ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಸಿದ್ದರಾಮಯ್ಯ ಅವರ ರಾಜೀನಾಮೆಗೆ ಭೂಮಿಕೆ ಸಿದ್ಧಪಡಿಸಲು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಕರ್ನಾಟಕಕ್ಕೆ ಆಗಮಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.
ಬೆಂಗಳೂರಿನ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಜುಲೈ 2 ರಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ವಿಜಯೇಂದ್ರ, “ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಕುದುರೆ ವ್ಯಾಪಾರ ಜೋರಾಗಲಿದೆ. ಸುರ್ಜೇವಾಲಾ ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ರಾಮನಗರ ಶಾಸಕ ಇಕ್ಬಾಲ್ ಅವರು ಡಿ.ಕೆ. ಶಿವಕುಮಾರ್‌ಗೆ 100 ಶಾಸಕರ ಬೆಂಬಲ ಇದೆ ಎಂದು ಹೇಳಿದ್ದಾರೆ. ಹಿರಿಯ ಶಾಸಕರಾದ ಬಿ.ಆರ್. ಪಾಟೀಲ್, ರಾಜು ಕಾಗೆ ಸೇರಿದಂತೆ ಇತರರು ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಸಿಎಂ ತಮ್ಮ ಪಕ್ಷದ ಶಾಸಕರ ವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ,” ಎಂದರು. ಈ ವಿಷಯವನ್ನು ರಾಜ್ಯಪಾಲರು ಗಮನಿಸಬೇಕೆಂದು ವಿನಂತಿಸಿದರು.
ಕೋವಿಡ್ ಲಸಿಕೆ ಆರೋಪಕ್ಕೆ ತಿರುಗೇಟು: ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ 35-40 ಜನರು ಸಾವನ್ನಪ್ಪಿರುವುದಕ್ಕೆ ಕೋವಿಡ್ ಲಸಿಕೆ ಕಾರಣ ಎಂಬ ಸಿಎಂ ಸಿದ್ದರಾಮಯ್ಯ ಅವರ ಆರೋಪವನ್ನು ಖಂಡಿಸಿದ ವಿಜಯೇಂದ್ರ, “ಹಾಸನಕ್ಕೆ ಮಾತ್ರವೇ ಲಸಿಕೆ ಕೊಟ್ಟಿದ್ದೇವೆಯೇ? ದೇಶದ ಕೋಟ್ಯಂತರ ಜನರಿಗೆ, ವಿದೇಶಗಳಿಗೂ ಲಸಿಕೆ ರಫ್ತಾಗಿದೆ. ರಾಜ್ಯ ಸರ್ಕಾರ ಈ ಸಾವುಗಳ ಬಗ್ಗೆ ಸಮರ್ಪಕ ತನಿಖೆ ನಡೆಸಬೇಕು. ಇದು ಬೇಜವಾಬ್ದಾರಿ ಹೇಳಿಕೆ,” ಎಂದು ಟೀಕಿಸಿದರು. ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಔಷಧಿ ಸಂಗ್ರಹಕ್ಕೆ ತುರ್ತು ಸಭೆ ಕರೆಯುವಂತೆ ಒತ್ತಾಯಿಸಿದರು.
ಆರ್‌ಎಸ್‌ಎಸ್ ನಿಷೇಧ ‘ತಿರುಕನ ಕನಸು’: ಆರ್‌ಎಸ್‌ಎಸ್ ನಿಷೇಧದ ಕುರಿತು ಸಚಿವ ಪ್ರಿಯಾಂಕ್ ಖರ್ಗೆಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, “ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ತಿರುಕನ ಕನಸು. ಇದನ್ನು ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರೇ ನಂಬುವುದಿಲ್ಲ. ಆರ್‌ಎಸ್‌ಎಸ್ ರಾಷ್ಟ್ರಭಕ್ತ ಸಂಘಟನೆ. ಭಾರತ-ಚೀನಾ ಯುದ್ಧದ ವೇಳೆ ನೆಹರೂ ಇದರ ಕೊಡುಗೆಯನ್ನು ಸ್ವಾಗತಿಸಿದ್ದರು. ರಿಪಬ್ಲಿಕ್ ಡೇ ಪರೇಡ್‌ನಲ್ಲಿ ಆರ್‌ಎಸ್‌ಎಸ್‌ಗೆ ಅವಕಾಶ ಕೊಡಲಾಗಿತ್ತು,” ಎಂದು ವಿವರಿಸಿದರು. ನೆಹರೂ, ಇಂದಿರಾ ಗಾಂಧಿ ನಿಷೇಧಿಸಿದ್ದರೂ ಅದು ರದ್ದಾಯಿತು ಎಂದು ಖರ್ಗೆಯವರ ಹೇಳಿಕೆಯನ್ನು ಮಾಹಿತಿ ಕೊರತೆಯಿಂದ ಕೂಡಿದೆ ಎಂದು ಆಕ್ಷೇಪಿಸಿದರು.
ವಾಲ್ಮೀಕಿ ನಿಗಮ ಹಗರಣ: ವಾಲ್ಮೀಕಿ ನಿಗಮದ ರೂ.187 ಕೋಟಿ ಹಗರಣದ ತನಿಖೆಯನ್ನು ಹೈಕೋರ್ಟ್ ಸಿಬಿಐಗೆ ವಹಿಸಿರುವುದನ್ನು ಸ್ವಾಗತಿಸಿದ ವಿಜಯೇಂದ್ರ, “ಬಿಜೆಪಿ ಹೋರಾಟಕ್ಕೆ ಜಯ ಸಿಕ್ಕಿದೆ. ಈ ಹಗರಣದಲ್ಲಿ ದೊಡ್ಡ ತಲೆಗಳು ಉರುಳಲಿವೆ. ತೆಲಂಗಾಣದಲ್ಲಿ ಈ ಹಣವನ್ನು ಬಾರ್, ಜ್ಯುವೆಲ್ಲರಿ, ಲೋಕಸಭಾ ಚುನಾವಣೆಗೆ ದುರ್ಬಳಕೆ ಮಾಡಲಾಗಿದೆ. ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆಯ ಡೆತ್ ನೋಟ್‌ನಲ್ಲಿ ಎಲ್ಲವನ್ನೂ ಉಲ್ಲೇಖಿಸಿದ್ದಾರೆ,” ಎಂದರು. ಹಣಕಾಸು ಇಲಾಖೆ ಅನುಮತಿ ಇಲ್ಲದೆ ಹಣ ಹೊರರಾಜ್ಯಕ್ಕೆ ಹೋಗಲು ಸಾಧ್ಯವಿಲ್ಲ ಎಂದು ಆರೋಪಿಸಿದರು. ಸಿಎಂ ಸಿದ್ದರಾಮಯ್ಯ ಸಚಿವ ನಾಗೇಂದ್ರರನ್ನು ಮರಳಿ ಸಂಪುಟಕ್ಕೆ ಸೇರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.
ಸರ್ಕಾರದ ವೈಫಲ್ಯ: ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ಆಡಳಿತ ಯಂತ್ರ ಕುಸಿದು, ಅಧಿಕಾರಿಗಳು ನಿಷ್ಕ್ರಿಯರಾಗಿದ್ದಾರೆ. ರೈತರು, ಅಧಿಕಾರಿಗಳು, ಗುತ್ತಿಗೆದಾರರ ಆತ್ಮಹತ್ಯೆಗಳು ಹೆಚ್ಚಾಗಿವೆ. ಆಡಳಿತ ಪಕ್ಷದ ಶಾಸಕರೇ ಸರ್ಕಾರದ ವೈಫಲ್ಯವನ್ನು ಒಪ್ಪಿಕೊಂಡಿದ್ದಾರೆ ಎಂದು ವಿಜಯೇಂದ್ರ ಆರೋಪಿಸಿದರು.
ಹಿಂದೂಗಳ ಮೇಲೆ ದೌರ್ಜನ್ಯ: ಸಿಂಧನೂರಿನಲ್ಲಿ ಹಿಂದೂ ಕಾರ್ಯಕರ್ತರನ್ನು ಬೆದರಿಸಲಾಗಿದೆ. ಸಂಕೇಶ್ವರದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ. ಗೋವುಗಳ ಕೆಚ್ಚಲು ಕತ್ತರಿಸುವ ಘಟನೆಗಳು ಪದೇಪದೇ ಸಂಭವಿಸುತ್ತಿವೆ. ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದ ಅವರು, “ಸರ್ಕಾರದ ಪಾಪದ ಕೊಡ ತುಂಬಿದೆ. ಜನರು ಶಾಪ ಹಾಕುತ್ತಿದ್ದಾರೆ,” ಎಂದು ಗೃಹ ಸಚಿವರಿಗೆ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.












