ಬೆಂಗಳೂರು: 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 21ರಂದು ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ಬೆಳಿಗ್ಗೆ 6 ರಿಂದ 8 ಗಂಟೆಯವರೆಗೆ 3,000 ಯೋಗ ಬಂಧುಗಳ ಯೋಗಾಭ್ಯಾಸದೊಂದಿಗೆ ಯೋಗ ಶಿಷ್ಟಾಚಾರದಂತೆ ಆಚರಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಆರೋಗ್ಯ ಸೌಧದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಈ ಕಾರ್ಯಕ್ರಮವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು, ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು, ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರು ಹಾಗೂ ರಾಜ್ಯದ ಪ್ರಮುಖ ಯೋಗ ಗುರುಗಳು ಭಾಗವಹಿಸಲಿದ್ದಾರೆ ಎಂದರು.
‘ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ’
ಪ್ರತಿ ವರ್ಷ ಜೂನ್ 21ರಂದು ಆಚರಿಸಲಾಗುವ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಈ ವರ್ಷದ ಘೋಷವಾಕ್ಯ ‘ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ’ ಎಂಬುದಾಗಿದೆ. ಕರ್ನಾಟಕ ಸರ್ಕಾರದ ಆಯುಷ್ ಇಲಾಖೆಯು ಕಳೆದ 10 ವರ್ಷಗಳಿಂದ ಯೋಗ ದಿನಾಚರಣೆಯನ್ನು ಆಚರಿಸುತ್ತಿದ್ದು, ಈ ಬಾರಿ 10 ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ರಾಜ್ಯಾದ್ಯಂತ ಯೋಗ ಸಂಗಮ
ಯೋಗದಿಂದ ಆರೋಗ್ಯಕರ ಜೀವನ ಸಾಧ್ಯ ಎಂದ ಸಚಿವರು, ನಿರಂತರ ಯೋಗಾಭ್ಯಾಸದಿಂದ ಆರೋಗ್ಯ ಸುಧಾರಿಸುತ್ತದೆ ಎಂದು ಹೇಳಿದರು. ರಾಜ್ಯದ ಪ್ರತಿ ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮೀಣ ಪ್ರದೇಶಗಳ 300ಕ್ಕೂ ಹೆಚ್ಚು ಆಯುಷ್ ಆರೋಗ್ಯ ಕೇಂದ್ರಗಳಲ್ಲಿ ‘ಯೋಗ ಸಂಗಮ’ ಕಾರ್ಯಕ್ರಮವನ್ನು ಆಯೋಜಿಸಲು ಕ್ರಮ ಕೈಗೊಳ್ಳಲಾಗಿದೆ. ಆಯುಷ್ ಮಂತ್ರಾಲಯವು ಈ ಕಾರ್ಯಕ್ರಮವನ್ನು ‘ಯೋಗ ಸಂಗಮ’ ಎಂದು ನಾಮಕರಣ ಮಾಡಿದೆ.
ವಿಚಾರ ಸಂಕಿರಣಗಳು
ಜೂನ್ ಕೊನೆಯ ವಾರದಲ್ಲಿ ಮೈಸೂರು ವಿಶ್ವವಿದ್ಯಾಲಯದ ವಿಜ್ಞಾನ ಭವನದಲ್ಲಿ ‘ಒಂದು ವಿಶ್ವ, ಒಂದು ಆರೋಗ್ಯದಲ್ಲಿ ಯೋಗದ ಪಾತ್ರ’ ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ. ಜುಲೈ ಮೊದಲ ವಾರದಲ್ಲಿ ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ‘ಮಾನಸ ಯೋಗ’, ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ‘ಕಾರ್ಡಿಯೋ ಯೋಗ’ ಮತ್ತು ಕಿದ್ವಾಯಿ ಗ್ರಂಥಿ ಸಂಸ್ಥೆಯಲ್ಲಿ ‘ಕಾರ್ಸಿನೋ ಯೋಗ’ ವಿಚಾರ ಸಂಕಿರಣಗಳು ನಡೆಯಲಿವೆ.
ಯೋಗ ಧನುಷ್ ಮತ್ತು ಯೋಗ ಮಹಾಕುಂಭ
‘ಯೋಗ ಧನುಷ್’ ಕಾರ್ಯಕ್ರಮದ ಮೂಲಕ ರಾಜ್ಯದ 5 ಲಕ್ಷ ಜನರಿಗೆ ಯೋಗ ಪ್ರೋಟೋಕಾಲ್ ಕಲಿಸಲಾಗಿದೆ. 5,000 ಶಾಲೆಗಳಲ್ಲಿ ಯೋಗ ಪ್ರೋಟೋಕಾಲ್ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ. ಮೈಸೂರಿನಲ್ಲಿ ‘ಯೋಗ ಮಹಾಕುಂಭ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಭಾರತ ಸರ್ಕಾರದ 1 ಲಕ್ಷ ಸ್ಥಳಗಳಲ್ಲಿ ಯೋಗ ಸಂಗಮ ಆಚರಣೆಯ ಸಂಕಲ್ಪದಂತೆ, ಕರ್ನಾಟಕದಲ್ಲಿ 10,000 ಯೋಗ ಸಂಗಮ ಕಾರ್ಯಕ್ರಮಗಳನ್ನು ನಡೆಸಲು ವ್ಯವಸ್ಥೆ ಮಾಡಲಾಗಿದೆ.
ಹಸಿರು ಯೋಗ ಕಾರ್ಯಕ್ರಮ
ಅರಣ್ಯ ಇಲಾಖೆ ಸಹಯೋಗದೊಂದಿಗೆ ‘ಹಸಿರು ಯೋಗ’ ಕಾರ್ಯಕ್ರಮದಡಿ 1 ಲಕ್ಷ ಗಿಡಗಳನ್ನು ನೆಡುವ ಗುರಿಯೊಂದಿಗೆ ಯೋಗ ಜಾಗೃತಿ, ಸ್ವಚ್ಛ ಭಾರತ ಮತ್ತು ಪರಿಸರ ಸಂರಕ್ಷಣೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. “ಪ್ರತಿ ಮನೆ-ಮನದಲ್ಲಿ ಯೋಗವನ್ನು ಪಸರಿಸಿ, ಎಲ್ಲರಿಗೂ ಆರೋಗ್ಯ ಒದಗಿಸುವ ಕನಸು ನನಸಾಗಲಿದೆ,” ಎಂದು ಸಚಿವರು ತಿಳಿಸಿದರು.
ಡಿಜಿಟಲ್ ಪೋಸ್ಟರ್ ಬಿಡುಗಡೆ
ಕಾರ್ಯಕ್ರಮದಲ್ಲಿ ಯೋಗದ ಬಗ್ಗೆ ಜಾಗೃತಿ ಮೂಡಿಸಲು ಡಿಜಿಟಲ್ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಪತ್ರಿಕಾಗೋಷ್ಠಿಯಲ್ಲಿ ಆಯುಷ್ ಇಲಾಖೆಯ ಆಯುಕ್ತ ವಿಪಿನ್ ಸಿಂಗ್ ಉಪಸ್ಥಿತರಿದ್ದರು.












