ಬೆಂಗಳೂರು: ಐಪಿಎಲ್ ಫೈನಲ್ ಪಂದ್ಯವನ್ನು ಅಹಮದಾಬಾದ್‌ಗೆ ಸ್ಥಳಾಂತರಿಸಿರುವುದಕ್ಕೂ ಶಾಸಕರಿಗೆ ಟಿಕೆಟ್ ವಿತರಣೆಯ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಅಹಮದಾಬಾದ್‌ನಲ್ಲಿ ದೊಡ್ಡ ಕ್ರೀಡಾಂಗಣವಿದ್ದು ಹೆಚ್ಚಿನ ಪ್ರೇಕ್ಷಕರು ಸೇರಲು ಸಾಧ್ಯವಾಗುತ್ತದೆ. ಆ ಕಾರಣಕ್ಕೆ ಪಂದ್ಯವನ್ನು ಸ್ಥಳಾಂತರ ಮಾಡಿರಬಹುದು. ಇದನ್ನು ಶಾಸಕರಿಗೆ ಟಿಕೆಟ್ ನೀಡುವ ವಿಚಾರಕ್ಕೆ ಸಂಬಂಧಿಸಬಾರದು” ಎಂದರು.
ಬೆಂಗಳೂರಿನಲ್ಲಿ ನಡೆಯಬೇಕಿದ್ದ ಐಪಿಎಲ್ ಫೈನಲ್ ಪಂದ್ಯವನ್ನು ಶಾಸಕರಿಗೆ ಟಿಕೆಟ್ ಒದಗಿಸುವ ಒತ್ತಡದ ಹಿನ್ನೆಲೆ ಸ್ಥಳಾಂತರಿಸಲಾಗಿದೆ ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಅವರು, “ಇತರೆ ಕಡೆಗಳಲ್ಲಿ ಶೇ.50ರಷ್ಟು ಮೀಸಲಾತಿ ಇರುತ್ತದೆ. ಬಿಸಿಸಿಐ ಈ ಬಗ್ಗೆ ಏನೆಲ್ಲ ಹೇಳುತ್ತದೋ ಅದಕ್ಕೆ ನಾನು ಸೂಕ್ತ ಉತ್ತರ ನೀಡುತ್ತೇನೆ” ಎಂದು ಹೇಳಿದರು.
ಪಕ್ಷದ ತೀರ್ಮಾನ ಕುರಿತು ಪ್ರತಿಕ್ರಿಯೆ ಬೇಡ
ದಾವಣಗೆರೆಯಲ್ಲಿ ಮುಸ್ಲಿಂ ನಾಯಕರ ಅಮಾನತು ಹಿಂಪಡೆಯುವ ಪ್ರಶ್ನೆಗೆ ಉತ್ತರಿಸಿದ ಅವರು, “ಈ ವಿಷಯದಲ್ಲಿ ನಾನು ಪ್ರತಿಕ್ರಿಯಿಸುವುದಿಲ್ಲ. ಪಕ್ಷವೇ ತೀರ್ಮಾನ ತೆಗೆದುಕೊಂಡಿದೆ. ಮುಖ್ಯಮಂತ್ರಿಗಳಿಗೆ ಅವರದೇ ಆದ ಮಾಹಿತಿ ಇರುತ್ತದೆ. ಪಕ್ಷದ ಪದಾಧಿಕಾರಿಗಳು ನೀಡಿದ ಮಾರ್ಗದರ್ಶನದಂತೆ ಕ್ರಮ ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.
ಜಬ್ಬಾರ್ ಅವರ ರಾಜೀನಾಮೆ ಕುರಿತು ಮಾತನಾಡಿದ ಅವರು, “ಅವರು ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿದರು. ಅದನ್ನು ಸ್ವೀಕರಿಸಲಾಗಿದೆ ಅಷ್ಟೇ” ಎಂದರು.
ಕರೆದಾಗ ಮಾತ್ರ ದೆಹಲಿಗೆ ಭೇಟಿ
ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ದೆಹಲಿ ಭೇಟಿ ಕುರಿತು ಕೇಳಿದ ಪ್ರಶ್ನೆಗೆ, “ಹೈಕಮಾಂಡ್ ಕರೆದಾಗ ನಾವು ದೆಹಲಿಗೆ ಹೋಗುತ್ತೇವೆ. ಕರೆಯದೇ ಹೋಗುವುದು ಸರಿಯಲ್ಲ” ಎಂದು ಹೇಳಿದರು.
ಟಿವಿಕೆಗೆ ಬೆಂಬಲ: ಜಾತ್ಯಾತೀತ ತತ್ವ ಉಳಿಸುವ ಉದ್ದೇಶ
ತಮಿಳುನಾಡಿನಲ್ಲಿ ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿರುವ ಕುರಿತು ಮಾತನಾಡಿದ ಅವರು, “ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದು ಹಾಗೂ ಜಾತ್ಯಾತೀತ ಶಕ್ತಿಗಳನ್ನು ಒಗ್ಗೂಡಿಸುವುದು ನಮ್ಮ ಉದ್ದೇಶ. ತಮಿಳುನಾಡಿನ ಹಿತದೃಷ್ಟಿಯಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ” ಎಂದು ಹೇಳಿದರು.












