ಕೊಡಗು, ಕೊಡವರು ದೇಶಕ್ಕೆ ಆಭರಣ ಎಂದು ಬಣ್ಣನೆ
ಬೆಂಗಳೂರು: ಬೆಂಗಳೂರಿನ ಮೆಟ್ರೋ ನಿಲ್ದಾಣವೊಂದಕ್ಕೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಹೆಸರಿಡುವ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ತೀರ್ಮಾನಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ. “ಕಾರ್ಯಪ್ಪ ಅವರ ಹೆಸರಿಡುವುದು ನಮ್ಮ ಭಾಗ್ಯ,” ಎಂದು ಅವರು ಹೇಳಿದರು.
ಕರ್ನಾಟಕ ಸರ್ಕಾರವು ಕೊಡವ ಸಮಾಜಕ್ಕೆ ಬೆಂಗಳೂರಿನಲ್ಲಿ ಏಳು ಎಕರೆ ಭೂಮಿ ಮಂಜೂರು ಮಾಡಿರುವ ಹಿನ್ನೆಲೆಯಲ್ಲಿ, ಕೊಡವ ಸಮಾಜದವರು ಭಾನುವಾರ ನಗರದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಡಿಸಿಎಂ ಶಿವಕುಮಾರ್ ಮಾತನಾಡಿದರು.
“ಈ ವಿಷಯದಲ್ಲಿ ನಾವು ಮುಕ್ತ ಮನಸ್ಸು ಹೊಂದಿದ್ದೇವೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮತ್ತು ನಾನು ಸೇರಿ ಕಾರ್ಯಪ್ಪ ಅವರ ಹೆಸರನ್ನು ಉಳಿಸುವ ಕೆಲಸ ಮಾಡುತ್ತೇವೆ,” ಎಂದು ಭರವಸೆ ನೀಡಿದ ಅವರು, “ಕೊಡಗು ಮತ್ತು ಕೊಡವರು ದೇಶಕ್ಕೆ ಮುತ್ತುರತ್ನದಂತೆ ಶೋಭೆ ತಂದಿದ್ದಾರೆ. ಇತಿಹಾಸದಲ್ಲಿ ಕೊಡವರು ರಾಜಕೀಯ, ಕ್ರೀಡೆ, ಕಾನೂನು, ಸೇನೆ, ಮತ್ತು ಸ್ವಾತಂತ್ರ್ಯ ಹೋರಾಟ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದ್ದಾರೆ,” ಎಂದು ಬಣ್ಣಿಸಿದರು.

ಕೊಡವ ಸಮಾಜಕ್ಕೆ ನೀಡಿರುವ ಏಳು ಎಕರೆ ಭೂಮಿಯ ಮೌಲ್ಯವನ್ನು 30-40 ಕೋಟಿ ರೂ. ಕಡಿಮೆ ಮಾಡಿರುವುದು ದೊಡ್ಡ ವಿಷಯವಲ್ಲ ಎಂದ ಅವರು, “ನಿಮ್ಮ ತ್ಯಾಗ, ಪರಿಶ್ರಮ, ಮತ್ತು ಶಿಸ್ತು ಇದಕ್ಕಿಂತಲೂ ದೊಡ್ಡದು. ಸಂಸ್ಕೃತಿ ಮತ್ತು ಪರಂಪರೆಯನ್ನು ಕಾಪಾಡಿಕೊಳ್ಳಬೇಕು ಎಂಬುದು ನಮ್ಮ ಆದ್ಯತೆ,” ಎಂದರು.
ಕಾಂಗ್ರೆಸ್ ಸರ್ಕಾರವು ದುರ್ಬಲ, ಶೋಷಿತ, ಮತ್ತು ಹಿಂದುಳಿದ ಸಮಾಜಗಳಿಗೆ ಸಹಾಯ ಮಾಡಲು ಬದ್ಧವಾಗಿದೆ ಎಂದು ತಿಳಿಸಿದ ಶಿವಕುಮಾರ್, “ಕೊಡವ ಸಮಾಜಕ್ಕೆ ಭೂಮಿ ನೀಡಲು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸಲಾಗಿದೆ. ಸೇನೆಯಲ್ಲಿ ಸೇವೆ ಸಲ್ಲಿಸಿದವರಿಗೆ ಭೂಮಿ, ರಾಜ್ಯಸಭೆ, ವಿಧಾನಸಭೆ, ಮತ್ತು ವಿಧಾನ ಪರಿಷತ್‌ನಲ್ಲಿ ಕೊಡವರಿಗೆ ಪ್ರಾತಿನಿಧ್ಯ ನೀಡಿದ್ದೇವೆ,” ಎಂದು ಹೇಳಿದರು.
ಕೊಡವ ಸಮಾಜವನ್ನು ಕಾಂಗ್ರೆಸ್‌ಗೆ ಬೆಂಬಲ ನೀಡಿ ಕೈ ಬಲಪಡಿಸುವಂತೆ ಮನವಿ ಮಾಡಿದ ಅವರು, “ದೇವರು ಅವಕಾಶವನ್ನಷ್ಟೇ ನೀಡುತ್ತಾನೆ, ಅದನ್ನು ಉಪಯೋಗಿಸಿಕೊಂಡು ಸಾಧನೆ ಮಾಡುವುದು ನಮ್ಮ ಕೈಯಲ್ಲಿದೆ. ಸಿದ್ದರಾಮಯ್ಯ ಸರ್ಕಾರ ನಿಮಗೆ ಅಗತ್ಯ ನೆರವು ನೀಡುತ್ತಿದೆ. ನಾವು ನಿಮ್ಮ ಜೊತೆ ಇದ್ದೇವೆ, ನೀವೂ ನಮ್ಮ ಜೊತೆ ನಿಂತು ಶಕ್ತಿ ತುಂಬಬೇಕು,” ಎಂದರು.
ಪೊನ್ನಣ್ಣ ಮತ್ತು ಮಂಥರ್ ಗೌಡ ಅವರನ್ನು ಶಾಸಕರಾಗಿ ಆಯ್ಕೆ ಮಾಡಿರುವ ಕೊಡವ ಸಮಾಜಕ್ಕೆ ಧನ್ಯವಾದ ಸೂಚಿಸಿದ ಶಿವಕುಮಾರ್, “ಮುಂದೆಯೂ ಇವರನ್ನು ವಿಧಾನಸೌಧಕ್ಕೆ ಆರಿಸಿ,” ಎಂದು ಕೇಳಿಕೊಂಡರು.












