ಬೆಂಗಳೂರು: ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ನಾಗರಿಕರು ತಮ್ಮ ಸಮಸ್ಯೆಗಳು, ಅರ್ಜಿಗಳು ಹಾಗೂ ದೂರುಗಳಿಗಾಗಿ ವಿವಿಧ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ‘ನಾಗರಿಕ ಸಹಾಯ ಕೇಂದ್ರ’ ಸ್ಥಾಪಿಸಲು ಚಿಂತನೆ ನಡೆಸಲಾಗಿದೆ.
ಮಹದೇವಪುರ ವಲಯ ಕಚೇರಿಯಲ್ಲಿ ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ವಿಸ್ತೃತ ಚರ್ಚೆ ನಡೆಯಿತು. ನಾಗರಿಕರಿಂದ ಅರ್ಜಿಗಳು ಹಾಗೂ ದೂರುಗಳನ್ನು ಒಂದೇ ಸ್ಥಳದಲ್ಲಿ ಸ್ವೀಕರಿಸಿ, ಸಂಬಂಧಪಟ್ಟ ಇಲಾಖೆಗೆ ರವಾನಿಸಿ, ಸಮಸ್ಯೆ ಪರಿಹಾರವಾಗುವವರೆಗೆ ನಿರಂತರವಾಗಿ ಮೇಲ್ವಿಚಾರಣೆ ನಡೆಸುವ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ರೂಪಿಸುವ ಕುರಿತು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.

ಒಂದೇ ಕಡೆ ಅರ್ಜಿ, ದೂರು ಸ್ವೀಕಾರ
ಆಸ್ತಿ ತೆರಿಗೆ, ನಗರ ಯೋಜನೆ, ರಸ್ತೆ ಮತ್ತು ಮೂಲಸೌಕರ್ಯ, ಘನ ತ್ಯಾಜ್ಯ ನಿರ್ವಹಣೆ, ಆರೋಗ್ಯ, ತೋಟಗಾರಿಕೆ, ವಿದ್ಯುತ್, ಟಿಡಿಆರ್ ಹಾಗೂ ಮಳೆನೀರು ಕಾಲುವೆ ಸೇರಿದಂತೆ ಪಾಲಿಕೆಯ ವಿವಿಧ ವಿಭಾಗಗಳಿಗೆ ಸಂಬಂಧಿಸಿದ ಅರ್ಜಿಗಳು ಮತ್ತು ದೂರುಗಳನ್ನು ಒಂದೇ ಸ್ಥಳದಲ್ಲಿ ಸ್ವೀಕರಿಸುವ ವ್ಯವಸ್ಥೆ ರೂಪಿಸಲು ಉದ್ದೇಶಿಸಲಾಗಿದೆ.
ನಾಗರಿಕರು ನೇರವಾಗಿ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸುವುದರ ಜೊತೆಗೆ ಅಂಚೆ, ಇ-ಮೇಲ್, ದೂರವಾಣಿ, ವಾಟ್ಸ್‌ಆಪ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಸಲ್ಲಿಸುವ ದೂರುಗಳನ್ನೂ ದಾಖಲಿಸಿಕೊಂಡು ಸಂಬಂಧಪಟ್ಟ ಇಲಾಖೆಗೆ ರವಾನಿಸಲಾಗುವುದು.
ಪ್ರತಿ ಅರ್ಜಿಗೂ ಪ್ರತ್ಯೇಕ ಸ್ವೀಕೃತಿ ಸಂಖ್ಯೆ
ನಾಗರಿಕರು ಸಲ್ಲಿಸುವ ಪ್ರತಿಯೊಂದು ಅರ್ಜಿ ಹಾಗೂ ದೂರಿಗೂ ವಿಶಿಷ್ಟ ಸ್ವೀಕೃತಿ ಸಂಖ್ಯೆ ನೀಡಲು ಉದ್ದೇಶಿಸಲಾಗಿದೆ. ಅರ್ಜಿಗೆ ಸಂಬಂಧಿಸಿದ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲಾಗುವುದು. ಸ್ವೀಕೃತಿ ಸಂಖ್ಯೆಯ ಮೂಲಕ ಅರ್ಜಿಯ ಸ್ಥಿತಿ, ಯಾವ ವಿಭಾಗಕ್ಕೆ ರವಾನಿಸಲಾಗಿದೆ ಹಾಗೂ ಯಾವ ಅಧಿಕಾರಿಯ ಪರಿಶೀಲನೆಯಲ್ಲಿದೆ ಎಂಬ ಮಾಹಿತಿಯನ್ನು ನಾಗರಿಕರು ತಿಳಿದುಕೊಳ್ಳಲು ಸಾಧ್ಯವಾಗಲಿದೆ.
24×7 ನಿಯಂತ್ರಣ ಕೊಠಡಿ
ನಾಗರಿಕ ಸಹಾಯ ಕೇಂದ್ರದ ಕಾರ್ಯನಿರ್ವಹಣೆಗೆ 24 ಗಂಟೆಯೂ ಕಾರ್ಯನಿರ್ವಹಿಸುವ ನಿಯಂತ್ರಣ ಕೊಠಡಿ ಸ್ಥಾಪಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಸಾರ್ವಜನಿಕರಿಂದ ಸ್ವೀಕರಿಸಲಾದ ದೂರುಗಳನ್ನು ತಕ್ಷಣ ಸಂಬಂಧಪಟ್ಟ ವಿಭಾಗಗಳಿಗೆ ರವಾನಿಸುವುದರ ಜೊತೆಗೆ, ಅವುಗಳ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸುವ ವ್ಯವಸ್ಥೆ ರೂಪಿಸಲಾಗುವುದು.
ನಿಗದಿತ ಕಾಲಮಿತಿಯಲ್ಲಿ ಸಮಸ್ಯೆ ಪರಿಹಾರವಾಗದಿದ್ದರೆ, ಪ್ರಕರಣವನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳುವಂತೆ ಮೇಲ್ವಿಚಾರಣೆ ನಡೆಸಲಾಗುವುದು.
ಸಮಸ್ಯೆ ಬಗೆಹರಿಯುವವರೆಗೆ ಮೇಲ್ವಿಚಾರಣೆ
ದೂರು ಸ್ವೀಕರಿಸಿ ಸಂಬಂಧಪಟ್ಟ ಇಲಾಖೆಗೆ ರವಾನಿಸುವುದಕ್ಕೆ ಮಾತ್ರ ನಾಗರಿಕ ಸಹಾಯ ಕೇಂದ್ರದ ಜವಾಬ್ದಾರಿ ಸೀಮಿತವಾಗಿರುವುದಿಲ್ಲ. ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯುವವರೆಗೆ ಅದರ ಪ್ರಗತಿಯನ್ನು ಮೇಲ್ವಿಚಾರಣೆ ಮಾಡುವ ವ್ಯವಸ್ಥೆ ರೂಪಿಸಲಾಗುವುದು. ಪರಿಹಾರದ ಬಳಿಕ ನಾಗರಿಕರಿಂದ ಪ್ರತಿಕ್ರಿಯೆ ಪಡೆಯಲು ಅವಕಾಶ ಕಲ್ಪಿಸಲಾಗುವುದು.
ಸಮರ್ಪಕ ಪರಿಹಾರ ದೊರೆಯದ ಪ್ರಕರಣಗಳನ್ನು ಮೇಲ್ಮಟ್ಟದ ಪರಿಶೀಲನೆಗೆ ಕಳುಹಿಸಿ ಸೂಕ್ತ ಕ್ರಮ ಕೈಗೊಳ್ಳುವ ವ್ಯವಸ್ಥೆಯನ್ನೂ ರೂಪಿಸಲಾಗುವುದು.
ಬಗೆಹರಿಯದ ಸಮಸ್ಯೆಗಳಿಗೆ ಸಾರ್ವಜನಿಕ ಅಹವಾಲು ಸಭೆ
ಸಾಮಾನ್ಯ ಆಡಳಿತಾತ್ಮಕ ಹಂತದಲ್ಲಿ ಬಗೆಹರಿಯದ ಸಮಸ್ಯೆಗಳನ್ನು ವಲಯವಾರು ಸಾರ್ವಜನಿಕ ಅಹವಾಲು ಸಭೆಗಳಲ್ಲಿ ಪರಿಶೀಲಿಸಿ ಪರಿಹರಿಸುವ ವ್ಯವಸ್ಥೆ ರೂಪಿಸಲು ಚಿಂತಿಸಲಾಗಿದೆ. ವಿವಿಧ ಇಲಾಖೆಗಳ ಸಮನ್ವಯ, ತಾಂತ್ರಿಕ ಪರಿಶೀಲನೆ ಅಥವಾ ಹಿರಿಯ ಅಧಿಕಾರಿಗಳ ನಿರ್ಧಾರ ಅಗತ್ಯವಿರುವ ಪ್ರಕರಣಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಸಮ್ಮುಖದಲ್ಲಿ ಪರಿಶೀಲಿಸಿ ಪರಿಹಾರ ಕಲ್ಪಿಸಲಾಗುವುದು.
ಪ್ರತಿ ಅರ್ಜಿಗೂ ಅಧಿಕಾರಿ, ಕಾಲಮಿತಿ ನಿಗದಿ
ಪ್ರತಿಯೊಂದು ಅರ್ಜಿಯ ಪರಿಹಾರಕ್ಕೆ ಸಂಬಂಧಿಸಿದ ವಿಭಾಗ, ಜವಾಬ್ದಾರಿಯುತ ಅಧಿಕಾರಿ ಹಾಗೂ ನಿಗದಿತ ಕಾಲಮಿತಿಯನ್ನು ನಮೂದಿಸುವ ವ್ಯವಸ್ಥೆ ಜಾರಿಗೆ ತರಲು ಉದ್ದೇಶಿಸಲಾಗಿದೆ. ನಿಗದಿತ ಅವಧಿಯೊಳಗೆ ಕ್ರಮ ಕೈಗೊಳ್ಳಲಾಗುತ್ತಿದೆಯೇ ಎಂಬುದನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುವುದು.
ಅಲ್ಲದೆ, ಅರ್ಜಿಗಳು ಹಾಗೂ ದಾಖಲೆಗಳನ್ನು ಸುರಕ್ಷಿತ ಡಿಜಿಟಲ್ ವ್ಯವಸ್ಥೆಯಲ್ಲಿ ಸಂಗ್ರಹಿಸುವ ಮೂಲಕ ಹಳೆಯ ದಾಖಲೆಗಳನ್ನು ಅಗತ್ಯವಿದ್ದಾಗ ತ್ವರಿತವಾಗಿ ಪತ್ತೆಹಚ್ಚಲು ಅನುಕೂಲವಾಗಲಿದೆ.
ಹಿರಿಯ ಅಧಿಕಾರಿಗಳಿಗೆ ಡ್ಯಾಶ್‌ಬೋರ್ಡ್ ವ್ಯವಸ್ಥೆ
ನಾಗರಿಕ ಸಹಾಯ ಕೇಂದ್ರಕ್ಕೆ ಬಂದಿರುವ ಒಟ್ಟು ಅರ್ಜಿಗಳು, ಪರಿಹಾರಗೊಂಡ ಪ್ರಕರಣಗಳು, ಪ್ರಗತಿಯಲ್ಲಿರುವ ಅರ್ಜಿಗಳು ಹಾಗೂ ಬಾಕಿ ಇರುವ ಪ್ರಕರಣಗಳ ಮಾಹಿತಿಯನ್ನು ಒಂದೇ ಡ್ಯಾಶ್‌ಬೋರ್ಡ್ ಮೂಲಕ ವೀಕ್ಷಿಸಲು ಸಾಧ್ಯವಾಗುವ ವ್ಯವಸ್ಥೆ ರೂಪಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಇದರಿಂದ ವಿವಿಧ ವಿಭಾಗಗಳಲ್ಲಿ ನಾಗರಿಕರ ಸಮಸ್ಯೆಗಳ ಪರಿಹಾರದ ಸ್ಥಿತಿಯನ್ನು ಹಿರಿಯ ಅಧಿಕಾರಿಗಳು ನಿರಂತರವಾಗಿ ಪರಿಶೀಲಿಸಲು ಹಾಗೂ ಬಾಕಿ ಇರುವ ಪ್ರಕರಣಗಳನ್ನು ಗುರುತಿಸಿ ತ್ವರಿತ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ.
‘ಸಮಸ್ಯೆ ಪರಿಹಾರವಾಗುವವರೆಗೆ ಜವಾಬ್ದಾರಿ’
“ನಾಗರಿಕರ ಸಮಸ್ಯೆಯನ್ನು ದಾಖಲಿಸಿ ಮತ್ತೊಂದು ವಿಭಾಗಕ್ಕೆ ರವಾನಿಸುವುದರಿಂದ ಜವಾಬ್ದಾರಿ ಮುಗಿಯುವುದಿಲ್ಲ. ಸಮಸ್ಯೆ ಪರಿಹಾರವಾಗುವವರೆಗೆ ಅದರ ಪ್ರಗತಿಯನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ, ಅಂತಿಮವಾಗಿ ನಾಗರಿಕರಿಗೆ ಪರಿಹಾರ ದೊರೆತಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಸಾರ್ವಜನಿಕರು ತಮ್ಮ ಅರ್ಜಿಯ ಸ್ಥಿತಿ ತಿಳಿದುಕೊಳ್ಳಲು ಅನಗತ್ಯವಾಗಿ ಕಚೇರಿಗಳಿಗೆ ಅಲೆದಾಡುವಂತಾಗಬಾರದು,” ಎಂದು ಆಯುಕ್ತ ಡಿ.ಎಸ್. ರಮೇಶ್ ಅಧಿಕಾರಿಗಳಿಗೆ ಸೂಚಿಸಿದರು.
ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ನಾಗರಿಕರಿಗೆ ಸರಳ, ವೇಗದ ಹಾಗೂ ಪಾರದರ್ಶಕ ಸೇವೆ ಒದಗಿಸುವುದು ಪ್ರಮುಖ ಉದ್ದೇಶವಾಗಿದೆ. ‘ಒಂದೇ ಕಡೆ ಅರ್ಜಿ – ನಿಗದಿತ ಅಧಿಕಾರಿಗೆ ರವಾನೆ – ಕಾಲಮಿತಿಯಲ್ಲಿ ಪರಿಹಾರ – ನಿರಂತರ ಮೇಲ್ವಿಚಾರಣೆ – ನಾಗರಿಕರ ಪ್ರತಿಕ್ರಿಯೆ’ ಎಂಬ ಸಮಗ್ರ ವ್ಯವಸ್ಥೆ ರೂಪಿಸುವ ಮೂಲಕ ನಾಗರಿಕ ಸ್ನೇಹಿ ಆಡಳಿತವನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಲಾಯಿತು.
ಸಭೆಯಲ್ಲಿ ಅಪರ ಆಯುಕ್ತರು (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್, ಜಂಟಿ ಆಯುಕ್ತ ಡಾ. ದಾಕ್ಷಾಯಿಣಿ ಕೆ., ವಿವಿಧ ವಿಭಾಗಗಳ ಇಲಾಖಾ ಮುಖ್ಯಸ್ಥರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.












