ಮಂಜೇಶ್ವರ: ಕನ್ನಡ ಭಾಷೆಯ ಉಳಿವಿಗಾಗಿ ಹೋರಾಡುವ ಕಾಂಗ್ರೆಸ್ ಬೆಂಬಲಿತ ಯುಡಿಎಫ್ ಅಭ್ಯರ್ಥಿ ಹಾಲಿ ಶಾಸಕ ಅಶ್ರಫ್ ಅವರನ್ನು ಬಹುಮತದೊಂದಿಗೆ ಗೆಲ್ಲಿಸುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಂಜೇಶ್ವರದಲ್ಲಿ ಶುಕ್ರವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡುತ್ತಾ, “ಮಂಜೇಶ್ವರಕ್ಕೆ ಬಂದರೆ ಕನ್ನಡ ನೆಲದಲ್ಲೇ ಇರುವಂತೆ ಭಾಸವಾಗುತ್ತದೆ. ಇಲ್ಲಿ ಕನ್ನಡ ಭಾಷಿಕರು ಹೆಚ್ಚಿರುವುದರಿಂದ ಇದು ಕನ್ನಡಿಗರಿಗೆ ಹೆಮ್ಮೆಯ ವಿಷಯ” ಎಂದರು.
ಗೋವಿಂದಪೈಯಂತಹ ಸಾಹಿತ್ಯ ದಿಗ್ಗಜರು ಹುಟ್ಟಿದ ಈ ನೆಲದಲ್ಲಿ ಕನ್ನಡದ ಉಳಿವಿಗೆ ಕಾರಣರಾದ ಜನರಿಗೆ ಅಭಿನಂದನೆ ಸಲ್ಲಿಸಿದ ಸಿದ್ದರಾಮಯ್ಯ, ಕನ್ನಡದ ರಕ್ಷಣೆಗಾಗಿ ಹೋರಾಡುತ್ತಿರುವ ಅಶ್ರಫ್ ಅವರನ್ನು ಇಲ್ಲಿನ ಕನ್ನಡಿಗರು ಒಕ್ಕೊರಲಿನಿಂದ ಬೆಂಬಲಿಸಬೇಕು ಎಂದು ಕರೆ ನೀಡಿದರು.

“ಬಿಜೆಪಿಗೆ ಸಿದ್ಧಾಂತವೇ ಇಲ್ಲ”
ಬಿಜೆಪಿಯು ರೈತರು, ದಲಿತರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ವಿರೋಧಿ ಪಕ್ಷವಾಗಿದೆ ಎಂದು ಆರೋಪಿಸಿದ ಮುಖ್ಯಮಂತ್ರಿ, “ಬಿಜೆಪಿಗೆ ಯಾವುದೇ ಸಿದ್ಧಾಂತವಿಲ್ಲ. ಅದು ಶ್ರೀಮಂತರು, ಮೇಲ್ವರ್ಗದವರು ಮತ್ತು ಕಾರ್ಪೊರೇಟ್ ಸಂಸ್ಥೆಗಳ ಪರವಾಗಿ ಕಾರ್ಯನಿರ್ವಹಿಸುತ್ತಿದೆ” ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳನ್ನು ಪ್ರಸ್ತಾಪಿಸಿದ ಅವರು, “ಬಿಜೆಪಿಯವರು ಗ್ಯಾರಂಟಿಗಳು ರಾಜ್ಯವನ್ನು ದಿವಾಳಿಯತ್ತ ಕೊಂಡೊಯ್ಯುತ್ತವೆ ಎಂದು ಟೀಕಿಸಿದ್ದರು. ಆದರೆ ನಾವು ಕಳೆದ ಮೂರು ವರ್ಷಗಳಲ್ಲಿ 1.31 ಲಕ್ಷ ಕೋಟಿ ರೂಪಾಯಿ ವೆಚ್ಚ ಮಾಡಿ ಗ್ಯಾರಂಟಿಗಳನ್ನು ಸಮರ್ಪಕವಾಗಿ ಜಾರಿಗೊಳಿಸಿದ್ದೇವೆ” ಎಂದರು.
ಶಕ್ತಿ ಯೋಜನೆಯ ಸಾಧನೆ
ಶಕ್ತಿ ಯೋಜನೆಯಡಿ 3.5 ಕೋಟಿ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ ಎಂದು ತಿಳಿಸಿದ ಸಿದ್ದರಾಮಯ್ಯ, “ಈ ಯೋಜನೆಯಿಂದ ಮಹಿಳೆಯರ ಖರೀದಿ ಶಕ್ತಿ ಹೆಚ್ಚಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಡಿ 1.26 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂಪಾಯಿ ನೀಡಲಾಗುತ್ತಿದೆ” ಎಂದರು.
ಕೇರಳದಲ್ಲಿ ಇಂದಿರಾ ಗ್ಯಾರಂಟಿ ಯೋಜನೆಗಳನ್ನು ಘೋಷಿಸಲಾಗಿದೆ ಎಂದು ಹೇಳಿದ ಅವರು, “ನುಡಿದಂತೆ ನಡೆಯುವ ರಾಜ್ಯ ಕರ್ನಾಟಕ ಮಾತ್ರವಲ್ಲ, ಕೇರಳವೂ ಆಗಬೇಕು. ಅದಕ್ಕಾಗಿ ಯುಡಿಎಫ್ ಅಭ್ಯರ್ಥಿ ಅಶ್ರಫ್ ಅವರಿಗೆ ಮತ ಹಾಕಿ” ಎಂದು ಮನವಿ ಮಾಡಿದರು.
ಮೋದಿ vl ಆಹಾರ ಭದ್ರತಾ ಕಾಯ್ದೆ ದುರುಪಯೋಗ
ಪ್ರಧಾನಿ ನರೇಂದ್ರ ಮೋದಿ ಅವರು ಆಹಾರ ಭದ್ರತಾ ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ ಸಿದ್ದರಾಮಯ್ಯ, “ಮನಮೋಹನ್ ಸಿಂಗ್ ಅವರು ಜಾರಿಗೊಳಿಸಿದ ಈ ಕಾಯ್ದೆಯನ್ನು ಮೋದಿಯವರು ವಿರೋಧಿಸಿದ್ದರು. ಆದರೆ ಈಗ ಅದನ್ನು ದುರುಪಯೋಗ ಮಾಡುತ್ತಿದ್ದಾರೆ” ಎಂದರು.
ಕರ್ನಾಟಕದಲ್ಲಿ 5 ಕೆಜಿ ಹೆಚ್ಚುವರಿ ಅಕ್ಕಿ ನೀಡುವ ಘೋಷಣೆ ಮಾಡಿದಾಗ ಕೇಂದ್ರ ಸರ್ಕಾರ ಅಕ್ಕಿ ನೀಡಲು ನಿರಾಕರಿಸಿದ್ದರಿಂದ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ವರ್ಗಾಯಿಸಲಾಗಿದೆ ಎಂದು ವಿವರಿಸಿದರು.
ನಿರುದ್ಯೋಗ ಮತ್ತು ಆರ್ಥಿಕ ಸ್ಥಿತಿ
ಕೇರಳದಲ್ಲಿ ಶೇ. 8% ನಿರುದ್ಯೋಗವಿದೆ ಎಂದು ಹೇಳಿದ ಅವರು, “ಯುವಕರು ವಿದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಕೇರಳ ಸಾಲಗಾರ ರಾಜ್ಯವಾಗಿದೆ. ಆರ್ಥಿಕ ಹೊಣೆಗಾರಿಕೆ ಕಾಯ್ದೆಯಡಿ ವಿತ್ತೀಯ ಕೊರತೆ 3.5% ಇದ್ದು, ಜಿಡಿಪಿಯ 35% ಸಾಲವಿದೆ” ಎಂದು ಆರೋಪಿಸಿದರು.
ಬಿಜೆಪಿಗೆ ಮತ ಹಾಕಬೇಡಿ ಎಂದು ಮನವಿ ಮಾಡಿದ ಸಿದ್ದರಾಮಯ್ಯ, “ಅದು ಸಂವಿಧಾನ, ಬಡವರು, ಮಹಿಳೆಯರು ಮತ್ತು ರೈತರ ವಿರೋಧಿ ಪಕ್ಷ” ಎಂದು ಕೊನೆಗೊಳಿಸಿದರು.












