ಬೆಂಗಳೂರು: ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರು ಚಿಕ್ಕಮಗಳೂರು ಕ್ಷೇತ್ರದ ಚುನಾವಣಾ ಮರುಎಣಿಕೆಗೆ ಸಂಬಂಧಿಸಿದ ಗಂಭೀರ ಆರೋಪಗಳನ್ನು ಹೊರ ಹಾಕಿದರು. ಅಂಚೆ ಮತಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ಘಟನೆಯನ್ನು “ವೋಟ್ ಡಕಾಯಿತಿ” ಎಂದು ವಿವರಿಸಿದರು.
ಮುಖಂಡ ಬಿ.ಎಲ್. ಶಂಕರ್ ಮಾತನಾಡಿ, 2023ರ ವಿಧಾನಸಭಾ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಯಾಗಿದ್ದ ಬಿಜೆಪಿಯ ಡಿ.ಎನ್. ಜೀವರಾಜ್ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ ಹಿನ್ನೆಲೆ ಮರುಎಣಿಕೆ ಪ್ರಕ್ರಿಯೆ ನಡೆಯಿತು ಎಂದರು. ಹೈಕೋರ್ಟ್ ಸೂಚನೆಯಂತೆ ಅಸಿಂಧುವಾಗಿದ್ದ 279 ಅಂಚೆ ಮತಗಳನ್ನು ಮರುಪರಿಶೀಲನೆ ಮಾಡಲು ಆದೇಶಿಸಲಾಗಿತ್ತು.
ಮೇ 2, 2026ರಂದು ನಡೆದ ಮರುಎಣಿಕೆ ಸಂದರ್ಭದಲ್ಲಿ ಅಂಚೆ ಮತಗಳ ಪೆಟ್ಟಿಗೆಗಳ ಬೀಗಗಳು ತೆರೆದಿರುವುದು ಗಮನಕ್ಕೆ ಬಂದಿದ್ದು, ಇದನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಎಣಿಕೆ ಮುಂದುವರಿಸಲಾಯಿತು ಎಂದು ಆರೋಪಿಸಿದರು. ಮರುಎಣಿಕೆಯಲ್ಲಿ ಕೆಲವೇ ಮತಗಳಲ್ಲಿ ಬದಲಾವಣೆ ಕಂಡುಬಂದರೂ, ಮೂಲತಃ ಸಿಂಧುವಾಗಿದ್ದ ಮತಪತ್ರಗಳು ತಿದ್ದುಪಡಿ ಮಾಡಿ ಅಸಿಂಧುವಾಗಿಸಿದಂತೆ ಕಂಡುಬಂದವು ಎಂದು ಅವರು ತಿಳಿಸಿದರು.
ರಾಜೇಗೌಡರ ಪರವಾಗಿ ಬಂದಿದ್ದ ಮತಪತ್ರಗಳ ಮೇಲೆ ಬೇರೆ ಇಂಕ್ ಬಳಸಿ ಗುರುತು ಹಾಕಲಾಗಿದೆ ಎಂದು ಆರೋಪಿಸಿದ ಶಂಕರ್, ಇದು ಚುನಾವಣಾ ಆಯೋಗದ ಭದ್ರತೆಯಲ್ಲೇ ನಡೆದ ಅಕ್ರಮವಾಗಿದ್ದು, ಅಧಿಕಾರಿಗಳು ಹಾಗೂ ಸಂಬಂಧಿತ ವ್ಯಕ್ತಿಗಳ ಕೈವಾಡವಿದೆ ಎಂದು ಹೇಳಿದರು. ಈ ಸಂಬಂಧ ಚಿಕ್ಕಮಗಳೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದರು.
ರಾಜ್ಯ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, 2023ರ ಮತ ಎಣಿಕೆ ವೇಳೆ ಎಲ್ಲಾ ಪ್ರಕ್ರಿಯೆಗಳು ನಿಯಮಾನುಸಾರ ನಡೆದಿದ್ದವು ಎಂದು ವಿವರಿಸಿದರು. ಅಂಚೆ ಮತಗಳ ಎಣಿಕೆಯಲ್ಲಿ ಒಟ್ಟು 1822 ಮತಗಳಲ್ಲಿ 279 ಮತಗಳು ತಾಂತ್ರಿಕ ಕಾರಣಗಳಿಂದ ಅಸಿಂಧುವಾಗಿದ್ದವು ಎಂದು ಹೇಳಿದರು.
ಮರುಎಣಿಕೆಯ ವೇಳೆ ಸ್ಟ್ರಾಂಗ್ ರೂಮ್‌ನ ಭದ್ರತೆಯಲ್ಲೇ ವ್ಯತ್ಯಾಸ ಕಂಡುಬಂದಿದ್ದು, ಕೆಲವು ಪೆಟ್ಟಿಗೆಗಳಿಗೆ ಸೀಲ್ ಹಾಗೂ ಬೀಗ ಇರಲಿಲ್ಲ ಎಂದು ಆರೋಪಿಸಿದರು. ಅಲ್ಲದೆ, ಸಿಂಧು ಮತಗಳ ಮೇಲೆ ಮತ್ತೊಮ್ಮೆ ಗುರುತು ಹಾಕಿ ಅವುಗಳನ್ನು ಅಸಿಂಧುವಾಗಿಸುವ ಪ್ರಯತ್ನ ನಡೆದಿರುವುದು ಕಂಡುಬಂದಿದೆ ಎಂದರು.
ಟಿ.ಡಿ. ರಾಜೇಗೌಡ ಅವರು ಮಾತನಾಡಿ, 201 ಮತಗಳ ಅಂತರದಿಂದ ಗೆದ್ದಿದ್ದ ತಮ್ಮನ್ನು ಮೋಸದಿಂದ ಸೋಲಿಸಲಾಗಿದೆ ಎಂದು ಆರೋಪಿಸಿದರು. “ನನಗೆ ಅನ್ಯಾಯವಾಗಿದೆ. ಸಂವಿಧಾನಾತ್ಮಕ ವ್ಯವಸ್ಥೆಯ ಮೇಲೆ ನಂಬಿಕೆ ಇದೆ. ನ್ಯಾಯಾಲಯದ ಮೂಲಕ ನ್ಯಾಯ ಪಡೆಯುತ್ತೇನೆ” ಎಂದು ಹೇಳಿದರು.
ಈ ಘಟನೆ ದೇಶದಲ್ಲಿಯೇ ಅಪರೂಪದ ಅಕ್ರಮವಾಗಿದ್ದು, ಇದರಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಮುಖಂಡರು ಆಗ್ರಹಿಸಿದರು. ಮರುಎಣಿಕೆ ವಿವಾದ ಈಗ ಕಾನೂನು ಹೋರಾಟದ ಹಾದಿ ಹಿಡಿದಿದೆ.












