ಬೆಂಗಳೂರು: ರಾಜ್ಯದಲ್ಲಿ ಜಾತಿ ಜನಗಣತಿ ವಿಚಾರ ಈಗಾಗಲೇ ಹೈಕೋರ್ಟ್‌ನ ಮೆಟ್ಟಿಲೇರಿದೆ. ಆದರೆ, ರಾಜ್ಯದ ಅಭಿವೃದ್ಧಿಯತ್ತ ಗಮನ ಹರಿಸಬೇಕಾದ ಮುಖ್ಯಮಂತ್ರಿಗಳು ಸಮಾಜವನ್ನು ಒಡೆಯುವ ಕೆಲಸಕ್ಕೆ ಕೈಹಾಕಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿಯಿಂದ ಹಿಂದೂ ಸಮಾಜವನ್ನು ಒಡೆಯುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿದರು. “ರಾಜ್ಯ ಸರ್ಕಾರಕ್ಕೆ ಜಾತಿ ಜನಗಣತಿ ನಡೆಸುವ ಅಧಿಕಾರವೇ ಇಲ್ಲ. ಆದರೂ ಇಂತಹ ಹುಡುಗಾಟಿಕೆಯಲ್ಲಿ ತೊಡಗಿದೆ. ಇದು ನಾಡಿನ ದುರ್ದೈವ. ಜನರು ಈಗಾಗಲೇ ಜಾಗೃತರಾಗಿದ್ದಾರೆ, ಸಮಾಜವೂ ಜಾಗೃತವಾಗಿದೆ. ಹಿಂದೂ ಸಮಾಜ ಇನ್ನಷ್ಟು ಜಾಗೃತಿಯಾಗಬೇಕಿದೆ,” ಎಂದು ವಿಜಯೇಂದ್ರ ಹೇಳಿದರು. ಈ ವಿಷಯದಲ್ಲಿ ನ್ಯಾಯಾಲಯದ ತೀರ್ಪನ್ನು ಕಾದುನೋಡುವುದಾಗಿಯೂ ಅವರು ತಿಳಿಸಿದರು.
ಜಿಎಸ್‌ಟಿ ಸುಧಾರಣೆ: ಜನಸಾಮಾನ್ಯರಿಗೆ ಲಾಭ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜಿಎಸ್‌ಟಿ ಸುಧಾರಣೆಯ ಗುರಿಯು ಜನಸಾಮಾನ್ಯರಿಗೆ ಪ್ರಯೋಜನ ಒದಗಿಸುವುದಾಗಿದೆ ಎಂದು ವಿಜಯೇಂದ್ರ ತಿಳಿಸಿದರು. “ಜಿಎಸ್‌ಟಿ ಸರಳೀಕರಣದಿಂದ ಜನರಿಗೆ ಲಾಭ ತಲುಪಲಿದೆ. ಸಣ್ಣಪುಟ್ಟ ಗೊಂದಲಗಳನ್ನು ನಿವಾರಿಸಲು ಕೇಂದ್ರ ಸರ್ಕಾರ ಗಮನ ಹರಿಸಲಿದೆ. ಇದರ ಅನುಷ್ಠಾನ ಜನರಿಗೆ ಒಳಿತನ್ನು ತಂದುಕೊಡಲಿದೆ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ನವರಾತ್ರಿ ಶುಭಾಶಯ
ನಾಡಿನ ಜನತೆಗೆ ನವರಾತ್ರಿ ಶುಭಾಶಯ ಕೋರಿದ ವಿಜಯೇಂದ್ರ, ಪ್ರಧಾನಮಂತ್ರಿ ಮೋದಿ ಅವರು ದೇಶದ ಜನತೆಗೆ ಶುಭಾಶಯ ತಿಳಿಸಿದ್ದಾರೆ ಎಂದರು. “ಇಂದಿನಿಂದ ಜಿಎಸ್‌ಟಿ ಸುಧಾರಣೆಯ ಅನುಷ್ಠಾನ ಆರಂಭವಾಗಿದ್ದು, ಇದೊಂದು ಐತಿಹಾಸಿಕ ದಿನವಾಗಿದೆ,” ಎಂದು ಅವರು ಹೇಳಿದರು.












