ಬೆಂಗಳೂರು: ರಾಜ್ಯ ಸರ್ಕಾರ ಮುಸಲ್ಮಾನರಿಗೆ ಮೀಸಲಾತಿ ನೀಡುವ ಮಸೂದೆಯನ್ನು ಸದನದಲ್ಲಿ ಕದ್ದು ಮುಚ್ಚಿ ಮಂಡಿಸಿದ್ದು, ಇದನ್ನು ಬಿಜೆಪಿ ಕಟುವಾಗಿ ವಿರೋಧಿಸುತ್ತದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ವಿಧಾನಸೌಧದ ಮುಂಭಾಗ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ವಿಪಕ್ಷದ ಕಣ್ತಪ್ಪಿಸಿ ಮಸೂದೆ ಮಂಡಿಸಿರುವುದು ಆಘಾತಕಾರಿ. ಬಿಜೆಪಿ ಸರ್ಕಾರದ ಈ ನಿರ್ಧಾರವನ್ನು ಸದನದ ಒಳಗೂ ಹೊರಗೂ ತೀವ್ರವಾಗಿ ವಿರೋಧಿಸುತ್ತದೆ. ಅಗತ್ಯವಿದ್ದರೆ ರಾಜ್ಯ ಹೈಕೋರ್ಟಿನಲ್ಲೂ ಪ್ರಶ್ನೆ ಮಾಡುತ್ತದೆ” ಎಂದು ತಿಳಿಸಿದರು.
“ಮುಖ್ಯಮಂತ್ರಿಗಳ ತುಘಲಕ್ ದರ್ಬಾರಿಗೆ ಇತಿಮಿತಿ!”
ವಿಜಯೇಂದ್ರ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರುತ್ತಾ, “ಸಿದ್ದರಾಮಯ್ಯ ಸರ್ಕಾರ ತುಘಲಕ್ ಶೈಲಿಯಲ್ಲಿ ಆಡಳಿತ ನಡೆಸುತ್ತಿದೆ. ಅವರ ದುರಾಡಳಿತಕ್ಕೆ ಈಗಾಗಲೇ ಜನತೆ ಬೇಸರಗೊಂಡಿದೆ” ಎಂದರು. ಕಾಂಗ್ರೆಸ್ ಸರಕಾರ ಅಲ್ಪಸಂಖ್ಯಾತರ ಓಲೈಕೆ ರಾಜಕೀಯ ನಡೆಸುತ್ತಿದೆ ಎಂದು ಆರೋಪಿಸಿದ ಅವರು, “ಸ್ವಾತಂತ್ರ್ಯ ನಂತರ 50-55 ವರ್ಷ ದೇಶ ಮತ್ತು ರಾಜ್ಯದಲ್ಲಿ ಆಡಳಿತ ನಡೆಸಿದರೂ, ಅಲ್ಪಸಂಖ್ಯಾತರ ಶಿಕ್ಷಣ ಮತ್ತು ಅಭಿವೃದ್ಧಿಗೆ ಯಾಕೆ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ?” ಎಂದು ಪ್ರಶ್ನಿಸಿದರು.
“ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಅಲ್ಲ”
ಬಿಜೆಪಿ ವಿರುದ್ಧ ಕಾಂಗ್ರೆಸ್ ಮಾಡುತ್ತಿರುವ ಆರೋಪಗಳನ್ನು ತಿರಸ್ಕರಿಸಿದ ಅವರು, “ಅಲ್ಪಸಂಖ್ಯಾತರ ವಿರೋಧಿ ಪಕ್ಷವಾಗಿ ಬಿಜೆಪಿ ಬೆಳೆಯುತ್ತಿಲ್ಲ. ತ್ರಿವಳಿ ತಲಾಖ್ ರದ್ದು ಮಾಡಿರುವುದು ಅಲ್ಪಸಂಖ್ಯಾತ ಮಹಿಳೆಯರ ಹಿತಕ್ಕಾಗಿ ತೆಗೆದುಕೊಂಡ ಮಹತ್ವದ ನಿರ್ಧಾರ. ಮೋದಿ ಸರ್ಕಾರ ಜನ್‌ಧನ್, ಉಜ್ವಲ, ಭಾಗ್ಯಲಕ್ಷ್ಮೀ ಮೊದಲಾದ ಯೋಜನೆಗಳನ್ನು ಎಲ್ಲ ಸಮುದಾಯಗಳಿಗೂ ಸಮಾನವಾಗಿ ನೀಡಿದೆ” ಎಂದು ತಿಳಿಸಿದ್ದಾರೆ.
“ಮೀಸಲಾತಿ ವಿರುದ್ಧ ಹೋರಾಟ ತೀವ್ರಗೊಳಿಸುತ್ತೇವೆ”
“ಮುಸಲ್ಮಾನರಿಗೆ ಸರ್ಕಾರಿ ಕಾಮಗಾರಿಗಳಲ್ಲಿ ಶೇ. 4 ಮೀಸಲಾತಿ ನೀಡುವ ಕಾಂಗ್ರೆಸ್ ಸರ್ಕಾರದ ನೀತಿಯನ್ನು ಬಿಜೆಪಿ ಸಂಪೂರ್ಣವಾಗಿ ವಿರೋಧಿಸುತ್ತದೆ” ಎಂದು ಅವರು ಎಚ್ಚರಿಸಿದರು. ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಮುಖಂಡರು ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.












