ಬೆಂಗಳೂರು: ರಾಜ್ಯದ ಯಾವುದೇ ಪ್ರಜೆಯ ಮತದಾನ ಹಕ್ಕನ್ನು ಅನಾವಶ್ಯಕವಾಗಿ ಕಸಿದುಕೊಳ್ಳುವ ಪ್ರಕ್ರಿಯೆ ನಡೆದಲ್ಲಿ ಅದನ್ನು ತಡೆಯಲು ಸರ್ಕಾರ ಸರ್ವಪ್ರಯತ್ನ ನಡೆಸುವುದಾಗಿ ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ಹೇಳಿದರು.
ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದೆ ಎಂದು ಸಚಿವರು ತಿಳಿಸಿದರು. ದೇಶದಲ್ಲಿ, ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ ಈ ಪ್ರಕ್ರಿಯೆಯಿಂದ 27 ಲಕ್ಷ ಜನರ ಮತದ ಹಕ್ಕು ಕಸಿಯಲಾಗಿದೆ ಎಂಬ ಆಕ್ಷೇಪಗಳು ಎದ್ದಿವೆ. ಈ ಅವಘಡಗಳು ಮತ್ತು ಗಂಭೀರ ಆಕ್ಷೇಪಗಳನ್ನು ಪರಿಗಣಿಸಿ, ಸುಪ್ರೀಂ ಕೋರ್ಟ್‌ಗೆ ಹೋಗುವ ಸಾಧ್ಯತೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ಚರ್ಚೆ ನಡೆಸಲಾಗುತ್ತಿದೆ ಎಂದರು. ಅಂತಿಮ ಮತದಾರರ ಪಟ್ಟಿ ತಯಾರಿಕೆ, SIR ಪ್ರಕ್ರಿಯೆಯ ಪಾರದರ್ಶಕತೆ ಸೇರಿದಂತೆ ಮುಖ್ಯ ಅಂಶಗಳ ಬಗ್ಗೆ ಶೀಘ್ರದಲ್ಲೇ ನಿರ್ಣಯ ಕೈಗೊಳ್ಳಲಾಗುವುದು ಎಂದು ಪಾಟೀಲ್ ಹೇಳಿದರು.
ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು
ದಿನಾಂಕ 21-05-2026ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮುಖ್ಯ ನಿರ್ಣಯಗಳು ತೆಗೆದುಕೊಳ್ಳಲಾಗಿದೆ. ಅವುಗಳ ಪ್ರಮುಖ ಮುಖ್ಯಾಂಶಗಳು ಈ ಕೆಳಗಿನಂತಿವೆ:
- ಎನ್.ಜಿ.ಇ.ಎಫ್ (ಹುಬ್ಬಳ್ಳಿ) ಸಂಸ್ಥೆಗೆ ರೂ.6 ಕೋಟಿ ಸಾಲ ಮತ್ತು ಬಡ್ಡಿ ಜೊತೆಗೆ ರೂ.10 ಕೋಟಿ ಬಡ್ಡಿರಹಿತ ಸಾಲವನ್ನು ಈಕ್ವಿಟಿಯಾಗಿ ಪರಿವರ್ತಿಸಲು ಅನುಮೋದನೆ.
- ಯಾದಗಿರಿ ಜಿಲ್ಲೆ ಶಹಾಪುರ ಮತ್ತು ರಾಯಚೂರು ಜಿಲ್ಲೆ ದೇವದುರ್ಗದಲ್ಲಿ ತಲಾ 50 ಹಾಸಿಗೆಗಳ MCH ಆಸ್ಪತ್ರೆಗಳ ನಿರ್ಮಾಣಕ್ಕೆ ಒಟ್ಟು ರೂ.38 ಕೋಟಿ ಅನುದಾನ.
- ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ನಮ್ಮ ಕ್ಲಿನಿಕ್‌ಗಳಿಗೆ ಪ್ರಯೋಗಾಲಯ ಉಪಕರಣಗಳು (RD KIT) ಖರೀದಿಗೆ ರೂ.22 ಕೋಟಿ ಮಂಜೂರು.
- ಬೆಂಗಳೂರು, ಧಾರವಾಡ, ಬೆಳಗಾವಿ ಮತ್ತು ಬಳ್ಳಾರಿ ಕೇಂದ್ರ ಕಾರಾಗೃಹಗಳ ಆವರಣದಲ್ಲಿ IOCL, HPCL ಮತ್ತು BPCL ಸಂಸ್ಥೆಗಳೊಂದಿಗೆ Dealership ಮಾದರಿಯಲ್ಲಿ ಪೆಟ್ರೋಲ್ ಪಂಪ್‌ಗಳು ಮತ್ತು ಮಳಿಗೆಗಳ ಸ್ಥಾಪನೆಗೆ ಅನುಮತಿ.
- ಗುತ್ತಿಗೆ ಆಧಾರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ: ಕನಕಪುರದಲ್ಲಿ ಮಳೆ ನೀರು ಚರಂಡಿ (ರೂ.20 ಕೋಟಿ), ಮಂಡ್ಯದಲ್ಲಿ ರಸ್ತೆ ಅಭಿವೃದ್ಧಿ (ರೂ.11.40 ಕೋಟಿ), ಜೋಯಿಡಾ ಪ್ರಜಾಸೌಧ (ರೂ.10.61 ಕೋಟಿ) ಇತ್ಯಾದಿ.
- ಮೈಸೂರು ಅಭಿವೃದ್ಧಿ ಪ್ರಾಧಿಕಾರದ 17.35 ಎಕರೆ ಜಮೀನನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರ.
- ಕಾರವಾರದಲ್ಲಿ 200 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ರೂ.100 ಕೋಟಿ.
- ಶಿಶು ಅಭಿವೃದ್ಧಿ ಯೋಜನೆಯಡಿ 69,922 ಅಂಗನವಾಡಿಗಳಿಗೆ ಶಾಲಾಪೂರ್ವ ಶಿಕ್ಷಣ ಕಿಟ್‌ಗಳ ಖರೀದಿಗೆ ರೂ.20.98 ಕೋಟಿ.
- ಹಿಂದುಳಿದ ವರ್ಗಗಳ 500 ವಿದ್ಯಾರ್ಥಿಗಳಿಗೆ ಪಿ.ಯು.ಸಿ. + NEET/JEE/CET ತರಬೇತಿಗೆ ರೂ.15 ಕೋಟಿ ಯೋಜನೆ.
- ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ನೆರವಿನ KSHET ಯೋಜನೆಯಡಿ ರೂ.802 ಕೋಟಿ ವಸ್ತುಗಳ ಮುಂಗಡ ಖರೀದಿಗೆ ಅನುಮೋದನೆ.
ಸಭೆಯಲ್ಲಿ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ನಿವೃತ್ತ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ಅವರನ್ನು ಆಯ್ಕೆ ಮಾಡಲಾಗಿದೆ. ಮಳೆಗಾಲದ ಅಧಿವೇಶನದ ಬಗ್ಗೆ ಇನ್ನೂ ಚರ್ಚೆ ನಡೆಯಲಿಲ್ಲ ಎಂದು ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದರು.










