ಬಿಜೆಪಿ-ಚುನಾವಣಾ ಆಯೋಗದ ಸಂಚಿನಲ್ಲಿ ನಕಲಿ ಮತದಾರರು, ಬ್ರೆಜಿಲ್ ಮಾಡೆಲ್ ಫೋಟೋಗಳ ಬಳಕೆ: ಪ್ರಜಾತಂತ್ರಕ್ಕೆ ಕತ್ತು ಹಿಸುಕುತ್ತಿರುವ ಆಯೋಗ – ಸಿಎಂ ಆರೋಪ
ಬೆಂಗಳೂರು: ದೇಶದ ಚುನಾವಣಾ ವ್ಯವಸ್ಥೆಯಲ್ಲಿ ನಡೆಯುತ್ತಿರುವ ವ್ಯವಸ್ಥಿತ ಅಕ್ರಮಗಳ ಕರಾಳ ಮುಖವನ್ನು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ೨೫ ಲಕ್ಷಕ್ಕೂ ಅಧಿಕ ಮತಗಳ್ಳತನ ನಡೆದಿದ್ದು, ಇದಕ್ಕೆ ದಾಖಲೆಗಳೊಂದಿಗೆ ರಾಹುಲ್ ಗಾಂಧಿ ಸಾಕ್ಷ್ಯ ಒಡ್ಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಪ್ರಜಾತಂತ್ರದ ಕತ್ತು ಹಿಸುಕುತ್ತಿರುವ ಚುನಾವಣಾ ಆಯೋಗ
ಪಾರದರ್ಶಕ ಮತ್ತು ನಿಷ್ಪಕ್ಷಪಾತ ಚುನಾವಣೆಯ ಮೂಲಕ ಪ್ರಜಾತಂತ್ರವನ್ನು ರಕ್ಷಿಸಬೇಕಿರುವ ಚುನಾವಣಾ ಆಯೋಗವೇ ಕೇಂದ್ರ ಸರ್ಕಾರದೊಂದಿಗೆ ಸೇರಿಕೊಂಡು ಪ್ರಜಾತಂತ್ರ ವ್ಯವಸ್ಥೆಯ ಕತ್ತು ಹಿಸುಕುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಮಹಾರಾಷ್ಟ್ರ ಮತ್ತು ಕರ್ನಾಟಕ ಚುನಾವಣೆಗಳಲ್ಲಿ ಭಾರತೀಯರ ಹೆಸರುಗಳನ್ನಷ್ಟೇ ಬಳಸಿ ನಕಲಿ ಮತದಾರರನ್ನು ಸೃಷ್ಟಿಸುತ್ತಿದ್ದ ಬಿಜೆಪಿ ಮತ್ತು ಚುನಾವಣಾ ಆಯೋಗ, ಹರಿಯಾಣದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಬ್ರೆಜಿಲ್‌ನ ರೂಪದರ್ಶಿ ಮಾಡೆಲ್ ಗುರುತನ್ನು ಕೂಡ ಮತಗಳ್ಳತನಕ್ಕೆ ಬಳಸಿಕೊಂಡಿದೆ ಎಂದು ಅವರು ನಿರ್ಲಜ್ಜತೆಗೆ ಸಾಕ್ಷಿ ಎಂದು ಬಣ್ಣಿಸಿದ್ದಾರೆ.
೫ ಲಕ್ಷ ನಕಲಿ ಮತದಾರರು, ೧ ಲಕ್ಷಕ್ಕೂ ಅಧಿಕ ತಿರುಚಿದ ಫೋಟೋಗಳು
- ೫ ಲಕ್ಷಕ್ಕೂ ಅಧಿಕ ನಕಲಿ ಮತದಾರರು ಸೃಷ್ಟಿ.
- ೧ ಲಕ್ಷಕ್ಕೂ ಅಧಿಕ ಮತಗಳನ್ನು ತಿರುಚಿದ ಅಥವಾ ಗುರುತಿಸಲಾಗದ ಫೋಟೋಗಳ ಮೂಲಕ ಕಳವು.
- ಒಟ್ಟು ೨೫ ಲಕ್ಷಕ್ಕೂ ಅಧಿಕ ಮತಗಳ್ಳತನ.
- ಹರಿಯಾಣದಲ್ಲಿ ಮತ ಚಲಾಯಿಸಿದ ಪ್ರತಿ ೮ ಜನರಲ್ಲಿ ಒಬ್ಬ ನಕಲಿ ಮತ ಎನ್ನುವಂತೆ ಸ್ಥಿತಿ.
ಜನರ ದೃಢ ಸಂಕಲ್ಪಕ್ಕೆ ತಡೆಯೊಡ್ಡಿದ ಬಿಜೆಪಿ
ದೇಶದ ಬಹುತೇಕ ಚುನಾವಣಾ ಸಮೀಕ್ಷೆಗಳು ಹರಿಯಾಣದಲ್ಲಿ ಬಿಜೆಪಿ ಸೋಲಲಿದೆ ಎಂದು ಭವಿಷ್ಯ ನುಡಿದಿದ್ದರೂ, ಜನರು ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ದೃಢ ಸಂಕಲ್ಪ ಮಾಡಿದ್ದರೂ, ಬಿಜೆಪಿ ಹೇಗೆ ಬಹುಮತ ಪಡೆದು ಸರ್ಕಾರ ರಚಿಸಿತು ಎಂಬ ಅನುಮಾನಕ್ಕೆ ರಾಹುಲ್ ಗಾಂಧಿ ಉತ್ತರ ನೀಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಚುನಾವಣಾ ಆಯುಕ್ತರಿಗೆ ಆಗ್ರಹ
ತಮ್ಮ ಮೇಲಿನ ಆರೋಪಗಳಿಗೆ ಹಾರಿಕೆ ಉತ್ತರ ನೀಡಿ ಪಲಾಯನ ಮಾಡುತ್ತಿದ್ದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಈ ಬಾರಿಯಾದರೂ “ತನ್ನ ಮಾಲೀಕರ” ರಕ್ಷಣೆಯ ದುಸ್ಸಾಹಸಕ್ಕೆ ಕೈಹಾಕದೆ ಸತ್ಯವನ್ನು ಒಪ್ಪಿಕೊಂಡು, ಮಾಡಿದ ಪಾಪಗಳಿಗೆ ಕಾನೂನಿನ ಮೂಲಕ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
“ಈ ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಮಾನ ಹೋಗುವುದು ಗ್ಯಾರಂಟಿ” – ಸಿದ್ದರಾಮಯ್ಯ












