ಬೆಂಗಳೂರು: ಮಳೆ ಬಂದು ಜಲಾಶಯಗಳು ತುಂಬುತ್ತಿವೆ ಎಂದು ಮೈಮರೆಯುವುದು ಬೇಡ. ಮೊದಲು ರೈತರಿಗೆ ನೀರು ಕೊಟ್ಟು ತುಂಬಿಸಬೇಕು. ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಕೂಡಲೇ ನ್ಯಾಯೋಚಿತ ಪರಿಹಾರ ನೀಡಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಕಾವೇರಿ ಕುರಿತ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಮಳೆ ನಮ್ಮ ರಕ್ಷಣೆಗೆ ಬಂದಿದೆ ನಿಜ. ಹಾಗಂತ ಮುಂದಿನ ದಿನಗಳಲ್ಲಿ ನಾವು ಎಚ್ಚರ ತಪ್ಪುವುದು ಬೇಡ. ಕುಡಿಯುವ ನೀರಿನ ಉದ್ದೇಶದ ಜತೆಗೆ ರೈತರಿಗೆ ನೀರು ಕೊಡುವುದು ಸರ್ಕಾರದ ಜವಾಬ್ದಾರಿ. ಸದ್ಯಕ್ಕೆ ಮಳೆ ಬಂತು ಎಂದು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡೆವು ಎನ್ನುವ ವರ್ತನೆ ಬೇಡ” ಎಂದು ಎಚ್ಚರಿಕೆ ನೀಡಿದರು.
ಸರ್ಕಾರ ಬಹಳ ಹಿಂದೆಯೇ ಎಚ್ಚರಿಕೆ ವಹಿಸಬೇಕಿತ್ತು ಎಂದು ಟೀಕಿಸಿದ ಕುಮಾರಸ್ವಾಮಿ, “ಕುಡಿಯುವ ಉದ್ದೇಶಕ್ಕೆ ನೀರು ಬೇಕು, ಬೆಳೆಗಳಿಗೆ ಬಿಡುವುದಿಲ್ಲ ಎನ್ನುವ ನಿರ್ಧಾರದಿಂದ ರೈತರಿಗೆ ಬೆಳೆ ನಷ್ಟವಾಗಿದೆ. ಕಾವೇರಿ ಸೇರಿ ತುಂಗಭದ್ರಾ ವ್ಯಾಪ್ತಿಯಲ್ಲಿ ಕೂಡ ಭತ್ತ ಬೆಳೆಯಬೇಡಿ ಎಂದು ಆದೇಶ ಹೊರಡಿಸಲಾಗಿತ್ತು. ಪರಿಣಾಮವಾಗಿ ಹಾಲಿ ಇದ್ದ ಬೆಳೆ ನಾಶವಾಗಿದೆ. ಈಗ ಮಳೆ ಬಂದರೂ ಭತ್ತದ ಒಟ್ಲು ಬಿಡದ ಕಾರಣಕ್ಕೆ ನಾಟಿ ಮಾಡಲು ಆಗುತ್ತಿಲ್ಲ. ಸರ್ಕಾರ ಸರಿಯಾಗಿ ಅಂದಾಜು ಮಾಡುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ” ಎಂದು ಹೇಳಿದರು.
ತಕ್ಷಣವೇ ಸರ್ಕಾರ ರೈತರ ನೆರವಿಗೆ ಧಾವಿಸಿ ಸೂಕ್ತ ಹಾಗೂ ನ್ಯಾಯಸಮ್ಮತ ಪರಿಹಾರ ಘೋಷಿಸಬೇಕು ಎಂದು ಅವರು ಒತ್ತಾಯ ಮಾಡಿದರು.
ಮೇಕೆದಾಟು ಯೋಜನೆ: ದೇವೇಗೌಡರ ಸಲಹೆ ಪರಿಗಣಿಸಿ
ಮೇಕೆದಾಟು ಯೋಜನೆಗೆ ಪರಿಷ್ಕೃತ ಸಮಗ್ರ ಯೋಜನಾ ವರದಿ (ಡಿಪಿಆರ್) ಸಲ್ಲಿಸುವಂತೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಸೂಚಿಸಿದೆ ಎಂದು ನೆನಪಿಸಿದ ಕುಮಾರಸ್ವಾಮಿ, ಈ ಯೋಜನೆಯ ಬಗ್ಗೆ ಹಿರಿಯ ನಾಯಕ ಹೆಚ್.ಡಿ. ದೇವೇಗೌಡರು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಮಹತ್ವದ ಸಲಹೆಗಳನ್ನು ನೀಡಿದ್ದರು. ಪ್ರಧಾನಿ ಹಾಗೂ ಕೇಂದ್ರ ಜಲಶಕ್ತಿ ಸಚಿವರೊಂದಿಗೆ ಸಮಾಲೋಚನೆ ನಡೆಸಿದ್ದರು. ಮೊದಲ ಹಂತದಲ್ಲಿ 30 ಟಿಎಂಸಿ ನೀರು ನಿಲ್ಲಿಸಿಕೊಳ್ಳಲು ಗೇಟ್ ಅಳವಡಿಸಬೇಕು ಎಂದು ದೇವೇಗೌಡರು ಸಲಹೆ ನೀಡಿದ್ದರು. ಅವರ ಸಲಹೆಗಳನ್ನು ಸರ್ಕಾರ ಪರಿಗಣಿಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.
ಸ್ವಾತಂತ್ರ್ಯಪೂರ್ವ ಕಾಲದಿಂದಲೂ ತಮಿಳುನಾಡು ತನ್ನ ಪಾಲು ಪಡೆಯುತ್ತಾ ಬಂದಿದೆ. ಈ ಸಮಸ್ಯೆಯನ್ನು ನಿರಂತರವಾಗಿ ಬಿಂಬಿಸುತ್ತಾ ಬಂದಿದೆ. ಕರ್ನಾಟಕದ ಜಲಾಶಯಗಳಲ್ಲಿ ನೀರು ಬರಿದಾಗಿದೆ ಎನ್ನುವಾಗಲೂ ಅನಗತ್ಯವಾಗಿ ಪಾಠ ಮಾಡುತ್ತಿದೆ. ತನಗೆ ಕೃಷಿ ಉದ್ದೇಶಕ್ಕೆ ನೀರು ಬೇಕೋ ಅಥವಾ ಕುಡಿಯುವ ಉದ್ದೇಶಕ್ಕೆ ಬೇಕೋ ಎನ್ನುವ ಬಗ್ಗೆ ಸ್ಪಷ್ಟತೆ ನೀಡುತ್ತಿಲ್ಲ ಎಂದು ಟೀಕಿಸಿದ ಅವರು, “ಈಗ ಮಳೆ ಬಿದ್ದಿದೆ, ಸಮಸ್ಯೆ ಬಗೆಹರಿದಿದೆ ಎಂದು ಭಾವಿಸುವುದು ಬೇಡ. ತಾತ್ಕಾಲಿಕವಾಗಿ ಮಾತ್ರ ಸಮಸ್ಯೆ ಕೊಂಚ ಮಟ್ಟಿಗೆ ಬಗೆಹರಿದಿದೆ. ಮುಂದಿನ ದಿನಗಳಲ್ಲಿ ಮಳೆ ಹೀಗೆಯೇ ಇರುತ್ತದೆ ಎಂದು ನಂಬುವಂತಿಲ್ಲ” ಎಂದು ಎಚ್ಚರಿಕೆ ನೀಡಿದರು.











