ಬೆಂಗಳೂರು, ಮೇ 04, 2025: ಕೃಷ್ಣಾ ನದಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಕೃಷ್ಣಾ ನ್ಯಾಯಾಧೀಕರಣ-2 ರ ಅಂತಿಮ ತೀರ್ಪಿನ ಗಜೆಟ್ ಅಧಿಸೂಚನೆ ಪ್ರಕಟಣೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಇಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕಾವೇರಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಪ್ರಮುಖ ಚರ್ಚೆ ನಡೆಯಿತು.
ರಾಜ್ಯದ ರೈತರ ಹಿತಾಸಕ್ತಿ ರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಕರ್ನಾಟಕದ ಪಾಲಿನ ನೀರನ್ನು ಪಡೆಯಲು ಕಾನೂನು ಕ್ರಮಗಳ ಸಹಿತ ಎಲ್ಲ ಪ್ರಯತ್ನಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಸೂಚಿಸಿದರು. ಕೃಷ್ಣಾ ಜಲ ವಿವಾದ ನ್ಯಾಯಮಂಡಳಿಯ ತೀರ್ಪಿನ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ಸರ್ವಪಕ್ಷ ಸಭೆ ಕರೆಯಲಾಗುವುದು ಎಂದು ಅವರು ತಿಳಿಸಿದರು.
ಕೃಷ್ಣಾ ನ್ಯಾಯಾಧೀಕರಣ-2 ರ ತೀರ್ಪಿನ ಗಜೆಟ್ ಅಧಿಸೂಚನೆಗಾಗಿ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಲು ಮತ್ತು ಸುಪ್ರೀಂಕೋರ್ಟ್‌ನ 16-09-2011ರ ಆದೇಶವನ್ನು ಮಾರ್ಪಡಿಸಲು ಕೋರಿ ಅರ್ಜಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ನ್ಯಾಯಾಧೀಕರಣದ ತೀರ್ಪು ಕೇಂದ್ರ ಸರ್ಕಾರದ ಗಜೆಟ್ ಅಧಿಸೂಚನೆಗೆ ಒಳಪಟ್ಟಿದ್ದು, 15 ವರ್ಷಗಳು ಕಳೆದರೂ ಅಧಿಸೂಚನೆ ಪ್ರಕಟವಾಗಿಲ್ಲ. ಇದರಿಂದ ಉತ್ತರ ಕರ್ನಾಟಕದ ಯುಕೆಪಿ-3 ಯೋಜನೆಯ ರೈತರು ತಮ್ಮ ಹಕ್ಕಿನ ನೀರಿನ ಬಳಕೆಗಾಗಿ ಕಾಯುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳು ಆತಂಕ ವ್ಯಕ್ತಪಡಿಸಿದರು.
ಕಾವೇರಿ ಮತ್ತು ಮಹದಾಯಿ ಜಲ ವಿವಾದ ನ್ಯಾಯಮಂಡಳಿಗಳ ತೀರ್ಪುಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನ ನಿರ್ದೇಶನದಂತೆ ಕೇಂದ್ರ ಸರ್ಕಾರ ಗಜೆಟ್ ಅಧಿಸೂಚನೆಗಳನ್ನು ಹೊರಡಿಸಿದೆ. ಇದೇ ರೀತಿಯಲ್ಲಿ ಕೃಷ್ಣಾ ನ್ಯಾಯಾಧೀಕರಣದ ತೀರ್ಪಿಗೂ ಅಧಿಸೂಚನೆ ಹೊರಡಿಸುವಂತೆ ಕೇಂದ್ರವನ್ನು ಒತ್ತಾಯಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಕೃಷ್ಣಾ ನ್ಯಾಯಾಧೀಕರಣ-2 ರ ತೀರ್ಪಿನ ಪ್ರಕಾರ, ಕರ್ನಾಟಕಕ್ಕೆ 173 ಟಿಎಂಸಿ ನೀರು ಹಂಚಿಕೆಯಾಗಿದ್ದು, ಇದರಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಕ್ಕೆ 130 ಟಿಎಂಸಿ ನಿಗದಿಯಾಗಿದೆ. ಆದರೆ, ಈ ತೀರ್ಪನ್ನು ಪ್ರಶ್ನಿಸಿ ಆಂಧ್ರಪ್ರದೇಶ ಸುಪ್ರೀಂಕೋರ್ಟ್‌ನಲ್ಲಿ ಎಸ್‌ಎಲ್‌ಪಿ ದಾಖಲಿಸಿದ್ದು, 2011ರ ಸುಪ್ರೀಂಕೋರ್ಟ್ ಆದೇಶವು ಅಧಿಸೂಚನೆ ಪ್ರಕಟಣೆಗೆ ಅಡ್ಡಿಯಾಗಿದೆ.
ಸಭೆಯಲ್ಲಿ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಸಚಿವರಾದ ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ಆರ್.ಬಿ.ತಿಮ್ಮಾಪುರ್, ಶರಣಬಸಪ್ಪ ಗೌಡ ದರ್ಶನಾಪುರ, ಮಹಾದೇವಪ್ಪ, ಶಿವಾನಂದ ಪಾಟೀಲ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ನ್ಯಾಯವಾದಿ ಮೋಹನ್ ಕಾತರ್ಕಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ರಾಜ್ಯ ಸರ್ಕಾರವು ಕೃಷ್ಣಾ ನದಿಯ ಜಲಹಂಚಿಕೆಯಲ್ಲಿ ರಾಜ್ಯದ ಹಕ್ಕುಗಳನ್ನು ಗಟ್ಟಿಗೊಳಿಸಲು ಕಾನೂನು ಮತ್ತು ರಾಜಕೀಯ ಕ್ರಮಗಳನ್ನು ತೀವ್ರಗೊಳಿಸಲಿದೆ ಎಂದು ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.












