ಬೆಂಗಳೂರು, ಮೇ 3, 2025: “ಸಂವಿಧಾನ ರಕ್ಷಣೆಯಾದರೆ ನಮ್ಮ ಹಕ್ಕುಗಳು ರಕ್ಷಣೆಯಾಗುತ್ತವೆ. ಇದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸಂವಿಧಾನಕ್ಕೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಿ ಹೇಳಿದರು.
ಯಲಹಂಕದಲ್ಲಿ 14 ಅಡಿ ಎತ್ತರದ ಬಾಬಾಸಾಹೇಬ್ ಅಂಬೇಡ್ಕರ್ ಅವರ ಕಂಚಿನ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಬಾಬಾಸಾಹೇಬ್ ಅಂಬೇಡ್ಕರ್ ಅವರು ಭಾರತಕ್ಕೆ ಅತ್ಯುತ್ತಮ ಸಂವಿಧಾನವನ್ನು ನೀಡಿದ ಮಹಾನ್ ನಾಯಕ ಎಂದು ಕೊಂಡಾಡಿದರು.
ಜಾತಿ ವ್ಯವಸ್ಥೆ: ನಿಂತ ನೀರಿನಂತೆ
“ಜಾತಿ ವ್ಯವಸ್ಥೆಗೆ ಚಲನೆ ಇಲ್ಲ. ಇದು ನಿಂತ ನೀರಿನಂತೆ. ಆದರೆ ವರ್ಗಕ್ಕೆ ಚಲನೆ ಇದೆ. ಶ್ರೀಮಂತ ಬಡವನಾದರೂ, ಬಡವ ಶ್ರೀಮಂತನಾದರೂ, ಜನರ ಜಾತಿ ಜನ್ಮದಿಂದಲೇ ಸ್ಥಿರವಾಗಿರುತ್ತದೆ. ಈ ಜಾತಿ ವ್ಯವಸ್ಥೆಯನ್ನು ಗುರುತಿಸಿದ ಅಂಬೇಡ್ಕರ್, ಜಾತಿ ಇರುವವರೆಗೆ ಮೀಸಲಾತಿ ಅಗತ್ಯ ಎಂದು ಬಲವಾಗಿ ನಂಬಿದ್ದರು” ಎಂದು ಸಿದ್ದರಾಮಯ್ಯ ವಿವರಿಸಿದರು.
ಅವರು ಮುಂದುವರೆದು, “ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಬರಬೇಕಾದರೆ, ಅವಕಾಶ ವಂಚಿತರು, ಶೋಷಿತರು ಮತ್ತು ದೌರ್ಜನ್ಯಕ್ಕೊಳಗಾದವರಿಗೆ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ದೊರೆಯಬೇಕು. ಇದನ್ನು ಅಂಬೇಡ್ಕರ್ ಒತ್ತಿಹೇಳಿದ್ದರು” ಎಂದರು.
ಸಮಾನತೆಯ ಸಂದೇಶ
“ಸ್ವಾತಂತ್ರ್ಯದ ನಂತರ ಒಬ್ಬ ವ್ಯಕ್ತಿಗೆ ಒಂದು ಮತದ ಹಕ್ಕು ಜಾರಿಗೆ ಬಂದಿದೆ. ಇದು ರಾಷ್ಟ್ರಪತಿಗೂ, ಪೌರಕಾರ್ಮಿಕನಿಗೂ ಸಮಾನ. ಇದೇ ಸಂದೇಶವನ್ನು ಬಸವಣ್ಣನವರು ಸಾರಿದ್ದರು. ಅಂಬೇಡ್ಕರ್ ಕೂಡ ಬಸವಣ್ಣನವರ ವಚನಗಳಿಂದ ಪ್ರೇರಿತರಾಗಿದ್ದರು. ಸಮಾಜದಲ್ಲಿ ಯಾವ ಕೆಲಸವೂ ಮೇಲು ಅಥವಾ ಕೀಳು ಅಲ್ಲ; ಎಲ್ಲವೂ ಸಮಾನ ಎಂಬುದು ಅವರ ತತ್ವವಾಗಿತ್ತು” ಎಂದು ಮುಖ್ಯಮಂತ್ರಿಗಳು ತಿಳಿಸಿದರು.












