ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಸುರ್ಜೇವಾಲ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಎಚ್.ಡಿ. ದೇವೇಗೌಡರ ಕುರಿತು ಮೊಸಳೆ ಕಣ್ಣೀರು ಸುರಿಸುವ ಅವಶ್ಯಕತೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಅವರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿ ವಿಜಯೇಂದ್ರ ಅವರು ಈ ವಿಷಯವನ್ನು ತೀವ್ರವಾಗಿ ಟೀಕಿಸಿದ್ದಾರೆ. “ದೇಶದ ಅತ್ಯುನ್ನತ ಪ್ರಧಾನ ಮಂತ್ರಿ ಸ್ಥಾನವನ್ನು ಅಲಂಕರಿಸಿದ ಹೆಮ್ಮೆಯ ಕನ್ನಡಿಗ ಎಚ್.ಡಿ. ದೇವೇಗೌಡರನ್ನು ಪ್ರಧಾನಿ ಪದವಿಯಿಂದ ಕೆಳಗಿಳಿಸಿದ ಕುಖ್ಯಾತಿ ಕಾಂಗ್ರೆಸ್ ಪಕ್ಷದ ಮೇಲಿರುವುದನ್ನು ಅವರು ಮರೆತಂತಿದೆ” ಎಂದು ಅವರು ಆರೋಪಿಸಿದ್ದಾರೆ.
ಮಾನ್ಯ ದೇವೇಗೌಡರನ್ನು ರಾಜಕೀಯ ಜೀವನದುದ್ದಕ್ಕೂ ಕಾಡಿದ್ದು, ಅವರ ಪಕ್ಷವನ್ನು ಇಬ್ಬಾಗ ಮಾಡಲು ಯತ್ನಿಸಿದ್ದು ಕಾಂಗ್ರೆಸ್ ಎಂದು ವಿಜಯೇಂದ್ರ ಹೇಳಿದ್ದಾರೆ. “ಇನ್ನೂ ಕೊಳಕು ರಾಜಕಾರಣ ಮಾಡುವುದನ್ನು ನಿಲ್ಲಿಸದ ಕಾಂಗ್ರೆಸ್ಸಿಗರು, ದೇವೇಗೌಡರ ಕುರಿತು ಕೃತಕ ಕಾಳಜಿ ವ್ಯಕ್ತಪಡಿಸುತ್ತಿರುವುದು ಹಾಸ್ಯಾಸ್ಪದ” ಎಂದು ಅವರು ಟೀಕಿಸಿದ್ದಾರೆ.
ಭಾರತೀಯ ಜನತಾ ಪಾರ್ಟಿ ಸನ್ಮಾನ್ಯ ದೇವೇಗೌಡರನ್ನು ಅತ್ಯಂತ ಗೌರವದಿಂದ ನಡೆಸಿಕೊಂಡಿದೆ ಎಂದು ವಿಜಯೇಂದ್ರ ಹೇಳಿದರು. ಭಾರತದ ಸಮಗ್ರತೆ ಮತ್ತು ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವೇ ಸರಿಯಾದುದು ಎಂಬ ನಂಬಿಕೆಯಿಂದ ದೇವೇಗೌಡರು ಜೆಡಿಎಸ್ ಪಕ್ಷವನ್ನು ಎನ್‌ಡಿಎಗೆ ಸೇರಿಸಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.
“ಇದನ್ನು ಸಹಿಸಲಾರದ ಕಾಂಗ್ರೆಸ್ಸಿಗರು ದೇವೇಗೌಡರ ಹೆಸರನ್ನು ಬಳಸಿಕೊಂಡು ರಾಜಕಾರಣ ಮಾಡುವುದು ನಾಚಿಕೆಗೇಡಿತನದ ಪರಮಾವಧಿ” ಎಂದು ಆಕ್ಷೇಪಿಸಿದ ವಿಜಯೇಂದ್ರ, ಸಂಸತ್ತಿನಲ್ಲಿ ಪ್ರಧಾನಿ ಮೋದಿ ಅವರು ದೇವೇಗೌಡರ ಸೇವೆ ಮತ್ತು ಹಿರಿತನವನ್ನು ಭಾವುಕವಾಗಿ ಪ್ರಶಂಸಿಸಿದ್ದನ್ನು ನೆನಪಿಸಿದರು.
“ರಾಷ್ಟ್ರವನ್ನು ಮುನ್ನಡೆಸುವ ನಿಟ್ಟಿನಲ್ಲಿ ಅವರ ಮಾರ್ಗದರ್ಶನ ಸದಾ ಬೇಕು” ಎಂದು ಪ್ರಧಾನಿ ಹೇಳಿದ್ದನ್ನು ಉಲ್ಲೇಖಿಸಿದ ವಿಜಯೇಂದ್ರ, ದೇವೇಗೌಡರೊಂದಿಗಿನ ಬಿಜೆಪಿಯ ಸಂಬಂಧಕ್ಕೆ ಹುಳಿ ಹಿಂಡುವ ಕಾಂಗ್ರೆಸ್ ನಡೆಯನ್ನು ಕರ್ನಾಟಕ ಜನತೆ ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.










