ಬೆಂಗಳೂರು: ಬರುವ ಮೇ 28, 2026 ರಂದು ನಡೆಯಲಿರುವ ಬಕ್ರಿದ್ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಕ್ರಮ ಗೋಸಾಗಾಟ, ಕಾನೂನು ಬಾಹಿರ ಗೋಹತ್ಯೆ ಹಾಗೂ ಸಾರ್ವಜನಿಕ ರಸ್ತೆಗಳಲ್ಲಿ ನಮಾಜ್ ಮಾಡುವುದನ್ನು ತಡೆಯುವಂತೆ ಒತ್ತಾಯಿಸಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯು ಕರ್ನಾಟಕ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಇಂದು ಬೆಂಗಳೂರು ಜಿಲ್ಲಾಧಿಕಾರಿಗಳ ಮೂಲಕ ಗೃಹ ಸಚಿವರಿಗೆ ಸಲ್ಲಿಸಲಾದ ಮನವಿಯಲ್ಲಿ ಸಮಿತಿಯು ವಿಶೇಷ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದೆ. ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಸುಂದ್ರೇಶ್ ನರ್ಗಲ್, ನವೀನ್, ಹಿಂದೂ ಮುಖಂಡ ಎಂ.ಎಲ್. ಶಿವಕುಮಾರ್, ಗೋರಕ್ಷಕ ಸಂತೋಷ ಕಡ್ತಾಳ, ಶ್ರೀರಾಮ ಸೇನಾ ಮಹಿಳಾ ಮುಖಂಡೆ ಸರಸ್ವತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ ಗೌಡ ಅವರು ಮನವಿ ಸಲ್ಲಿಕೆಯ ನಂತರ ಮಾತನಾಡಿ, “ಬಕ್ರಿದ್ ಹಬ್ಬದ ಅವಧಿಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಅಕ್ರಮ ಗೋಸಾಗಾಟ ಮತ್ತು ಗೋಹತ್ಯೆ ನಡೆಯುವ ಸಾಧ್ಯತೆ ಇದೆ. ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಗೋಸಂರಕ್ಷಣಾ ಕಾಯಿದೆ ಇದ್ದರೂ ಕೆಲವು ಪ್ರದೇಶಗಳಲ್ಲಿ ರಸ್ತೆ ಬದಿ ಮತ್ತು ಜನವಸತಿ ಪ್ರದೇಶಗಳಲ್ಲಿ ಕಾನೂನು ಬಾಹಿರ ಗೋಹತ್ಯೆ ನಡೆಯುತ್ತಿರುವುದು ಹಿಂದೂ ಸಮಾಜದ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುತ್ತಿದೆ” ಎಂದರು.
ಅಲ್ಲದೆ, ಗೋರಕ್ಷಣೆ ಕಾರ್ಯದಲ್ಲಿ ತೊಡಗಿರುವ ಕಾರ್ಯಕರ್ತರ ಮೇಲೆ ಸುಳ್ಳು ಅಟ್ರಾಸಿಟಿ ಪ್ರಕರಣಗಳನ್ನು ದಾಖಲಿಸುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದರು.
ಮನವಿಯ ಪ್ರಮುಖ ಬೇಡಿಕೆಗಳು:
- ಬಕ್ರಿದ್ ಸಂದರ್ಭದಲ್ಲಿ ಅಕ್ರಮ ಗೋಹತ್ಯೆ ಮತ್ತು ಗೋಸಾಗಾಟ ತಡೆಯಲು ವಿಶೇಷ ಪೊಲೀಸ್ ಮತ್ತು ಆಡಳಿತಾತ್ಮಕ ಕ್ರಮಗಳು.
- ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳಲ್ಲಿ 24 ಗಂಟೆ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ವಾಹನಗಳ ಕಟ್ಟುನಿಟ್ಟಿನ ತಪಾಸಣೆ.
- ಪಶು ಸಾಗಾಟಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಮತ್ತು ಪರವಾನಗಿಗಳ ಪರಿಶೀಲನೆ.
- ರಸ್ತೆ ಬದಿ ಮತ್ತು ಜನವಸತಿ ಪ್ರದೇಶಗಳಲ್ಲಿ ಕಾನೂನು ಬಾಹಿರ ಗೋಹತ್ಯೆಗೆ ಅವಕಾಶವಿಲ್ಲದಂತೆ ಕ್ರಮ.
- ಉಲ್ಲಂಘನೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕಾನೂನು ಕ್ರಮ.
- ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತೆ ಒದಗಿಸುವುದು.
- ಸಾರ್ವಜನಿಕ ರಸ್ತೆಗಳಲ್ಲಿ ನಮಾಜ್ ಮಾಡುವುದನ್ನು ತಡೆಯುವುದು.
ಶಾಂತಿ, ಕಾನೂನು ಸುವ್ಯವಸ್ಥೆ ಮತ್ತು ಧಾರ್ಮಿಕ ಭಾವನೆಗಳ ರಕ್ಷಣೆಗಾಗಿ ಸರ್ಕಾರ ತಕ್ಷಣ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಒತ್ತಾಯಿಸಿದೆ.
ಸಂಪರ್ಕ:
ಶ್ರೀ ಮೋಹನ ಗೌಡ
ಸಮನ್ವಯಕರು, ಹಿಂದೂ ರಾಷ್ಟ್ರ ಸಮನ್ವಯ ಸಮಿತಿ
ಸಂಪರ್ಕ: 7204082609










