ಬೆಂಗಳೂರು: ಬಿಡದಿ ಟೌನ್ ಶಿಪ್ ಯೋಜನೆ ಕುರಿತು ಕುಮಾರಸ್ವಾಮಿ ಅವರು ಕರೆದ ಪಂಥಾಹ್ವಾನವನ್ನು ಸ್ವೀಕರಿಸಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, “ಅವರೇ ದಿನಾಂಕ ಮತ್ತು ಸ್ಥಳ ನಿಗದಿಪಡಿಸಲಿ. ಮೂರು ದಿನ ಸಾಕು, ನಾನು ಸಿದ್ಧವಾಗಿದ್ದೇನೆ” ಎಂದು ಪ್ರತಿಕ್ರಿಯೆ ನೀಡಿದರು.
ಗುರುವಾರ ಕುಮಾರಪಾರ್ಕ್‌ನ ಸರ್ಕಾರಿ ಗೃಹ ಕಚೇರಿಯಲ್ಲಿ ಬಿಡದಿ ಟೌನ್ ಶಿಪ್ ಪ್ರದೇಶದ ರೈತರೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಶಿವಕುಮಾರ್ ಅವರು, ಯೋಜನೆಯ ಪ್ರಗತಿ ಮತ್ತು ರೈತರ ಬೇಡಿಕೆಗಳ ಬಗ್ಗೆ ವಿವರಿಸಿದರು.
ಜೂನ್ ಮೊದಲ ವಾರದಿಂದ ಪರಿಹಾರ ವಿತರಣೆ
“ಬಿಡದಿ ಟೌನ್ ಶಿಪ್ ಗೆ ಜಮೀನು ನೀಡಿರುವ ರೈತರಿಗೆ ಜೂನ್‌ನ ಮೊದಲ ವಾರದಿಂದಲೇ ಪರಿಹಾರದ ಹಣ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುತ್ತೇನೆ. ಮೂರು-ಮೂರು ಹಳ್ಳಿಗಳನ್ನು ಸೇರಿಸಿ ಪ್ರತ್ಯೇಕ ಅಂತಿಮ ನೋಟಿಫಿಕೇಶನ್ ಹೊರಡಿಸುವುದು ನಮ್ಮ ನಿರ್ಧಾರ. ಈಗಾಗಲೇ ಶೇ.80 ರಷ್ಟು ರೈತರು ಯೋಜನೆಗೆ ಒಪ್ಪಿಗೆ ನೀಡಿದ್ದಾರೆ,” ಎಂದು ಶಿವಕುಮಾರ್ ಹೇಳಿದರು.
ರೈತರು ಪರಿಹಾರದ ಜೊತೆಗೆ ನಿವೇಶನ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿಸಿದ ಅವರು, ಭೂರಹಿತರ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.
ಯೋಜನೆಯ ಇತಿಹಾಸವನ್ನು ನೆನಪಿಸಿದ ಡಿ.ಕೆ.
ಈ ಯೋಜನೆ ತನ್ನ ಕಾಲದ್ದಲ್ಲ ಎಂದು ಸ್ಪಷ್ಟಪಡಿಸಿದ ಶಿವಕುಮಾರ್, “ಕುಮಾರಸ್ವಾಮಿ ಅವರ ಕಾಲದಲ್ಲೇ ನೋಟಿಫಿಕೇಶನ್ ಆಗಿತ್ತು. ಡಿಎಲ್‌ಎಫ್ ಕಂಪೆನಿಗೆ ನೀಡಲಾಗಿತ್ತು. ಅವರು ಹಣ ವಾಪಸ್ ತೆಗೆದುಕೊಂಡು ಹೋದರು. ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಕಾಲದಲ್ಲಿ ಕೆಐಡಿಬಿ 1,000 ಎಕರೆ ತೆಗೆದುಕೊಂಡಾಗ ಯಾರೂ ಮಾತನಾಡಲಿಲ್ಲ,” ಎಂದರು.
ಕುಮಾರಸ್ವಾಮಿ-ದೇವೇಗೌಡರ ವಿರುದ್ಧ ತಿರುಗೇಟು
ಕುಮಾರಸ್ವಾಮಿ ಅವರೊಂದಿಗೆ ಚರ್ಚೆಗೆ ದೇವೇಗೌಡರೂ ಬರಬೇಕು ಎಂದು ಡಿ.ಕೆ. ಒತ್ತಾಯಿಸಿದರು. “ಈ ಭಾಗದಲ್ಲಿ ಭೂಸ್ವಾಧೀನ ಆರಂಭಿಸಿದ್ದೇ ಕುಮಾರಸ್ವಾಮಿ ಮತ್ತು ದೇವೇಗೌಡರು. ಅವರ ಕುಟುಂಬಸ್ಥರು ಇಲ್ಲೇ ಜಮೀನು ಖರೀದಿ ಮಾಡಿದ್ದಾರೆ. ಎಲ್ಲರಿಗೂ ಒಂದೇ ನ್ಯಾಯ ಅನ್ವಯವಾಗಬೇಕು,” ಎಂದು ಅವರು ಹೇಳಿದರು.
ನಿಖಿಲ್ ಕುಮಾರಸ್ವಾಮಿ ಅವರ ಟೀಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, “ಆ ಹುಡುಗನಿಗೆ ಉತ್ತರ ಕೊಡುವುದಿಲ್ಲ. ಅವರ ಸ್ಟೇಟಸ್ ಏನು ಎಂದು ನನಗೆ ಗೊತ್ತಿಲ್ಲ. ಪಕ್ಷದ ಅಧ್ಯಕ್ಷರಾದರೆ ಉತ್ತರಿಸುತ್ತೇನೆ,” ಎಂದು ವ್ಯಂಗ್ಯವಾಡಿದರು.
ಕಬ್ಬಿಣದ ಬೆಲೆ ಏರಿಕೆಗೆ ವ್ಯಂಗ್ಯ
ರೈತರ ಸಲಹೆಯನ್ನು ಉಲ್ಲೇಖಿಸಿದ ಅವರು, “ಕಬ್ಬಿಣದ ಬೆಲೆ ಟನ್‌ಗೆ 5 ಸಾವಿರ ರೂ. ಏರಿದೆ. ಕುಮಾರಣ್ಣ ಅವರು ಸಚಿವರಾಗಿದ್ದಾರೆ. ಮೊದಲು ಬೆಲೆ ತಡೆಯಲಿ, ಆನಂತರ ಪಂಥಾಹ್ವಾನಕ್ಕೆ ಬರಲಿ,” ಎಂದು ಹೇಳಿದರು. ಬಡವರ ಮನೆ ನಿರ್ಮಾಣಕ್ಕೆ ಕಬ್ಬಿಣ, ಸಿಮೆಂಟ್, ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ತೊಂದರೆ ನೀಡುತ್ತಿದೆ ಎಂದು ವ್ಯಂಗ್ಯ ಮಾಡಿದರು.
ರೈತರಿಗೆ ಸಲಹೆ
ರೈತರಿಗೆ ಮನವಿ ಮಾಡಿದ ಶಿವಕುಮಾರ್, “ಸಾಧ್ಯವಾದಷ್ಟು ನಿಮ್ಮ ಜಮೀನನ್ನು ಉಳಿಸಿಕೊಳ್ಳಿ. ಪ್ರೀಮಿಯಂ ಎಫ್‌ಎಆರ್ ಬಂದಾಗ ಲಾಭವಾಗುತ್ತದೆ. ಯೋಜನೆಗೆ ಸಹಕರಿಸುವ ರೈತರಿಗೆ ಉತ್ತಮ ಪರಿಹಾರ ನೀಡುತ್ತೇವೆ. ಜೂನ್ 30ರೊಳಗೆ ಎಲ್ಲಾ ಅಧಿಸೂಚನೆಗಳು ಹೊರಡುತ್ತವೆ,” ಎಂದರು.
ಬಿಡದಿ ಟೌನ್ ಶಿಪ್ ಅನ್ನು ಗ್ರೇಟರ್ ಬೆಂಗಳೂರು ಸಮಗ್ರ ಟೌನ್ ಶಿಪ್ ಎಂದು ಹೆಸರಿಸಲಾಗಿದೆ. ನೈಸ್ ರಸ್ತೆ, ಕನಕಪುರ ರಸ್ತೆ, ಮೈಸೂರು-ಬೆಂಗಳೂರು ರಸ್ತೆಗಳು ಸಂಪರ್ಕಿಸಲ್ಪಡುತ್ತವೆ ಎಂದು ಅವರು ತಿಳಿಸಿದರು.
ಈ ಸಭೆಯಲ್ಲಿ ಮಾಗಡಿ ಶಾಸಕ ಬಾಲಕೃಷ್ಣ ಅವರೂ ಉಪಸ್ಥಿತರಿದ್ದರು.










