ಬೆಂಗಳೂರು: ಜಾಲಹಳ್ಳಿಯಲ್ಲಿರುವ ಹೆಚ್‌ಎಂಟಿ ಲಿಮಿಟೆಡ್‌ಗೆ ಸೇರಿದ ಸುಮಾರು 430 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳದಂತೆ ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆಗೆ ಕರ್ನಾಟಕ ಹೈಕೋರ್ಟ್ ಬುಧವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ. ಅದೇ ವೇಳೆ, ಈಗಾಗಲೇ ಮೂರನೇ ವ್ಯಕ್ತಿಗಳಿಗೆ ಮಾರಾಟವಾದ ಭಾಗವನ್ನು ಹೊರತುಪಡಿಸಿ, ಉಳಿದ ಜಮೀನಿನಲ್ಲಿ ಯಾವುದೇ ಮರಗಳನ್ನು ಕತ್ತರಿಸಬಾರದು ಎಂದು ಹೆಚ್‌ಎಂಟಿ ಸಂಸ್ಥೆಗೂ ನ್ಯಾಯಾಲಯ ಸ್ಪಷ್ಟ ನಿರ್ದೇಶನ ನೀಡಿದೆ.
ಬೆಂಗಳೂರು ನಗರದ ಅರಣ್ಯ ಉಪ ಸಂರಕ್ಷಣಾಧಿಕಾರಿ (DCF) ಅವರು ಜೂನ್ 16ರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಹೆಚ್‌ಎಂಟಿ ಲಿಮಿಟೆಡ್ ಮತ್ತು ಹೆಚ್‌ಎಂಟಿ ಮೆಷಿನ್ ಟೂಲ್ಸ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ಸುರಾಜ್ ಗೋವಿಂದರಾಜ್ ಅವರ ಪೀಠ ನಡೆಸಿತ್ತು. ಈ ಆದೇಶದಲ್ಲಿ 430 ಎಕರೆ 21.853 ಗುಂಟೆ ಜಮೀನನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವಂತೆ ಸೂಚಿಸಲಾಗಿತ್ತು.
ಹೆಚ್‌ಎಂಟಿ ಪರ ವಕೀಲರು ನ್ಯಾಯಾಲಯಕ್ಕೆ ಮುಚ್ಚಳಿಕೆ ನೀಡಿ, “ತಮ್ಮ ವಶದಲ್ಲಿರುವ ಉಳಿದ ಜಮೀನನ್ನು ಮಾರಾಟ, ಗುತ್ತಿಗೆ ಅಥವಾ ಪರವಾನಗಿ ಸೇರಿದಂತೆ ಯಾವುದೇ ರೀತಿಯಲ್ಲೂ ಬೇರೆಯವರಿಗೆ ಹಸ್ತಾಂತರಿಸುವುದಿಲ್ಲ. ಆಸ್ತಿಯ ಸ್ವರೂಪವನ್ನು ಬದಲಾಯಿಸುವುದಿಲ್ಲ” ಎಂದು ತಿಳಿಸಿದ್ದಾರೆ.
ನ್ಯಾಯಾಲಯವು ಮುಂದಿನ ಆದೇಶದವರೆಗೆ ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಯು ಜಮೀನನ್ನು ಸ್ವಾಧೀನಪಡಿಸಿಕೊಳ್ಳದಂತೆ ತಡೆ ನೀಡಿದ್ದು, ಹೆಚ್‌ಎಂಟಿ ಸಂಸ್ಥೆಯೂ ಮರಗಳನ್ನು ಕಡಿಯದಂತೆ ನಿರ್ದೇಶಿಸಿದೆ.











