಭಾಷಣವನ್ನು ದಾಖಲಿಸಿತ್ತು ಎಂದು ಅವರು ಹೇಳಿದರು.

ಶೇ.50ರ ಮಿತಿ ಬಗ್ಗೆ ಪ್ರಶ್ನೆ
ಓಬಿಸಿಗಳು ತಮ್ಮ ಜನಸಂಖ್ಯೆ ಮತ್ತು ಹಿಂದುಳಿದಿರುವಿಕೆಯ ದತ್ತಾಂಶದ ಆಧಾರದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಕೇಳಿದಾಗ ಶೇ.50ರ ಮೀಸಲಾತಿ ಮಿತಿಯನ್ನು ಮುಂದಿಡಲಾಗುತ್ತದೆ. ಆದರೆ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸಲು 103ನೇ ಸಂವಿಧಾನ ತಿದ್ದುಪಡಿ ತರಲಾಯಿತು. ಇದರಿಂದ ಮೀಸಲಾತಿಯ ಮೂಲ ಆಶಯವೇ ದುರ್ಬಲವಾಗಿದೆ ಎಂದು ಅವರು ಟೀಕಿಸಿದರು.
ಜಾತಿ ಜನಗಣತಿ ವರದಿ ಜಾರಿಗೆ ಹೋರಾಟಕ್ಕೆ ಕರೆ
ದೇಶದಲ್ಲಿ ಓಬಿಸಿ ಹಾಗೂ ಜಾತಿ ಜನಗಣತಿ ನಡೆಸಬೇಕು ಎಂಬ ಬೇಡಿಕೆಯ ಹಿನ್ನೆಲೆಯಲ್ಲಿ ಹೋರಾಟ ಮುಂದುವರಿದಿದ್ದು, ಜಾತಿ ಜನಗಣತಿಯ ವರದಿ ಜಾರಿಗೆ ತರಲು ಹಾಗೂ ಓಬಿಸಿ ಸಮುದಾಯದ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ಅಗತ್ಯ ಎಂದು ಹರಿಪ್ರಸಾದ್ ಕರೆ ನೀಡಿದರು.
ಸಂವಿಧಾನವನ್ನು ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಸಂವಿಧಾನ ರಕ್ಷಿತವಾಗಿದ್ದರೆ ಮಾತ್ರ ಅದು ಹಿಂದುಳಿದ ವರ್ಗಗಳು ಸೇರಿದಂತೆ ಎಲ್ಲರ ಹಕ್ಕುಗಳನ್ನು ರಕ್ಷಿಸುತ್ತದೆ. ಓಬಿಸಿ ಸಮುದಾಯದ ಹಕ್ಕುಗಳಿಗಾಗಿ ರಾಷ್ಟ್ರೀಯ ಸಮಾವೇಶ ಹೊಸ ಹೋರಾಟಕ್ಕೆ ವೇದಿಕೆಯಾಗಲಿ ಎಂದು ಅವರು ಆಶಿಸಿದರು.











